ಬೆಂಗಳೂರು [ಜು.28] :  ರಾಜ್ಯದ ಕರಾವಳಿ ಜಿಲ್ಲೆಗಳ ಕೆಲವೆಡೆ ಜು.31ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಒಳನಾಡು ಜಿಲ್ಲೆಗಳಲ್ಲಿ ದುರ್ಬಲವಾಗಿದ್ದ ಮುಂಗಾರು ಕಳೆದೆರಡು ದಿನಗಳಿಂದ ಸ್ವಲ್ಪ ಚುರುಕುಗೊಂಡಿದ್ದು, ಕೆಲವಡೆ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ತುಂತುರು ಹಾಗೂ ಸಾಧಾರಣ ಮಳೆ ಮುಂದುವರಿದಿದೆ. ಕರಾವಳಿ ಜಿಲ್ಲೆಗಳ ಬಹುತೇಕ ಕಡೆ ಮಳೆಯಾಗುತ್ತಿದೆ. ತಿಂಗಳಾಂತ್ಯದವರೆಗೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

ಜೂನ್‌ ಆರಂಭದಿಂದ ಈವರೆಗೆ ವಾಡಿಕೆಯಂತೆ ರಾಜ್ಯದಲ್ಲಿ ಸರಾಸರಿ 441 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, ಕೇವಲ 358 ಮಿ.ಮೀ ಮಳೆಯಾಗಿದ್ದು, ಶೇ.19ರಷ್ಟುಮಳೆ ಕೊರತೆ ಉಂಟಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶೇ.17, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೇ. 21ರಷ್ಟು, ಮಲೆನಾಡು ಜಿಲ್ಲೆಗಳಲ್ಲಿ ಶೇ.33ರಷ್ಟು, ಕರಾವಳಿ ಜಿಲ್ಲೆಗಳಲ್ಲಿ ಶೇ.14ರಷ್ಟುಮಳೆ ಕೊರತೆ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಶನಿವಾರ ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸೇರಿದಂತೆ ಕೆಲವಡೆ ಸಾಧಾರಣ ಮಳೆಯಾಗಿರುವ ವರದಿಯಾಗಿದೆ ಎಂದು ತಿಳಿಸಿದೆ.