ದಕ್ಷಿಣ ಕನ್ನಡದಲ್ಲಿ ಮುಂಗಾರು ಚುರುಕು: ಗುಡುಗು ಸಹಿತ ಭಾರೀ ಮಳೆ
ಸುಬ್ರಹ್ಮಣ್ಯ ಹಾಗೂ ಕುಮಾರ ಪರ್ವತ ಭಾಗದಲ್ಲಿ ಗಾಳಿ ಮಳೆ| ನಿರಂತರ ಸುರಿದ ಮಳೆಯಿಂದಾಗಿ ಕುಮಾರಧಾರ ಹಾಗೂ ದರ್ಪಣ ತೀರ್ಥ ನದಿಯಲ್ಲಿ ನೀರಿನ ಹರಿವು ಸ್ವಲ್ಪ ಮಟ್ಟಿಗೆ ಹೆಚ್ಚಳ| ಸುಬ್ರಹ್ಮಣ್ಯ ಸುತ್ತಮುತ್ತಲಿನ ಸಣ್ಣಪುಟ್ಟ ನದಿ, ತೊರೆ, ಹಳ್ಳಗಳು ತುಂಬಿ ಹರಿದವು|
ಮಂಗಳೂರು/ಉಡುಪಿ/ಸುಬ್ರಹ್ಮಣ್ಯ(ಜೂ.22): ದ.ಕ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾನುವಾರ ಗ್ರಹಣ ಬಳಿಕ ನಿರಂತರವಾಗಿ ಭಾರಿ ಮಳೆಯಾಗಿದೆ. ಸುಬ್ರಹ್ಮಣ್ಯ ಅಲ್ಲದೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕೂಡ ಗುಡುಗು ಸಹಿತ ಗಾಳಿ ಮಳೆಯಾಗಿದೆ.
ಸುಬ್ರಹ್ಮಣ್ಯ ಹಾಗೂ ಕುಮಾರ ಪರ್ವತ ಭಾಗದಲ್ಲಿ ಗಾಳಿ ಮಳೆಯಾಗಿದೆ. ನಿರಂತರ ಸುರಿದ ಮಳೆಯಿಂದಾಗಿ ಕುಮಾರಧಾರ ಹಾಗೂ ದರ್ಪಣ ತೀರ್ಥ ನದಿಯಲ್ಲಿ ನೀರಿನ ಹರಿವು ಸ್ವಲ್ಪ ಮಟ್ಟಿಗೆ ಹೆಚ್ಚಳವಾಯಿತು. ಸುಬ್ರಹ್ಮಣ್ಯ ಸುತ್ತಮುತ್ತಲಿನ ಸಣ್ಣಪುಟ್ಟ ನದಿ, ತೊರೆ, ಹಳ್ಳ ಗಳು ತುಂಬಿ ಹರಿಯಿತು. ಭಾರಿ ಗಾಳಿ ಮಳೆಗೆ ಮನೆಯೊಂದರ ಮೇಲ್ಛಾವಣಿ ಹಾನಿಯಾಗಿ ಸಂಪೂರ್ಣ ಧರಾಶಾಹಿಯಾದ ಘಟನೆ ಕಳೆದ ಶನಿವಾರ ನಡೆದಿದೆ. ಕಡಬ ತಾಲೂಕಿನ ಮುರುಳ್ಯ ಸಮೀಪದ ಬೆಂಗನಡ್ಕ ರೈಲ್ವೆ ಉದ್ಯೋಗಿ ಹರಿಕೃಷ್ಣ ಎಂಬುವರ ಮನೆಯ ಮೇಲ್ಛಾವಣಿ ಧರಾಶಾಹಿಯಾಗಿ 30 ಸಾವಿರ ರು.ನಷ್ಟುನಷ್ಟ ಸಂಭವಿಸಿದೆ.
ಲಾಕ್‌ಡೌನ್‌ನಿಂದಾಗಿ ಹಾಲು ಮಾರಾಟ ಗಣನೀಯ ಇಳಿಮುಖ, ಖರೀದಿ ಬೆಲೆ ಕಡಿತ
ದ.ಕ. ಜಿಲ್ಲಾದ್ಯಂತ ಭಾನುವಾರ ಬೆಳಗ್ಗಿನಿಂದ ಮುಂಗಾರು ಮಳೆ ಚುರುಕುಗೊಂಡಿದೆ. ಭಾನುವಾರ ನಸುಕಿನ ಜಾವ ಮಳೆ ಸುರಿದ ಬಳಿಕ ಬೆಳಗ್ಗೆ ಒಮ್ಮೆ ಬಿಸಿಲು ಕಾಣಿಸಿತು. ನಂತರ ಆಗಾಗ ಬಿಸಿಲು ಹಾಗೂ ತುಂತುರು ಮಳೆ ಬಂದಿತ್ತು. ಅಪರಾಹ್ನ ಮಳೆಯ ಪ್ರಮಾಣದಲ್ಲಿ ತುಸು ವೇಗ ಪಡೆದುಕೊಂಡಿದೆ. ಸಂಜೆ ಮತ್ತೆ ಮಳೆ ಕಾಣಿಸಿದ್ದು, ರಾತ್ರಿಯೂ ಮುಂದುವರಿದಿದೆ.
ಉಡುಪಿ ಜಿಲ್ಲೆಯಲ್ಲಿ ಭಾನುವಾರ ಸೂರ್ಯಗ್ರಹಣ ವೀಕ್ಷಣೆಗೇನೋ ಎಂಬಂತೆ ಬಿಸಿಲಿನ ವಾತಾವರಣ ಇತ್ತು. ನಡುನಡುವೆ ಮೋಡ ಕವಿಯುತ್ತಿದ್ದರೂ ಖಗೋಳಾಸಕ್ತರಿಗೆ ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡಿಯಾಗಿಲ್ಲ. ಶನಿವಾರ ರಾತ್ರಿ ಕೂಡ ಸಾಧಾರಣ ಮಳೆಯಾಗಿತ್ತು. ಆದರೆ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಗಳಾಗಿಲ್ಲ. ಭಾನುವಾರ ರಾತ್ರಿಯಾಗುತ್ತಿದ್ದಂತೆ ಮಳೆ ಆರಂಭವಾಗಿದೆ. ಹವಾಮಾನ ಇಲಾಖೆ ಇನ್ನೂ ಮೂರು-ನಾಲ್ಕು ದಿನ ಕರಾವಳಿಯಲ್ಲಿ ಉತ್ತಮ ಮಳೆಯಾಗುವ ಸೂಚನೆ ನೀಡಿದೆ.