Asianet Suvarna News Asianet Suvarna News

Karnataka Coastal Districts Rain; ಮಹಾಮಳೆಗೆ ಬೆಚ್ಚಿಬಿದ್ದ ಕರಾವಳಿ, ರೈಲು ಸಂಚಾರ ಬಂದ್!

  • ಮಹಾಮಳೆಗೆ ನಲುಗಿದ ಕರಾವಳಿ ಜಿಲ್ಲೆಗಳು
  • ದಕ್ಷಿಣ ಕನ್ನಡ ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ
  • ಭಾಗಶಃ ಮುಳುಗಿದ ಮನೆಗಳು
heavy rain in coastal karnataka district including dakshina kannada udupi and uttarakannada gow
Author
Bengaluru, First Published Jun 30, 2022, 12:54 PM IST

ಮಂಗಳೂರು (ಜೂನ್ 30): ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ , ಉತ್ತರ ಕನ್ನಡ ಜಿಲ್ಲೆಯಲ್ಲಿ  ಕಳೆದ 2 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಂಗಳವಾರ ಸಂಜೆಯಿಂದ ಆರಂಭವಾದ ಮಳೆ ನಿರಂತರವಾಗಿ ಸುರಿದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಗಳು ಮುಳುಗಡೆಯಾಗಿದೆ.

ಮಳೆಯ ಪರಿಣಾಮ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆಗಿದೆ. ಮಂಗಳೂರಿನ ಪಡೀಲು ಬಳಿ ಗುಡ್ಡ ಕುಸಿದು ರೈಲು ಹಳಿಯ ಮೇಲೆ ಮಣ್ಣು ಕುಸಿದು ಮಂಗಳೂರು-ಸುಬ್ರಮಣ್ಯ ರೈಲು ಸಂಚಾರ ಕೂಡ ಸ್ಥಗಿತಗೊಂಡಿದೆ. ಎರಡು ರೈಲುಗಳ ಸಂಚಾರ ರೈಲ್ವೇ ಇಲಾಖೆ ಸ್ಥಗಿತಗೊಳಿಸಿದ್ದು,  ಎರಡು ವಿಶೇಷ ರೈಲು(.06488 ಮತ್ತು .06489) ಸಂಚಾರ ಸ್ಥಗಿತಗೊಂಡಿದ್ದು. ಹಳಿಯ ಮೇಲೆ ಬಿದ್ದಿರುವ ಮರ ಮತ್ತು ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಬೆಂಗ್ಳೂರಲ್ಲಿ ವರುಣನ ಆರ್ಭಟಕ್ಕೆ ವಾಹನ ಸವಾರರ ಪರದಾಟ: ಇಂದೂ ಕೂಡ ಭಾರೀ ಮಳೆ..!

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ,  ಪುತ್ತೂರು, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಕೆಲವೆಡೆ ಮಧ್ಯರಾತ್ರಿಯಿಂದಲೇ  ನಿರಂತರ ಮಳೆಯಾಗುತ್ತಿದ್ದು, ಇನ್ನೂ ನಿಂತಿಲ್ಲ. ಇನ್ನು ಮಂಗಳೂರಿನ ಕೊಟ್ಟಾರ ಚೌಕಿ, ಮಲೆಮಾರ್, ದೇರೆಬೈಲು ಸೇರಿದಂತೆ ಸಾಕಷ್ಟು ಕಡೆ ನುಗ್ಗಿದ ನೀರು ನುಗ್ಗಿದ್ದು ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ತಗ್ಗು ಪ್ರದೇಶಗಳು ಮುಳುಗಿ ಹೋಗಿದ್ದು, ಜನರು ಪರದಾಡುತ್ತಿದ್ದಾರೆ. 

ವಿಪರೀತ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಂಗಳೂರಿನ ಹಲವು ತಗ್ಗು ಪ್ರದೇಶಗಳ ಮನೆಗಳಿಗೆ ನೀರು ತುಂಬಿರುವ ಪರಿಣಾಮ 5 ರಿಂದ 6 ಮನೆಗಳು ಭಾಗಶಃ ಮುಳುಗಡೆಯಾಗಿದೆ. ಇದರಿಂದ ಆಕ್ರೋಶಗೊಂಡಿರುವ ಸ್ಥಳೀಯರು ರಾಜ ಕಾಲುವೆ ಸರಿ ಮಾಡಿಲ್ಲ. ಜನಪ್ರತಿನಿಧಿಗಳು ಈವರೆಗೂ ಇಲ್ಲಿಗೆ ಆಗಮಿಸಿಲ್ಲ ಎಂದಿದ್ದಾರೆ. ಇಂದು ಪೂರ್ತಿ ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಸಮುದ್ರ, ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಕರಾವಳಿಯಲ್ಲಿ ಇಂದು, ನಾಳೆ ಭಾರೀ ಮಳೆ: ಆರೆಂಜ್‌ ಅಲರ್ಟ್‌ ಘೋಷಣೆ

ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ:
ಉಡುಪಿ ಜಿಲ್ಲೆಯಲ್ಲಿ ಕೂಡ ಧಾರಾಕಾರ ಮಳೆ ಸುರಿಯುತ್ತಿದೆ. ಮಂಗಳವಾರ ರಾತ್ರಿಯಿಂದಲೇ ಒಂದು ಕ್ಷಣ ಬಿಡದೆ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಆರೆಂಜ್ ಘೋಷಿಸಿದ್ದು, 200ಮಿಮೀ ವರೆಗೂ  ಮಳೆ ಸುರಿಯುವ ಸಾಧ್ಯತೆ ಇದೆ. ನಗರದ ತಗ್ಗು ಪ್ರದೇಶಗಳು ನೀರು ನುಗ್ಗುವ ಭೀತಿಯಲ್ಲಿದೆ, ರಾಷ್ಟ್ರೀಯ ಹೆದ್ದಾರಿಯ ಆಯಕಟ್ಟಿನ ಸ್ಥಳಗಳಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿದ್ದು ಸಂಚಾರ ಕಷ್ಟ ಸಾಧ್ಯವಾಗಿದೆ. ಇಂದು ಮತ್ತು ನಾಳೆ ಮಳೆ ಮುಂದುವರೆಯುವ ಸಾಧ್ಯತೆ ಇದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜೂ.30 ಮತ್ತು ಜುಲೈ 1ರಂದು ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌ ಮುಂದುವರಿಯಲಿದ್ದು, ಜುಲೈ 4ರವರೆಗೆ ಎಲ್ಲೋ ಅಲರ್ಟ್ ಘೋಷಣೆಯಾಗಿದೆ. ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಬುಧವಾರ ದ.ಕ. ಜಿಲ್ಲೆಯಲ್ಲಿ ದಿನದ ಸರಾಸರಿ ಮಳೆ 42.3 ಮಿಲಿ ಮೀಟರ್‌ ಆಗಿದೆ. ಜಿಲ್ಲೆಯ ಬೆಳ್ತಂಗಡಿ 36.6 ಮಿ.ಮೀ, ಬಂಟ್ವಾಳ 68.7 ಮಿ.ಮೀ, ಮಂಗಳೂರು 28.5 ಮಿ.ಮೀ, ಪುತ್ತೂರು 39.7 ಮಿ.ಮೀ, ಸುಳ್ಯ 32.5 ಮಿ.ಮೀ, ಮೂಡುಬಿದಿರೆ 56.5 ಮಿ.ಮೀ, ಹಾಗೂ ಕಡಬದಲ್ಲಿ 43.4 ಮಿ.ಮೀ. ಮಳೆ ದಾಖಲಾಗಿದೆ. ಇನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿಯಲ್ಲಿ 265ಮಿ.ಮೀ, ಶಿವಪುರದಲ್ಲಿ 189ಮಿ.ಮೀ ಹಾಗೂ ವರಂಗಾದಲ್ಲಿ 183 ಮಿ.ಮೀ ಮಳೆಯಾಗಿದೆ.  

Follow Us:
Download App:
  • android
  • ios