ಹುನಗುಂದದಲ್ಲಿ ಭಾರೀ ಮಳೆ: ಮನೆಗಳಿಗೆ ನುಗ್ಗಿದ ಹಳ್ಳದ ನೀರು
ಭಾರಿ ಮಳೆಗೆ ತಾಲೂಕಿನ ಬೇಕಮಲದಿನ್ನಿ ಗ್ರಾಮದ ಮನೆಗಳಲ್ಲಿ ಹಳ್ಳದ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ| ರಾತ್ರಿ ಇಡೀ ಹರಿದು ಬಂದ ಹಳ್ಳದ ನೀರಿನಿಂದ ಮನೆಯಲ್ಲಿದ್ದ ಧವಸ ಧಾನ್ಯಗಳು ಸೇರಿ ಇತರೆ ವಸ್ತುಗಳನ್ನು ರಕ್ಷಿಸಿಕೊಳ್ಳಲು ಗ್ರಾಮಸ್ಥರು ಹರಸಾಹಸವನ್ನೇ ಪಡಬೇಕಾಯಿತು| ವೃದ್ಧರು ಮಕ್ಕಳು ಸೇರಿ ಮನೆ ಮಂದಿಯಲ್ಲಿ ಕೆಲವರು ಮನೆಯೊಳಗೆ ನುಗ್ಗುತ್ತಿರುವ ನೀರನ್ನು ಬುಟ್ಟಿಯಿಂದ ಹೊರಹಾಕುವ ಕಾರ್ಯದಲ್ಲಿ ತೊಡಗಿದರೆ, ಇನ್ನೂ ಕೆಲವರು ವಸ್ತುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇಡಲು ಕಷ್ಟ ಪಡುತ್ತಿದ್ದರು|
ಹುನಗುಂದ(ಅ.5) ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಬೇಕಮಲದಿನ್ನಿ ಗ್ರಾಮದ ಮನೆಗಳಲ್ಲಿ ಹಳ್ಳದ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ರಾತ್ರಿ ಇಡೀ ಹರಿದು ಬಂದ ಹಳ್ಳದ ನೀರಿನಿಂದ ಮನೆಯಲ್ಲಿದ್ದ ಧವಸ ಧಾನ್ಯಗಳು ಸೇರಿ ಇತರೆ ವಸ್ತುಗಳನ್ನು ರಕ್ಷಿಸಿಕೊಳ್ಳಲು ಗ್ರಾಮಸ್ಥರು ಹರಸಾಹಸವನ್ನೇ ಪಡಬೇಕಾಯಿತು. ವೃದ್ಧರು ಮಕ್ಕಳು ಸೇರಿ ಮನೆ ಮಂದಿಯಲ್ಲಿ ಕೆಲವರು ಮನೆಯೊಳಗೆ ನುಗ್ಗುತ್ತಿರುವ ನೀರನ್ನು ಬುಟ್ಟಿಯಿಂದ ಹೊರಹಾಕುವ ಕಾರ್ಯದಲ್ಲಿ ತೊಡಗಿದರೆ, ಇನ್ನೂ ಕೆಲವರು ವಸ್ತುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇಡಲು ಕಷ್ಟ ಪಡುತ್ತಿದ್ದರು.
ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಸುರಿದ ಮಳೆಗೆ ಹಳ್ಳದ ನೀರು ಒಮ್ಮಿಂದೊಮ್ಮೆಲೆ ಗ್ರಾಮದಲ್ಲಿ ನುಗ್ಗಿತು. ಅದು ಶನಿವಾರ ಬೆಳಗಿನ ಜಾವದವರೆಗೂ ನಿರಂತರವಾಗಿ ಹರಿದ ಕಾರಣ ಮನೆಯಲ್ಲಿನ ಧವಸ ಧಾನ್ಯಗಳು ಸೇರಿ ಇತರೆ ವಸ್ತುಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾಯಿತು. ಆದರೂ ಬಹುತೇಕರ ಮನೆಗಳಲ್ಲಿನ ಧವಸ ಧಾನ್ಯಗಳು ನೀರಿಗೆ ನೆನೆದು ಹಾಳಾಗಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಗ್ರಾಮಸ್ಥರು ಮನೆಯಲ್ಲಿನ ವಸ್ತುಗಳನ್ನು ರಕ್ಷಿಸಿಕೊಳ್ಳಲು ಮಗ್ನರಾಗಿದ್ದರಿಂದ ಮನೆಯ ಮುಂದೆ ಇಟ್ಟ ಕೃಷಿ ಉಪಕರಣಗಳು ಸೇರಿ ಕೋಳಿಗಳು ನೀರಿಗೆ ಕೊಚ್ಚಿಕೊಂಡು ಹೋಗಿವೆ. ಬೇಕಲಮಲದಿನ್ನಿ ಗ್ರಾಮದ ಪಕ್ಕ ಹರಿದ ಹಳ್ಳದಲ್ಲಿ ಗಿಡ, ಗಂಟಿಗಳು ಬೆಳೆದಿದ್ದೆ ಗ್ರಾಮದಲ್ಲಿ ನೀರು ನುಗ್ಗಲು ಕಾರಣ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದು, ಅವುಗಳನ್ನು ಸ್ವಚ್ಛಗೊಳಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮಾಡಿಕೊಂಡ ಮನವಿಗೆ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದರು.
ರಸ್ತೆ ಸಂಪರ್ಕ ಕಡಿತ:
ಬೇಕಮಲದಿನ್ನಿ ಸೇತುವೆ ಮೇಲೆ ನೀರು ಬಂದ ಕಾರಣ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಜಾವದವರೆಗೆ ಹುನಗುಂದ-ಕರಡಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದರಿಂದ ಸಾರಿಗೆ ಬಸ್‌ಗಳು ಸೇರಿ ಇತರೆ ಎಲ್ಲ ವಾಹನಗಳು ರಾತ್ರಿವಿಡಿ ರಸ್ತೆಯಲ್ಲೇ ನಿಲ್ಲಬೇಕಾಯಿತು.
ಅಬ್ಬರದ ಮಳೆಗೆ ತಾಲೂಕಿನ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು ಕೆರೆಗಳು ತುಂಬಿವೆ. ಬಹುತೇಕ ರೈತರ ಹೊಲಗಳ ಒಡ್ಡು ಹರಿದು ಅಪಾರ ಪ್ರಮಾಣದ ಹಾನಿಯಾಗಿದೆ. ಮರೋಳ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಗಳು ಅಲ್ಲಲ್ಲಿ ಒಡೆದು ಹಾಳಾದ ದೃಶ್ಯ ಕಂಡು ಬಂದಿದೆ.