Asianet Suvarna News Asianet Suvarna News

ಅಂಕೋಲಾದಲ್ಲಿ ವರುಣನ ಅಬ್ಬರ: 9 ಗ್ರಾಮಗಳಿಗೆ ಜಲ ದಿಗ್ಬಂಧನ

* ಭಾರೀ ಮಳೆಗೆ ನೀರು ಪಾಲಾಗಿರುವ ಬಿದಿರಿನ ಸಂಕ
* ಕಳೆದೊಂದು ವಾರದಿಂದ ಅಂಕೋಲಾ ತಾಲೂಕಿನಲ್ಲಿ ವರುಣನ ಆರ್ಭಟ
* ಭಯದ ಕಾರ್ಮೋಡದಲ್ಲಿ 400ಕ್ಕೂ ಜನರು
 

Heavy Rain at Ankola in Uttara Kannada grg
Author
Bengaluru, First Published Jul 21, 2021, 9:06 AM IST

ಅಂಕೋಲಾ(ಜು.21): ಕಳೆದೊಂದು ವಾರದಿಂದ ತಾಲೂಕಿನಲ್ಲಿ ವರುಣ ಆರ್ಭಟ ಜೋರಾಗಿದೆ. ಭಾರಿ ಮಳೆಯಿಂದಾಗಿ ನಾಗರಿಕ ಸಂಪರ್ಕಕ್ಕೆ ರಹದಾರಿಯಾಗಿದ್ದ ಬಿದಿರಿನ ಸೇತುವೆ (ಕಾಲುಸಂಕ) ಕೊಚ್ಚಿ ಹೋದ ಪರಿಣಾಮ 9 ಕುಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಅಲ್ಲಿನ ನಾಗರಿಕರು ದಿಗ್ಬಂಧನಕ್ಕೆ ಒಳಗಾಗಿದ್ದಾರೆ.

ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗೂಳೆ, ಕೆಂದಗಿ, ಲಕ್ಕೆಗುಳಿ, ಸಿಕಳಿ, ತುರ್ಲಿ, ಮಲಗದ್ದೆ, ಹೀರೆಮನೆ, ಕೋಟೆಬಾವಿ, ಮನ್ನಾಣಿ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಈ ಎಲ್ಲಾ ಗ್ರಾಮಗಳಲ್ಲಿ 400ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಭಯದ ಕಾರ್ಮೋಡ ಕವಿದಿದೆ.

ಈ ಎಲ್ಲ ಗ್ರಾಮಗಳಿಗೆ ಸಾಗಲು ಪ್ರಮುಖವಾಗಿ 5 ಸೇತುವೆಗಳ ಅವಶ್ಯಕತೆ ಇದೆ. ಈಗಾಗಲೇ ಶಾಸಕಿ ರೂಪಾಲಿ ನಾಯ್ಕ ಬೊಕಳೆ ಹಳಕ್ಕೆ . 20 ಲಕ್ಷ ಹಾಗೂ ದೊಡ್ಡಹಳ್ಳದ ಕಾಲು ಸಂಕಕ್ಕೆ 10 ಲಕ್ಷ ಅನುದಾನಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಿದ್ದಾರೆ. ಇನ್ನುಳಿದ 3 ಕಾಲು ಸಂಕವು ಆಗಬೇಕಿದೆ.

ಅಪ್ಸರೆಯಂತೆ ಕಂಗೊಳಿಸುವ ಅಪ್ಸರಕೊಂಡವನ್ನು ನೋಡ ಬನ್ನಿ..!

ದಿಗ್ಬಂಧನ:

ದಟ್ಟಕಾಡಿನ ಮಧ್ಯೆ ಇರುವ ಈ 9 ಕುಗ್ರಾಮಗಳ ಜನರಿಗೆ ರೇಷನ್‌, ಆಸ್ಪತ್ರೆಗೆ ಸೇರಿದಂತೆ ಎಲ್ಲದಕ್ಕೂ ಹಟ್ಟಿಕೇರಿಯೇ ಆಧಾರ. ಆದರೆ ಬಿದಿರಿನ ಸೇತುವೆ ಕೊಚ್ಚಿ ಹೋಗಿದ್ದರಿಂದ ನಾಗರಿಕ ಸಂಪರ್ಕವು ಸಿಗದಂತಾಗಿದೆ. ಇಲ್ಲಿ ಗರ್ಭಿಣಿಯರು, ವಯೋವೃದ್ಧರು, ಮಕ್ಕಳ್ಳಿಗೆ ಅನಾರೋಗ್ಯ ಉಂಟಾದರೆ ಅವರ ಸ್ಥಿತಿ ನರಕಮಯವಾಗಿದೆ. ಕಳೆದ ವರ್ಷ ಗರ್ಭಿಣಿಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ತರುವಾಗ ಅರಣ್ಯ ಮಧ್ಯದೊಳಗೆ ಹೆರಿಯಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಅನಾರೋಗ್ಯ ಉಂಟಾದರೆ ಕಂಬಳಿಯಲ್ಲಿ ದುರ್ಗಮ ಅರಣ್ಯದಿಂದ 10-15 ಕಿಮೀ ಹೊತ್ತು ತಂದು ಆಸ್ಪತ್ರೆಗೆ ಸಾಗಿಸುತ್ತಾರೆ. ಆದರೆ ಈಗ ತಾತ್ಕಾಲಿಕವಾಗಿ ನಿರ್ಮಿಸಿದ ಸಂಕವು ನೀರು ಪಾಲಾಗಿರುವುದು ದಿಗ್ಭ್ರಮೆ ಮೂಡಿಸಿದೆ.

ಬಿದಿರಿನ ಸಂಕ ನೀರು ಪಾಲಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಕೂಡಲೇ ಲೋಕೋಪಯೋಗಿ ಇಲಾಖೆಯ ಅಭಿಯಂತರ ರಾಮು ಅರ್ಗೆಕರ ಅವರನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಹಂತ-ಹಂತವಾಗಿ ಶಾಶ್ವತ ಕಾಲು ಸಂಕ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು ಎಂದು  ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ. 

ಈ ಕುಗ್ರಾಮಗಳಿಗೆ ಸಾಗಲು 5 ಕಾಲು ಸಂಕದ ಅಗತ್ಯವಿದೆ. ಈಗಾಗಲೇ ಶಾಸಕರು ಸ್ಪಂದಿಸಿ 2 ಸೇತುವೆಗೆ ಕ್ರಿಯಾಯೋಜನೆ ರೂಪಿಸಿದ್ದಾರೆ. ಇನ್ನುಳಿದ 3 ಸೇತುವೆಗೆ ಕಾರ್ಯಕಲ್ಪ ಸಿಗುವಂತಾಗಬೇಕು ಎಂದು ಹಟ್ಟಿಕೇರಿ ಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ಬಲಿಯಾ ನಾಯ್ಕ ಹೇಳಿದ್ದಾರೆ.  

ಇಲ್ಲಿಯ ಜನರ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ದಟ್ಟಅರಣ್ಯದ ಮಧ್ಯೆ ಪ್ರತಿಕ್ಷಣವೂ ಭಯದಲ್ಲೆ ಬದುಕುವ ದುಸ್ಥಿತಿ ಇಲ್ಲಿಯ ವಾಸಿಗಳದ್ದಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಅತ್ಯಗತ್ಯವಾಗಿದೆ ಎಂದು ತಾಲೂಕಾಧ್ಯಕ್ಷ ಬಿಜೆಪಿ ಹಿಂದುಳಿದ ಮೋರ್ಚಾ ರಾಘವೇಂದ್ರ ನಾಯ್ಕ ತಿಳಿಸಿದ್ದಾರೆ. 

ಮರದ ಆಸರೆ

ಮಳೆಯಿಂದಾಗಿ ಈಗಾಗಲೇ ಸಂಕವು ಕೊಚ್ಚಿ ಹೋಗಿ ನಾಗರಿಕ ಸಂಪರ್ಕ ಕಳೆದುಕೊಳ್ಳುವಂತಾಗಿದೆ. ಭಾರಿ ಗಾತ್ರದ ಮರವೊಂದು ಹಳ್ಳಕ್ಕೆ ಅಡ್ಡಲಾಗಿ ಬಿದ್ದಿದ್ದು ಈ ಮರವನ್ನೆ ಆಶ್ರಯಿಸಿ ಅಪಾಯದ ನಡುವೆಯೂ ಕೆಲವರು ಹಟ್ಟಿಕೇರಿಗೆ ಬಂದು ತೆರಳಿದ್ದಾರೆ. ಕಳೆದ 5 ವರ್ಷದ ಹಿಂದೆ ಹೀಗೆ ನದಿ ದಾಟುತ್ತಿರುವಾಗ ತಾಯಿ-ಮಗು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ.
 

Follow Us:
Download App:
  • android
  • ios