ಬೆಂಗಳೂರು(ಸೆ.30): ನಗರದ ಹಲವು ಕಡೆಗಳಲ್ಲಿ ಮಂಗಳವಾರ ವ್ಯಾಪಕ ಮಳೆ ಸುರಿದಿದ್ದು, ಮಧ್ಯಾಹ್ನದಿಂದ ಬಹುತೇಕ ಕಡೆ ಸಾಧಾರಣವಾಗಿ ಸುರಿದ ಮಳೆ ರಾತ್ರಿ ಒಂಬತ್ತು ಗಂಟೆಯ ನಂತರ ಅಬ್ಬರಿಸಿತು. ಆಗಾಗ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ.  ಬೆಳಗ್ಗೆಯಿಂದಲೂ ನಗರಾದ್ಯಂತ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಮಧ್ಯಾಹ್ನದ ಹೊತ್ತಿಗೆ ಬೆಂಗಳೂರು ಉತ್ತರ ಭಾಗ ಹಾಗೂ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಸುರಿಯಿತು.

ವಿಧಾನಸೌಧ, ಮೆಜೆಸ್ಟಿಕ್‌, ಶೇಷಾದ್ರಿಪುರಂ, ಓಕಳಿಪುರಂ, ವಿಜಯನಗರ, ಹಂಪಿನಗರ, ರಾಜಾಜಿನಗರ, ಯಶವಂತಪುರ, ಚಾಮರಾಜಪೇಟೆ, ನಾಯಂಡಹಳ್ಳಿ, ಜಯನಗರ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ಮಳೆ ಬಿದ್ದಿದ್ದು, ಚಳಿಯ ವಾತಾವರಣ ಸೃಷ್ಟಿಯಾಯಿತು. ಮಳೆಯಿಂದಾಗಿ ಶಿವಾನಂದ ವೃತ್ತದ ಅಂಡರ್‌ಪಾಸ್‌ನಲ್ಲಿ ನೀರು ನಿಂತಿತ್ತು. ಕೆಲ ರಸ್ತೆಗಳಲ್ಲಿ ಚರಂಡಿ ನೀರು ಉಕ್ಕಿ ಹರಿದಿದ್ದು, ವಾಹನ ಸವಾರರು ಪರದಾಡಿದರು. ಜಿಟಿ ಜಿಟಿ ಮಳೆಯಿಂದಾಗಿ ಕಚೇರಿ ಕೆಲಸ ಮುಗಿಸಿ ಹೋಗುವವರು, ಬೀದಿ ಬದಿ ವ್ಯಾಪಾರಿಗಳು, ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಯಿತು.

ಭಾರಿ ಮಳೆಗೆ ಕುಸಿ​ದ ಹಂಪಿಯ ಸಾಲು ಮಂಟಪ

ಚೊಕ್ಕಸಂದ್ರದಲ್ಲಿ ಹೆಚ್ಚು ಮಳೆ:

ದಾಸರಹಳ್ಳಿಯ ವಲಯದ ಚೊಕ್ಕಸಂದ್ರದಲ್ಲಿ ಅತಿ ಹೆಚ್ಚು ಮಳೆ ಅಂದರೆ 66 ಮಿ.ಮೀ. ಮಳೆ ಸುರಿದಿದೆ. ಉಳಿದಂತೆ ಕೊಟ್ಟಿಗೆಪಾಳ್ಯ 59, ಬಾಗಲಗುಂಟೆ 52, ನಂದಿನಿ ಲೇಔಟ್‌ 50, ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ರಾಜಮಹಲ್‌ ಗುಟ್ಟಹಳ್ಳಿ ತಲಾ 49.5, ಆರ್‌.ಆರ್‌. ನಗರ, ಶೆಟ್ಟಿಹಳ್ಳಿ ಮತ್ತು ನಾಗಪುರ ತಲಾ 47, ಯಶವಂತಪುರ 45.5, ದೊಡ್ಡಬಿದರಕಲ್ಲು 45, ಹೆಗ್ಗನಹಳ್ಳಿ 42.5, ಬಸವೇಶ್ವರ ನಗರ 42, ಪಾಪ್ಪನಪಾಳ್ಯ 38.5, ಬ್ಯಾಟರಾಯನಪುರ 37.5, ಅಗ್ರಹಾರ ದಾಸರಹಳ್ಳಿ 37, ಯಲಹಂಕ 36.5, ಮಾರುತಿ ಮಂದಿರ 31, ಕೋರಮಂಗಲ, ಮನೋರಾಯನಪಾಳ್ಯ ತಲಾ 30.5, ಕುಶಾಲ ನಗರ 29.5, ಬಸವನಗುಡಿ ಮತ್ತು ಚೌಡೇಶ್ವರಿ 29, ಪುಲಕೇಶಿನಗರ, ಎಚ್‌ಎಎಲ್‌ ತಲಾ 28.5, ಕೊನೇನ ಅಗ್ರಹಾರ 27.5, ಹಂಪಿನಗರ 26 ಮಿ.ಮೀ. ಮಳೆ ಸುರಿದಿದೆ.

ಮನೆಗಳಿಗೆ ನುಗ್ಗಿದ ನೀರು

ಮಂಗಳವಾರ ಸಂಜೆ ನಂತರ ಸುರಿದ ಧಾರಾಕಾರ ಮಳೆಯಿಂದಾಗಿ ದಾಸರಹಳ್ಳಿಯ ಗುಂಡಪ್ಪಾ ಬಡಾವಣೆಯ ಹಲವು ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರನ್ನು ಹೊರಹಾಕಲು ನಿವಾಸಿಗಳು ಪರದಾಡಿದರು. ಇಲ್ಲಿನ ಚರಂಡಿ, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಸುಮಾರು ಎರಡು ಅಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿಕೊಂಡಿತ್ತು. ಇನ್ನು ಹಲವು ತಗ್ಗು ಪ್ರದೇಶದ ಬಡಾವಣೆಗಳು, ರಸ್ತೆ ಅಂಡರ್‌ಪಾಸ್‌ಗಳು ಸೇರಿದಂತೆ ಮೆಟ್ರೋ ಕಾಮಗಾರಿಗಳಲ್ಲಿ ಮಳೆ ನೀರು ತುಂಬಿಕೊಂಡಿರುವುದು ಕಂಡು ಬಂತು.