Asianet Suvarna News Asianet Suvarna News

ಬೆಂಗ್ಳೂರಲ್ಲಿ ಮತ್ತೆ ವರುಣನ ಅಬ್ಬರ: ಕೇವಲ 2 ತಾಸಿನಲ್ಲಿ 55 ಮಿ.ಮೀ. ಸುರಿದ ಮಳೆ

ಒಂದೂವರೆ ವಾರದಿಂದ ಬಿಡುವು ನೀಡಿದ್ದ ವರುಣ| ಉಕ್ಕಿ ಹರಿದ ಒಳ ಚರಂಡಿ ನೀರು| ಬೊಮ್ಮನಹಳ್ಳಿ, ದಾಸರಹಳ್ಳಿ, ಆರ್‌.ಆರ್‌. ನಗರ ವಲಯ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ| 

Heavy Rain in BengaluruYesterday grg
Author
Bengaluru, First Published Nov 6, 2020, 8:32 AM IST

ಬೆಂಗಳೂರು(ನ.06): ನಗರದಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಸುರಿದ ಧಾರಾಕಾರ ಮಳೆಗೆ ಮೂರು ಕಡೆ ಮರ ಧರೆಗುರುಳಿವೆ. ಕೆಲವೆಡೆ ರಸ್ತೆಗಳ ಮೇಲೆ ಒಳಚರಂಡಿ ನೀರು ತುಂಬಿ ಹರಿದಿದೆ.

ಕಳೆದ ಒಂದೂವರೆ ವಾರದಿಂದ ಬಿಡುವು ನೀಡಿದ್ದ ವರುಣ ಗುರುವಾರ ಮತ್ತೆ ಅಬ್ಬರಿಸಿದ್ದಾನೆ. ಬೊಮ್ಮನಹಳ್ಳಿ, ದಾಸರಹಳ್ಳಿ, ಆರ್‌.ಆರ್‌. ನಗರ ವಲಯ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿಯಿತು.
ಮಳೆಗೆ ನಗರದ ಯಲಹಂಕ ನ್ಯೂಟೌನ್‌ ಸಮೀಪ, ಹೊರಮಾವಿನ ಪ್ರಗತಿ ನಗರದಲ್ಲಿ ಹಾಗೂ ಟ್ರಿನಿಟಿ ವೃತ್ತದಲ್ಲಿ ತಲಾ ಒಂದು ಮರ ನೆಲಕಚ್ಚಿದವು. ಕೂಡಲೇ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು. ಟಿನ್‌ ಫ್ಯಾಕ್ಟರಿ ಬಳಿ ಉದಯನಗರದ ಕೆಲವು ಮುಖ್ಯ ರಸ್ತೆ ಹಾಗೂ ಒಳ ರಸ್ತೆಗಳ ಮೇಲೆ ಒಳಚರಂಡಿ ನೀರು ಉಕ್ಕಿ ಹರಿದದ್ದು ಬಿಟ್ಟರೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ತಿಳಿಸಿದೆ.

ಕೆಲವು ದಿನಗಳಿಂದ ಇದ್ದ ಬಿಸಿಲಿನ ವಾತಾವರಣ ಗುರುವಾರ ಮುಂದುವರೆಯಿತು. ಸಂಜೆ 7 ಗಂಟೆ ಹೊತ್ತಿಗೆ ನಗರದ ಅಲ್ಲಲ್ಲಿ ಮೋಡ ಮುಸುಕಿದ ವಾತಾವರಣ ಕಂಡು ಬಂತು. 2 ತಾಸು ಮಳೆ ಸುರಿಯಿತು. ರಾತ್ರಿಯೂ ತುಂತುರು ಮಳೆ ಮುಂದುವರಿದಿತ್ತು.

ಉದ್ಯಾನ ನಗರಿ ಬೆಂಗಳೂರಲ್ಲಿ ಶೇ.17 ಅಧಿಕ ಮಳೆ ದಾಖಲೆ..!

ಸರಾಸರಿ 6.85 ಮಿ.ಮೀ. ಮಳೆ

ರಾತ್ರಿ 10.30ರ ವೇಳೆಗೆ ನಗರದಲ್ಲಿ ಸರಾಸರಿ 6.85 ಮಿ.ಮೀ. ಮಳೆ ಬಿದ್ದಿದೆ. ಇದರಲ್ಲಿ ಬೊಮ್ಮನಹಳ್ಳಿಯ ದೊರೆಸಾನಿಪಾಳ್ಯದಲ್ಲಿ ಅಧಿಕ 51 ಮಿ.ಮೀ ಮಳೆ ಬಂದಿದೆ. ಉಳಿದಂತೆ ದಾಸರಹಳ್ಳಿ ವಲಯದ ಚೊಕ್ಕಸಂದ್ರದಲ್ಲಿ 46, ಬಿಳೆಕಳ್ಳಿ 44.5, ಉತ್ತರಹಳ್ಳಿ 44, ರಾಜರಾಜೇಶ್ವರಿ ನಗರ ಮತ್ತು ಪಟ್ಟಾಭಿರಾಮ ನಗರ ತಲಾ 43, ಕೋಣನಕುಂಟೆ 42.5, ಕುಮಾರಸ್ವಾಮಿ ಬಡಾವಣೆ 41.5, ಕೊಡಿಗೆಹಳ್ಳಿ ಮತ್ತು ಕೆಂಗೇರಿ 41, ಆರ್‌.ಆರ್‌.ನಗರ ಎಚ್‌ಎಂಟಿ ವಾರ್ಡ್‌ 40.5, ಬಸವನಗುಡಿ ಹಾಗೂ ನಾಯಂಡಹಳ್ಳಿ 39, ಬೆನ್ನಿಗಾನಹಳ್ಳಿ 35.5, ದೊಡ್ಡಬಿದರಕಲ್ಲು 33, ಪೀಣ್ಯ ಕೈಗಾರಿಕಾ ಪ್ರದೇಶ ಹಾಗೂ ಎಚ್‌ಎಎಲ್‌ ವಿಮಾನ ನಿಲ್ದಾಣ 31.5, ಹೆಮ್ಮಿಗೆಪುರ 29.5 ಮಿ.ಮೀ.ಮಳೆ ದಾಖಲಾಗಿದೆ.
 

Follow Us:
Download App:
  • android
  • ios