ಮಂಡ್ಯ (ಸೆ.28): ಕೊರೋನಾ ಸೋಂಕು ತೀವ್ರವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರೂಪಿಸಿರುವ ಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದವರ ವಿರುದ್ಧ ದಂಡ ವಸೂಲಿ ಕ್ರಮವನ್ನು ಕಠಿಣವಾಗಿ ಜಾರಿಗೊಳಿಸುವಂತೆ ಜಿಲ್ಲಾಡಳಿತ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸುವ 200 ಜನರಿಗೆ ಹಾಗೂ 6 ಪುರಸಭೆಗಳು ಹಾಗೂ 1 ಪಟ್ಟಣ ಪಂಚಾಯ್ತಿ ವ್ಯಾಪ್ತಿಯೊಳಗೆ ತಲಾ 100 ಜನರನ್ನು ಗುರುತಿಸಿ ದಂಡ ವಿಧಿಸುವಂತೆ ಗುರಿ ನಿಗದಿಪಡಿಸಿದೆ. ಅದರಂತೆ ನಿತ್ಯ 1.10 ಲಕ್ಷ ರು. ದಂಡ ವಿಧಿಸುವುದರೊಂದಿಗೆ ಜನರನ್ನು ಜಾಗೃತಿಗೊಳಿಸುವಂತೆ ಆದೇಶಿಸಿದೆ.

ನಗರಸಭೆ ವ್ಯಾಪ್ತಿಯಲ್ಲಿ ಮಾಸ್ಕ್‌ ಧರಿಸದ, ಸಾಮಾಜಿಕ ಅಂತರ ಕಾಪಾಡದ ಹಾಗೂ ಎಲ್ಲೆಂದರಲ್ಲಿ ಉಗುಳುವವರಿಗೆ ತಲಾ 200 ರು. ಹಾಗೂ ಪುರಸಭೆ-ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 100 ರು. ದರ ವಿಧಿಸುವ ದಂಡ ಪ್ರಕ್ರಿಯೆಯನ್ನು ತತ್‌ಕ್ಷಣದಿಂದಲೇ ಕೈಗೊಳ್ಳುವಂತೆ ಸೂಚಿಸಿದೆ.

ಕೊರೋನಾ ಸಂಕಷ್ಟದ ಕಾಲದಲ್ಲೂ ಹೊಸ ಉದ್ದಿಮೆ ಆರಂಭ..!

ನಿಯಮಾವಳಿ ಉಲ್ಲಂಘನೆಯಿಂದ ಸೋಂಕು ಹೆಚ್ಚಳ:  ಸಾಮಾಜಿಕ ಅಂತರ ಪಾಲಿಸದ, ಮುಖಗವಸು ಧರಿಸದ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸದಿರುವುದರಿಂದ ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಇದರಿಂದ ಕೊರೋನಾ ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗಿರುವುದು ಆರೋಗ್ಯ ಇಲಾಖೆಯ ಅಂಕಿ- ಅಂಶಗಳಿಂದ ತಿಳಿದುಬಂದಿದೆ.

ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಮಾವಳಿಗಳನ್ನು ಪಾಲಿಸದೆ ಓಡಾಡುವವರಿಗೆ ಆರಂಭದಲ್ಲಿ ನಗರಸಭೆ ಪೌರಾಯುಕ್ತರು, ಪುರಸಭೆ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ದಂಡ ವಸೂಲಿ ಕ್ರಮವನ್ನು ಕಠಿಣವಾಗಿ ಜಾರಿಗೊಳಿಸಿದ್ದರು. ಆ ನಂತರದಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸುವವರ ಬಗ್ಗೆ ಮೃದು ಧೋರಣೆ ತಾಳಿರುವುದು ಕಂಡುಬಂದಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ. ಕೂಡಲೇ ನಿಯಮ ಉಲ್ಲಂಘಿಸಿ ಓಡಾಡುವವರಿಂದ ದಂಡ ವಸೂಲಿ ಕ್ರಮವನ್ನು ಕಠಿಣವಾಗಿ ಜಾರಿಗೊಳಿಸುವಂತೆ ಗುರಿ ನಿಗದಿಪಡಿಸಿದ್ದಾರೆ.

ಕೊರೋನಾ ಸಂಕಷ್ಟದ ಕಾಲದಲ್ಲೂ ಹೊಸ ಉದ್ದಿಮೆ ಆರಂಭ..! ...

ಗುರಿ ನಿಗದಿ: ನಗರಸಭೆ ವ್ಯಾಪ್ತಿಯಲ್ಲಿ ಕೊರೋನಾ ನಿಯಮಾವಳಿಗಳನ್ನು ಉಲ್ಲಂಘಿಸುವ 200 ಜನರನ್ನು ನಿತ್ಯ ಗುರುತಿಸಿ ದಂಡ ವಿಧಿಸುವುದು, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್‌.ಪೇಟೆ, ಪಾಂಡವಪುರ, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿತ್ಯ ತಲಾ 100 ಜನರನ್ನು ಗುರುತಿಸಿ ದಂಡ ವಿಧಿಸುವಂತೆ ಗುರಿ ನಿಗದಿಪಡಿಸಲಾಗಿದೆ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಮಾವಳಿ ಉಲ್ಲಂಘಿಸುವ 900 ಜನರನ್ನು ಪ್ರತಿದಿನ ಗುರುತಿಸಿ ದಂಡ ವಸೂಲಿ ಮಾಡುವಂತೆ ಸೂಚನೆ ರವಾನಿಸಿದ್ದಾರೆ.

ನಿತ್ಯ 1.10 ಲಕ್ಷ ರು. ವಸೂಲಿಗೆ ನಿರ್ಧಾರ:

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯೊಳಗೆ ಮುಖಗವಸು ಧರಿಸದ, ಸಾಮಾಜಿಕ ಅಂತರ ಪಾಲಿಸದ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ಜಿಲ್ಲಾಡಳಿತ ನಿಗದಿಪಡಿಸಿರುವ ಪ್ರಕಾರ ನಿತ್ಯ 1.10 ಲಕ್ಷ ದಂಡ ವಿಧಿಸಬೇಕಾಗುತ್ತದೆ. ನಗರಸಭೆ ವ್ಯಾಪ್ತಿಯಲ್ಲಿ ಕೊರೋನಾ ನಿಯಮ ಉಲ್ಲಂಘಿಸುವ 200 ಜನರಿಂದ ತಲಾ 200 ರು.ನಂತೆ 40 ಸಾವಿರ ರು., 6 ಪುರಸಭೆಗಳು, 1 ಪಟ್ಟಣ ಪಂಚಾಯ್ತಿಯಿಂದ ತಲಾ 100 ಜನರಿಗೆ 100 ರು.ನಂತೆ 70 ಸಾವಿರ ರು. ದಂಡ ವಿಧಿಸಲು ನಿರ್ಧಾರ ಮಾಡಿದೆ.

ಕೊರೋನಾ ಸೋಂಕು ಹೆಚ್ಚು ಹರಡದಂತೆ ತಡೆಗಟ್ಟುವುದು ತುಂಬಾ ಅನಿವಾರ್ಯವಾಗಿರುವುದರಿಂದ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು ತಮ್ಮ ಕಾರ್ಯಾಲಯದಲ್ಲಿರುವ ಎಲ್ಲ ಸಿಬ್ಬಂದಿಗೆ ವಾರ್ಡ್‌ಗಳನ್ನು ಹಂಚಿಕೆ ಮಾಡಿ ಕೊರೋನಾ ನಿಯಮಾವಳಿ ಉಲ್ಲಂಘಿಸುವವರಿಂದ ನಿಯಮಾನುಸಾರ ಪ್ರತಿದಿನ ದಂಡ ವಸೂಲು ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಆದೇಶಿಸಿದ್ದಾರೆ.

ಆಯುಕ್ತರು, ಮುಖ್ಯ ಅಧಿಕಾರಿಗಳನ್ನೇ ಹೊಣೆ

ವಸೂಲಿಯಾದ ದಂಡದ ಮೊಬಲಗುಗಳ ಸಂಬಂಧ ನಿಯಮಾನುಸಾರ ದಾಖಲೆಗಳನ್ನು ನಿರ್ವಹಣೆ ಮಾಡಿ ಸ್ಥಳೀಯ ಸಂಸ್ಥೆಗಳ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವಂತೆ ಹಾಗೂ ಪ್ರತಿದಿನ ಕಚೇರಿಗೆ ವರದಿ ಸಲ್ಲಿಸುವಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ನಿಯಮಾನುಸಾರ ಈ ಆದೇಶವನ್ನು ಪಾಲಿಸದಿದ್ದಲ್ಲಿ ಸಂಬಂಧಿಸಿದ ಪೌರಾಯುಕ್ತರು, ಮುಖ್ಯಾಧಿಕಾರಿಗಳ ವಿರುದ್ಧವೇ ಶಿಸ್ತು ಕ್ರಮ ಜರುಗಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಜಿಲ್ಲೆಯೊಳಗೆ ದಿನದಿಂದ ದಿನಕ್ಕೆ ಕೊರೋನಾ ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಕೋವಿಡ್‌ ನಿಯಮಾವಳಿಗಳನ್ನು ಪಾಲಿಸದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಜನರು ಎಚ್ಚೆತ್ತುಕೊಳ್ಳುವಂತೆ ಮಾಡಲು ದಂಡಶಿಕ್ಷೆ ಅನಿವಾರ್ಯವಾಗಿದೆ. ಅದಕ್ಕಾಗಿ ಸರ್ಕಾರದ ನಿರ್ದೇಶನದಂತೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಕಠಿಣವಾಗಿ ಜಾರಿಗೊಳಿಸಲಾಗುತ್ತಿದೆ.

- ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ, ಮಂಡ್ಯ.