ಬಾಗಲಕೋಟೆಯಲ್ಲಿ ಮಳೆರಾಯ ತಂದಿಟ್ಟ ಅವಾಂತರ: ರಸ್ತೆಗಳ ತುಂಬ ನೀರೋ ನೀರು
ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯಲ್ಲೂ ವರುಣನ ಆರ್ಭಟ ಜೋರಾಗಿದ್ದು, ಹಲವು ಅವಾಂತರಗಳಿಗೆ ಕಾರಣವಾಗಿದೆ. ಈ ಮಧ್ಯೆ ಕೆಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರೆ, ಇನ್ನೂ ಕೆಲವೆಡೆ ಹೊಲಗದ್ದೆಗಳು ಜಲಾವೃತವಾಗಿದೆ. ಇನ್ನು ಕೆಲವು ಗ್ರಾಮಗಳ ರಸ್ತೆಗಳ ತುಂಬೆಲ್ಲಾ ಬರೀ ನೀರೋ ನೀರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಆ.04): ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯಲ್ಲೂ ವರುಣನ ಆರ್ಭಟ ಜೋರಾಗಿದ್ದು, ಹಲವು ಅವಾಂತರಗಳಿಗೆ ಕಾರಣವಾಗಿದೆ. ಈ ಮಧ್ಯೆ ಕೆಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರೆ, ಇನ್ನೂ ಕೆಲವೆಡೆ ಹೊಲಗದ್ದೆಗಳು ಜಲಾವೃತವಾಗಿದೆ. ಇನ್ನು ಕೆಲವು ಗ್ರಾಮಗಳ ರಸ್ತೆಗಳ ತುಂಬೆಲ್ಲಾ ಬರೀ ನೀರೋ ನೀರು. ಹೌದು! ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಮಳೆಯಾರ್ಭಟ ಮುಂದುವರೆದಿದೆ. ಬಾದಾಮಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಗೋವನಕೊಪ್ಪ, ಚಿಮ್ಮನಕಟ್ಟಿ, ಕುಳಗೇರಿ ಕ್ರಾಸ್ ನಲ್ಲಿ ಮಳೆ ಅವಾಂತರ ಸೃಷ್ಠಿಯಾಗಿ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮನೆಯಲ್ಲಿದ್ದ ಜನ ತಮ್ಮ ಸರಂಜಾಮುಗಳೊಂದಿಗೆ ಸುರಕ್ಷಿತ ತಾಣಗಳಿಗೆ ತೆರಳಲು ಪರದಾಡುವಂತಾಯಿತು.
ಕೋಡಿಹಾಳ ಗ್ರಾಮದಲ್ಲಿ ರಸ್ತೆಗಳ ತುಂಬ ನೀರೋ ನೀರು: ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಹೊಲಗದ್ದೆಗಳು ಜಲಾವೃತಗೊಂಡು ಅಪಾರ ಬೆಳೆ ಹಾನಿ ಉಂಟಾಗಿದೆ. ಜಿಲ್ಲೆಯ ಇಳಕಲ್ ತಾಲೂಕು ಕೋಡಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಜ೯ರಿ ಮಳೆ ಆಗಿದ್ದು, ನಿರಂತರ ಮಳೆ ಹಿನ್ನೆಲೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವಡೆ ಹೊಲದ ಬದುಗಳು ಒಡೆದು ಹೊಲಗದ್ದೆಗಳಿಗೆ ನೀರು ನುಗ್ಗಿದ್ದು, ಬೆಳೆಗಳು ಜಲಾವೃತಗೊಂಡಿವೆ. ಬೆಳೆ ಹಾನಿಯಿಂದ ರೈತ ಸಮೂಹ ಕಂಗಾಲಾಗಿದ್ದು, ಈ ಭಾಗದಲ್ಲಿ ಬೆಳೆದ ಸೂರ್ಯಕಾಂತಿ, ತೊಗರಿ, ಸಜ್ಜೆ, ಎಳ್ಳು ಸೇರಿದಂತೆ ಹಲವು ಬೆಳೆಗಳು ನೀರಲ್ಲಿ ನಿಂತಿವೆ. ಈ ಮಧ್ಯೆ ಕೋಡಿಹಾಳ ಗ್ರಾಮದ ರಸ್ತೆಗಳಲ್ಲಿ ನೀರೋ ನೀರು, ಎಲ್ಲಿ ನೋಡಿದ್ರೂ ರಸ್ತೆಗಳ ತುಂಬ ನೀರು ಹರಿಯುತ್ತಿರುವ ದೃಶ್ಯಗಳು ಕಂಡು ಬಂದಿತು. ಹಲವು ಗ್ರಾಮಗಳಲ್ಲಿ ಈ ರೀತಿಯಾದ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಬಾಗಲಕೋಟೆಯಲ್ಲಿ ಕಣ್ಮನ ಸೆಳೆದ ಕಾಲೇಜು ವಿದ್ಯಾರ್ಥಿಗಳ ಫುಡ್ ಫೆಸ್ಟಿವಲ್
ಯುವಕರ ಬೈಕ್ ಹುಚ್ಚಾಟ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವರುಣನ ಅರ್ಭಟ ಮುಂದುವರೆದಿದ್ದು, ನದಿ ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತತೆಗೊಂಡಿದೆ. ಬಾದಾಮಿ ತಾಲೂಕಿನಲ್ಲಿ ಸಾಕಷ್ಟು ಮಳೆ ಆದ ಪರಿಣಾಮ ಮನೆ ಹಾಗೂ ಜಮೀನುಗಳಿಗೆ ನೀರು ನುಗ್ಗಿ ಸ್ಥಳೀಯರು ಪರದಾಡುವಂತಾಗಿದೆ. ಯಂಕಂಚಿ, ಮಣಿನಾಗರ ಬಳಿ ಸೇತುವೆ ಮೇಲೆ ರಭಸವಾಗಿ ಹರಿಯುತ್ತಿರುವ ಮಳೆ ನೀರಿನ ಹಳ್ಳದಿಂದ ಬಾದಾಮಿ ಯಿಂದ ಕೆರೂರು ಹೋಗುವ ಸಂಚಾರ ಬಂದ್ ಆಗಿತ್ತು. ಇದರಿಂದ ಸ್ಥಳೀಯರು ಪರದಾಡುವಂತಾಗಿದೆ. ರಭಸದಿಂದ ಹರಿಯುತ್ತಿದ್ದ,ನೀರಿನಲ್ಲಿ ಯುವಕರ ಹುಚ್ಚು ಸಾಹಸ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಹಳ್ಳ ತುಂಬಿ ರಸ್ತೆ ಮಾರ್ಗದ ಸೇತುವೆ ಮೇಲೆ ನೀರು ಹರಿದು, ಅಪಾಯ ಮಟ್ಟದಲ್ಲಿ ನೀರು ಹರಿದು ಬರುತ್ತಿದ್ದರೂ ಸಹ ವೇಗವಾಗಿ ಹರಿಯುವ ನೀರಲ್ಲಿ ನಡೆದುಕೊಂಡು ಬರುವುದು, ಬೈಕ್ ತೆಗೆದುಕೊಂಡು ಹೋಗುವ ಮೂಲಕ ಯುವಕರು ಹುಚ್ಚು ಸಾಹಸ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಇನ್ನು ಯುವಕನೊಬ್ಬ ಬೇಡ ಬೇಡ ಎಂದರೂ ಬೈಕ್ ತೆಗೆದುಕೊಂಡ ಹೋದ. ಸೇತುವೆ ಮಧ್ಯೆ ವಾಹನ ಬಂದ್ ಆಗಿದ್ದರಿಂದ ಬಳಿಕ ಮುಂದಕ್ಕೆ ಹೋಗಲಾಗದೇ ಪರದಾಡಿದ ಘಟನೆ ಸಹ ನಡೆಯಿತು. ನಂತರ ದಡದಲ್ಲಿ ಇದ್ದ ಇಬ್ಬರು ಯುವಕರು ಓಡಿ ಹೋಗಿ ಬೈಕ್ ಎಳೆದುಕೊಂಡು ಹೊರ ಬರುವ ಮೂಲಕ ಆತನ ಪ್ರಾಣ ಉಳಿಸಿದರು.
ಗೋವನಕೊಪ್ಪ, ಕುಳಗೇರಿ ಕ್ರಾಸ್ ಶೆಡ್ & ಗುಡಿಸಲಿಗೆ ನುಗ್ಗಿದ ನೀರು: ಈ ಮಧ್ಯೆ ಗೋವಕೊಪ್ಪ ಗ್ರಾಮದಲ್ಲಿ ಮನೆಗೆ ನುಗ್ಗಿದ ನೀರನ್ನು ಹೂರಗೆ ಹಾಕುವುದಕ್ಕೆ ಜನರು ಹರಸಾಹಸಪಡುವಂತಾಯಿತು. ಗುಡಿಸಲು ಹಾಗೂ ತಗಡಿನ ಶೆಡ್‌ನಲ್ಲಿ ವಾಸ ಮಾಡುತ್ತಿರುವ ಜನತೆ ರಾತ್ರಿ ಇಡೀ ನಿದ್ದೆ ಇಲ್ಲದೆ ನೀರು ಹೊರಗೆ ಹಾಕುವ ಕೆಲಸದಲ್ಲಿ ನಿರತವಾಗಿದ್ದರು. ಚಿಮ್ಮನಕಟ್ಟಿ ಗ್ರಾಮದ ಶಾಲೆಯ ಆವರಣದಲ್ಲಿ ನೀರು ನುಗ್ಗಿ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಪರದಾಡುವಂತಾಯಿತು. ಶಾಲೆಯ ಆವರಣದಲ್ಲಿ ನದಿಯಂತೆ ನೀರು ತುಂಬಿ ಹೋಗಿತ್ತು. ಶಿಕ್ಷಕರು ಸಹ ಮಳೆಯಿಂದಾಗಿ ಪಾಠ ಮಾಡಲು ಆಗದೆ, ಶಾಲೆಯ ಆವರಣದಲ್ಲಿ ಹಾಗೂ ಕೊಠಡಿಯಲ್ಲಿ ಇದ್ದ ನೀರನ್ನು ಹೊರಗೆ ಹಾಕುವುದರಲ್ಲಿ ನಿರತರಾದರು.
ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ವಾಹನ ಅಪಘಾತ, ಓರ್ವ ಸಾವು, ಸಿದ್ದರಾಮಯ್ಯ ಸಂತಾಪ
ಇದರ ಜೊತೆಗೆ ಕುಳಗೇರಿ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಸಹ ಮಳೆಯ ನೀರು ನುಗ್ಗಿ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ. ಇದರಿಂದ ರಾತ್ರಿ ಇಡೀ ನೀರನ್ನು ಹೊರಗೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಸ್ಥಳಕ್ಕೆ ಪಿಡಿಓ ಹಾಗೂ ತಹಶಿಲ್ದಾರರ ಕಚೇರಿಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆಯು ಬಾದಾಮಿ ತಾಲೂಕಿನಲ್ಲಿ ಹೆಚ್ಚು ತೊಂದರೆ ಉಂಟು ಮಾಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರವಾಗಿರುವುದರಿಂದ, ಮಳೆಯಿಂದಾಗಿ ಹಾನಿಗೆ ಒಳಗಾಗಿರುವ ಪ್ರದೇಶಗಳಿಗೆ ಸೂಕ್ತ ಪರಿಹಾರ ಧನ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.