Asianet Suvarna News Asianet Suvarna News

Ramanagara: ಮಳೆ ಅಬ್ಬರಕ್ಕೆ ಮತ್ತೆ ನಲುಗಿದ ಬೊಂಬೆನಾಡು: ರಸ್ತೆ, ಜಮೀನು, ಶಾಲೆ ಜಲಾವೃತ

ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸತತ ಮಳೆಯಿಂದಾಗಿ ಕೆರೆಗಳ ಕೋಡಿ ಒಡೆದಿದ್ದು, ಕೆರೆಯಿಂದ ಹೊರಗೆ ಹರಿದ ನೀರಿನಿಂದಾಗಿ ರಸ್ತೆ ಮತ್ತು ಜಮೀನುಗಳು ಜಲಾವೃತವಾಗಿವೆ. 

heavy rain in channapatna district gvd
Author
First Published Oct 17, 2022, 9:21 PM IST

ಚನ್ನಪಟ್ಟಣ (ಅ.17): ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸತತ ಮಳೆಯಿಂದಾಗಿ ಕೆರೆಗಳ ಕೋಡಿ ಒಡೆದಿದ್ದು, ಕೆರೆಯಿಂದ ಹೊರಗೆ ಹರಿದ ನೀರಿನಿಂದಾಗಿ ರಸ್ತೆ ಮತ್ತು ಜಮೀನುಗಳು ಜಲಾವೃತವಾಗಿವೆ. ಎರಡು ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ನಲುಗಿ ಹೋಗಿದ್ದ ಜನ ಸುಧಾರಿಸಿಕೊಳ್ಳುವ ಮುನ್ನವೇ ಮತ್ತೆ ಭಾರಿ ಮಳೆಯಾಗಿದ್ದು, ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ಹಲವು ಕಡೆ ಮನೆ, ಶಾಲೆಗಳಿಗೆ ನೀರು ನುಗ್ಗಿದ್ದರೆ, ರಸ್ತೆಗಳು ಜಲಾವೃತವಾದ ಕಾರಣ ಜನ ಪರಾರ‍ಯಯ ರಸ್ತೆಗಳ ಮೂಲಕ ಸಂಚರಿಸುವಂತಾಗಿದೆ. ತಾಲೂಕಿನ ಜೀವನಾಡಿಯಾದ ಕಣ್ವ ಮತ್ತು ಇಗ್ಗಲೂರು ಜಲಾಶಯ ಭರ್ತಿಯಾಗಿದೆ. ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ಕೆಲವೆಡೆ ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಹಾನಿಯಾಗಿದೆ.

ಸಿಲುಕಿದ ಲಾರಿ, ಬೈಕ್‌ ಸವಾರರ ರಕ್ಷಣೆ: ಹೊಂಗನೂರು ಕೆರೆ ಭರ್ತಿಯಾಗಿ ಕೋಡಿ ಹರಿದ ಪರಿಣಾಮ ಚನ್ನಪಟ್ಟಣ- ಹಲಗೂರು ರಾಜ್ಯ ಹೆದ್ದಾರಿ ಜಲಾವೃತವಾಗಿದೆ. ರಸ್ತೆ ಮೇಲೆ ನೀರು ರಭಸವಾಗಿ ಹರಿಯುತ್ತಿದೆ. ಮುಂಜಾನೆ ರಸ್ತೆಯಲ್ಲಿ ಸಂಚರಿಸುವಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಬೈಕ್‌ ಸವಾರರನ್ನು ರಕ್ಷಿಸಲಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸವಾರರನ್ನು ರಕ್ಷಿಸಿದ್ದಾರೆ. ಇನ್ನು ಇದೇ ರಸ್ತೆಯಲ್ಲಿ ದಿನಸಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ನೀರಿನ ಪ್ರವಾಹದಲ್ಲಿ ಸಿಲುಕಿಕೊಂಡಿದೆ. ಜೆಸಿಬಿ ಮತ್ತು ಕ್ರೈನ್‌ ಸಹಾಯದಿಂದ ಲಾರಿಯನ್ನು ಹೊರತೆಗೆಯಲಾಗಿದೆ. ಕೆರೆ ಕೋಡಿ ಒಡೆದು ರಸ್ತೆ ಜಲಾವೃತವಾಗಿರುವ ಕಾರಣ ಪ್ರಯಾಣಿಕರು ಬದಲಿ ಮಾರ್ಗದಲ್ಲಿ ಸಂಚರಿಸುವಂತಾಗಿದೆ.

ಪಕ್ಷ​ದೊ​ಳಗೆ ಭಿನ್ನ​ಮ​ತೀಯ ಚಟು​ವ​ಟಿಕೆ : ಕೈ ನಾಯ​ಕ​ರಿಂದ ಡಿಕೆಶಿ ಭೇಟಿ

ಜಮೀನು ಜಲಾವೃತ: ಕೆ.ಜಿ.ಮಹಡಿ, ಬಿ.ವಿ.ಹಳ್ಳಿ, ಎಸ್‌.ಎಂ.ಹಳ್ಳಿ, ಸುಳ್ಳೇರಿ ಮತ್ತಿತರೆ ಗ್ರಾಮಗಳಲ್ಲಿ ಜಮೀನುಗಳು ಜಲಾವೃತವಾಗಿದ್ದು, ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದೆ. ಸುಳ್ಳೇರಿ ಕೆರೆಯ ಕೋಡಿ ಹರಿದ ಪರಿಣಾಮ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಎಸ್‌.ಎಂ.ಹಳ್ಳಿದಲ್ಲಿ ಮಳೆ ನೀರು ಹರಿದು ಹೋಗಲು ರಸ್ತೆಯನ್ನು ಅಗೆದು ನೀರು ಹರಿಯಲು ಅವಕಾಶ ಮಾಡಿಕೊಡಲಾಗಿದೆ.ವರುಣನ ಆರ್ಭಟಕ್ಕೆ ರೈತರು ಕಂಗಲಾಗಿದ್ದಾರೆ.

ಶಾಲೆಗಳಿಗೆ ನುಗ್ಗಿದ ನೀರು: ತಾಲೂಕಿನ ನೀಲಸಂದ್ರ ಮತ್ತು ಎಸ್‌.ಎಂ.ಹಳ್ಳಿ ಗ್ರಾಮದ ಸರಕಾರಿ ಶಾಲೆ ಆವರಣಕ್ಕೆ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಶಾಲೆಯ ಆವರಣದಲ್ಲಿ ಸುಮಾರು 3ಅಡಿಗೂ ಹೆಚ್ಚು ನೀರು ನಿಂತಿದೆ. ಶಾಲಾ ಕೊಠಡಿಗಳಿಗೂ ನೀರು ನುಗ್ಗಿದ್ದು, ಸಮಸ್ಯೆ ಸೃಷ್ಟಿಸಿದೆ. ಒಟ್ಟಾರೆಯಾಗಿ ಮಳೆಯ ಅಬ್ಬರಕ್ಕೆ ಬೊಂಬೆನಾಡು ಮತ್ತೊಮ್ಮೆ ನಲುಗಿದೆ.

ದುಮ್ಮುಕ್ಕಿ ಹರಿಯುತ್ತಿರುವ ಕಣ್ವ-ಶಿಂಷಾ: ತಾಲೂಕಿನ ಜೀವನಾಡಿಯಾದ ಕಣ್ವ ಮತ್ತು ಇಗ್ಗಲೂರು ಬ್ಯಾರೇಜ್‌ನಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿವೆ. ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹೊರಬಿಡಲಾಗಿದೆ. ಕಣ್ವ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ಶನಿವಾರ 2 ಸಾವಿರ ಕ್ಯೂಸೆಕ್‌ ನೀರು ಹೊರಬಿಡಲಾಗಿದೆ. ಭಾನುವಾರು 1,500 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗಿದೆ. ಕಣ್ವ ಜಲಾಶಯದ ಒಳಹರಿವು ಭಾನುವಾರ 1,500 ಕ್ಯುಸೆಕ್‌ ಇದ್ದು, ಅಷ್ಟೇ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಬಿಟ್ಟಿರುವ ಪರಿಣಾಮ ಅಬ್ಬೂರು ಗ್ರಾಮದ ವ್ಯಾಸರಾಜ ಮಠ ಮತ್ತೆ ಜಲಾವೃತಗೊಂಡಿದೆ. ಅಬ್ಬೂರು-ಮಾಕಳಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ನದಿಪಾತ್ರದ ಹಲವು ಜಮೀನುಗಳು ಜಲಾವೃತವಾಗಿದೆ.

Ramanagara: ಅನ​ಧಿ​ಕೃತ ಬ್ಯಾನರ್‌, ಫ್ಲೆಕ್ಸ್‌ ಅಳ​ವ​ಡಿ​ಸಿ​ದರೆ ಜೈಲು ಶಿಕ್ಷೆ!

ಇಗ್ಗಲೂರು ಜಲಾಶಯ 52 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ: ತಾಲೂಕಿನ ಇಗ್ಗಲೂರು ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಎಚ್‌.ಡಿ.ದೇವೇಗೌಡ ಬ್ಯಾರೇಜ್‌ನಿಂದಲೂ ಅಪಾರ ಪ್ರಮಾಣದ ನೀರುನ್ನು ಹೊರಕ್ಕೆ ಬಿಡಲಾಗುತ್ತಿದೆ. ಶನಿವಾರ ಜಲಾಶಯದಿಂದ ಸುಮಾರು 60ಸಾವಿರ ಕ್ಯುಸೆಕ್‌ ನೀರು ಹೊರಬಿಡಲಾಗಿದ್ದರೆ. ಭಾನುವಾರ ಸುಮಾರು 52ಸಾವಿರ ಕ್ಯುಸೆಕ್‌ ಒಳಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಎರಡು ಜಲಾಶಯಗಳಲ್ಲೂ ಒಳಹರಿವು ಮತ್ತು ಹೊರಹರಿವಿನ ಪ್ರಮಾಣ ಸಮನಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ.

Follow Us:
Download App:
  • android
  • ios