ಬೆಂಗಳೂರು(ಏ.22): ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಸುಳಿಗಾಳಿ ತೀವ್ರಗೊಂಡಿದ್ದರ ಪರಿಣಾಮ ನಗರದಲ್ಲಿ ಬುಧವಾರ ತಡರಾತ್ರಿ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದೆ.

ನಗರಾದ್ಯಂತ ಬೆಳಗ್ಗೆಯಿಂದಲೇ ಬಿಸಿಲು ಕಡಿಮೆಯಾಗಿತ್ತು. ಮಧ್ಯಾಹ್ನ ನಂತರ ಅಲ್ಲಲ್ಲಿ ಜಿಟಿ ಜಿಟಿ ಮಳೆ ಸುರಿಯಿತು. ತದನಂತರ ರಾತ್ರಿ ವೇಳೆಗೆ ಆರಂಭವಾದ ಮಳೆರಾಯನ ಆರ್ಭಟ ಮಧ್ಯರಾತ್ರಿಯ ವರೆಗೂ ಮುಂದುವರೆಯಿತು.

ಈ ವರ್ಷವೂ ಸಾಮಾನ್ಯ ಮುಂಗಾರು: ಸ್ಕೈಮೆಟ್‌!

ಮೆಜೆಸ್ಟಿಕ್‌, ಶಿವಾನಂದ ವೃತ್ತ, ಮೇಕ್ರಿ ವೃತ್ತ, ಹೆಬ್ಬಾಳ, ವಿಜಯನಗರ, ಸಿಂಗನಾಯಕನಹಳ್ಳಿ, ರಾಜಾನುಕುಂಟೆ, ವಿ.ನಾಗೇನಹಳ್ಳಿ, ಕೆ.ಜಿ.ಹಳ್ಳಿ, ಯಲಹಂಕ, ಎಚ್‌.ಗೊಲ್ಲಹಳ್ಳಿ, ವಡೇರಹಳ್ಳಿ, ದಯಾನಂದನಗರ, ಶಿವಕೋಟೆ, ಮಂಡೂರು, ಅಟ್ಟೂರು, ಮನೋರಾಯನಪಾಳ್ಯ, ಹೆಮ್ಮಿಗೆಪುರ, ನಾಗಾಪುರ, ವಿದ್ಯಾರಣ್ಯಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭರ್ಜರಿ ಸುರಿದಿದೆ.

ಇನ್ನೆರಡು ದಿನವೂ ಇದೇ ರೀತಿ ವಾತಾವರಣ ಮುಂದುವರಿಯಲಿದೆ. ಆಗಾಗ ಮೋಡ ಕವಿದ ವಾತಾವರಣ ಮತ್ತು ಜಿಟಿ ಜಿಟಿ ಮಳೆ ಕಾಣಿಸಿಕೊಳ್ಳಲಿದೆ. ಬಿಸಿಲಿನ ಗರಿಷ್ಠ ಪ್ರಮಾಣದಲ್ಲಿ ತುಸು ಇಳಿಕೆಯಾಗುವ ಸಂಭವವಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.