ಮಳೆಯ ಅಬ್ಬರಕ್ಕೆ ಸಂಚಾರ ಮಾರ್ಗ ಬದಲಿಸಿದ 14 ವಿಮಾನಗಳು, ಬಾಗಲಗುಂಟೆಯಲ್ಲಿ 3.9 ಸೆಂ.ಮೀ ಮಳೆ ದಾಖಲು, ವೈಟ್‌ಫೀಲ್ಡ್‌ ಮಾರ್ಗದ ಮೆಟ್ರೋ ನಿಲ್ದಾಣಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ, ಇನ್ನೂ ಎರಡು ದಿನ ಗುಡುಗು ಸಹಿತ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು(ಏ.05): ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ವೈಟ್‌ಫಿಲ್ಡ್‌, ವರ್ತೂರು, ದೇವನಹಳ್ಳಿ ಸೇರಿದಂತೆ ವಿವಿಧ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡರೆ, ಕೆ.ಆರ್‌.ಪುರ- ವೈಟ್‌ಫೀಲ್ಡ್‌ ಮಾರ್ಗದ ಕೆಲವು ಮೆಟ್ರೋ ನಿಲ್ದಾಣಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿಯಾಗಿತ್ತು. ಬಿರುಗಾಳಿ, ಮಳೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು.

ಮಂಗಳವಾರ ಮಧ್ಯಾಹ್ನದ ನಂತರ ದಿಢೀರ್‌ ಮಳೆ ಆರಂಭವಾಯಿತು. ವೈಟ್‌ಫಿಲ್ಡ್‌, ಮಾರತ್ತಹಳ್ಳಿ, ದೇವನಹಳ್ಳಿ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಯಿತು. ಪ್ರಮುಖ ರಸ್ತೆಗಳಲ್ಲಿಯೇ ಒಂದು ಅಡಿಯಷ್ಟುನೀರು ನಿಂತಿದೆ. ಐಟಿ ಕಾರಿಡಾರ್‌ ಎಂದು ಕರೆಸಿಕೊಳ್ಳುವ ವೈಟ್‌ ಫಿಲ್ಡ್‌ನಲ್ಲಿ ಬಿದ್ದ ಮಳೆಯ ನೀರು ರಸ್ತೆಯಲ್ಲಿ ಜಮಾವಣೆಗೊಂಡು ಟ್ರಾಫಿಕ್‌ ಸಮಸ್ಯೆ ಉಂಟಾಯಿತು. ಕಾಡುಬೀಸನಹಳ್ಳಿ ಅಂಡರ್‌ಪಾಸ್‌ ಸೇರಿದಂತೆ ಮೊದಲಾದ ಕಡೆ ನೀರು ನಿಂತಿತ್ತು. ವರ್ತೂರು ಮುಖ್ಯರಸ್ತೆಯಲ್ಲಿ ಭಾರೀ ಪ್ರಮಾಣ ನೀರು ನಿಂತುಕೊಂಡಿತ್ತು. ಇದರಿಂದ ಸಾರ್ವಜನಿಕರು ವಾಹನ ದಟ್ಟಣೆ ಎದುರಿಸಬೇಕಾಯಿತು.

Weather Forecast: ಇನ್ನೂ 2 ದಿನ ಗುಡುಗು ಸಹಿತ ಮಳೆ: ಸುವರ್ಣನ್ಯೂಸ್‌ಗೆ ಹವಾಮಾನ ಇಲಾಖೆ ಮುನ್ಸೂಚನೆ

ವಿಮಾನ ಹಾರಾಟದಲ್ಲಿ ವ್ಯತ್ಯಯ: ಯಲಹಂಕ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸುತ್ತಮುತ್ತ ಮಂಗಳವಾರ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ಬೆಂಗಳೂರಿನತ್ತ ಆಗಮಿಸಿದ ವಿಮಾನಗಳ ಇಳಿಯುವಿಕೆ ಮತ್ತು ಇಲ್ಲಿಂದ ಬೇರೆಡೆಗೆ ಹೋಗುವ ವಿಮಾನಗಳ ಹಾರಾಟ ವಿಳಂಬವಾಯಿತು.

ಗಾಳಿ, ಮಳೆಯ ಅಬ್ಬರದಿಂದಾಗಿ 14 ವಿಮಾನಗಳು ಮಾರ್ಗ ಬದಲಿಸಿದ್ದವು. ಈ ಪೈಕಿ 12 ವಿಮಾನಗಳನ್ನು ಚೆನ್ನೈಗೆ. ತಲಾ ಒಂದು ವಿಮಾನ ಕೊಯಂಬತ್ತೂರು ಮತ್ತು ಹೈದರಾಬಾದ್‌ ಕಡೆಗೆ ಮಾರ್ಗ ಬದಲಿಸಿದ್ದವು. 7 ಇಂಡಿಗೋ ವಿಮಾನಗಳು, 3 ವಿಸ್ತಾರ, 2 ಆಕಾಶ್‌ ಏರ್‌ಲೈನ್ಸ್‌ ಮತ್ತು ತಲಾ ಒಂದೊಂದು ಗೋ ಏರ್‌ ಮತ್ತು ಏರ್‌ ಇಂಡಿಯಾ ವಿಮಾನಗಳು ಮಾರ್ಗ ಬದಲಿಸಿದ್ದವು.ಆರು ವಿಮಾನಗಳ ಹಾರಾಟಕ್ಕೆ ವ್ಯತ್ಯಯವಾಗಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಸಂಜೆ 4.05ರಿಂದ 4.51ರವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದ್ದರಿಂದ ವಿಮಾನಗಳ ಕಾರ್ಯಾಚರಣೆಗೆ ಸಮಸ್ಯೆಯುಂಟಾಗಿತ್ತು. ಇದೀಗ ಹವಾಮಾನ ಸಹಜ ಸ್ಥಿತಿಗೆ ಮರಳಿದ್ದು ಚೆನ್ನೈಯಿಂದ ವಿಮಾನಗಳು ಬೆಂಗಳೂರಿಗೆ ಹಿಂತಿರುಗಿವೆ. ದೇವನಹಳ್ಳಿಯಲ್ಲಿ 45.2 ಮಿ.ಮೀ ಮಳೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊಸ ಮೆಟ್ರೋ ನಿಲ್ದಾಣಕ್ಕೆ ನೀರು

ಇತ್ತೀಚೆಗೆ ಉದ್ಘಾಟನೆಯಾದ ಕೆ.ಆರ್‌.ಪುರ-ವೈಟ್‌ಫೀಲ್ಡ್‌ ಮಾರ್ಗದ ಕೆಲ ಮೆಟ್ರೋ ನಿಲ್ದಾಣಗಳ ಪ್ಲಾಟ್‌ಫಾಮ್‌ರ್‍ನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯ ನೀರು ಆವರಿಸಿ ಪ್ರಯಾಣಿಕರು ತೊಂದರೆಗೀಡಾದರು. ನಲ್ಲೂರುಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮಳೆ ನೀರು ಸೋರಿ ಪ್ಲಾಟ್‌ಫಾಮ್‌ರ್‍, ಟಿಕೆಟ್‌ ಕೌಂಟರ್‌, ಭದ್ರತಾ ತಪಾಸಣೆ ಸ್ಥಳದಲ್ಲಿ ನೀರು ಒಳನುಗ್ಗಿತ್ತು. ಜೊತೆಗೆ ಪಟ್ಟಂದೂರು ಅಗ್ರಹಾರದ ಮೆಟ್ರೋ ನಿಲ್ದಾಣದಲ್ಲೂ ಕಾನ್‌ಕಾರ್ಸ್‌ ಮಟ್ಟದಲ್ಲಿ ನೀರು ಸೇರಿತ್ತು. ಇದರಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು. ಮೆಟ್ರೋದ ಸ್ವಚ್ಛತಾ ಸಿಬ್ಬಂದಿಯನ್ನು ನಿಯೋಜಿಸಿ ಮಳೆ ನೀರನ್ನು ಹೊರಚೆಲ್ಲಲಾಯಿತು. 

8 ರವರೆಗೆ ಹಗುರ ಮಳೆ ಸಾಧ್ಯತೆ : ಕೃಷಿ ಹವಾಮಾನ ಕ್ಷೇತ್ರ ಮಾಹಿತಿ

ಎಲ್ಲಿ ಎಷ್ಟು ಮಳೆ ?

ನಗರದ ಬಾಗಲಗುಂಟೆಯಲ್ಲಿ ಮಂಗಳವಾರ ಅತಿ ಹೆಚ್ಚು 3.9 ಸೆಂ.ಮೀ ಮಳೆಯಾದ ವರದಿಯಾಗಿದೆ. ಉಳಿದಂತೆ, ಶೆಟ್ಟಿಹಳ್ಳಿಯಲ್ಲಿ 3.8, ನಂದಿನಿ ಲೇಔಟ್‌ 3.5, ನಾಗಪುರ 2.5, ದೊಡ್ಡಬಿದರಕಲ್ಲಿ 2.4, ಕೆಂಗೇರಿಯಲ್ಲಿ 2.1, ದೊಡ್ಡ ಬೊಮ್ಮಸಂದ್ರ, ಯಶವಂತಪುರ, ಕೊಟ್ಟಿಗೆಪಾಳ್ಯ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ತಲಾ 2.0, ರಾಧಾಕೃಷ್ಣ ದೇವಸ್ಥಾನ ವಾರ್ಡ್‌, ಕೊಡಿಗೆಹಳ್ಳಿಯಲ್ಲಿ ತಲಾ 1.8, ಬೇಗೂರಿನಲ್ಲಿ 1.3 ಹಾಗೂ ಕೋರಮಂಗಲದಲ್ಲಿ 1.1 ಸೆಂ.ಮೀ ಮಳೆಯಾದ ವರದಿಯಾಗಿದೆ.

ಇನ್ನು ಎರಡು ದಿನ ಮಳೆ

ಬೆಂಗಳೂರಿಗೆ ಮುಂದಿನ ಎರಡು ದಿನ (ಏ.6ರವರೆಗೆ) ಇದೇ ರೀತಿ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ. ಬೆಳಗ್ಗೆಯಿಂದಬಿಸಿಲು ಕಂಡು ಬಂದರೂ ಸಂಜೆ ಹೊತ್ತಿಗೆ ಏಕಾಏಕಿ ಮಳೆ ಬೀಳುವ ಸಂಭವವಿದೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.