ನರಸಿಂಹರಾಜಪುರ (ಜ.23): ಮಲೆನಾಡು ಗಿಡ್ಡ ತಳಿಯ ಹಾಲಿನಲ್ಲಿ ಔಷಧ ಗುಣಗಳಿದ್ದು, ಕೇರಳ ರಾಜ್ಯದಲ್ಲಿ ಬೇಡಿಕೆ ಹೆಚ್ಚುತ್ತಿದೆ. 1 ಗಿಡ್ಡ ತಳಿಯ ದನ 1 ಲಕ್ಷ ರು.ಗೆ ಮಾರಾಟವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್‌. ಸದಾಶಿವ ಹೇಳಿದರು.

 ಪಶುಪಾಲನಾ ಇಲಾಖೆ, ಗುಬ್ಬಿಗಾ ಗ್ರಾಮ ಪಂಚಾಯಿತಿ, ಹಾಲು ಉತ್ಪಾದಕರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆದ ಮಿಶ್ರತಳಿ ಹಸು ಹಾಗೂ ಕರುಗಳ ಪ್ರದರ್ಶನ, ಜಾನುವಾರುಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮಲೆನಾಡು ಗಿಡ್ಡ ತಳಿಯ ಹಾಲು ಆರೋಗ್ಯಕ್ಕೆ ಒಳ್ಳೆಯದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಮಲೆನಾಡು ಭಾಗದವರಿಗೆ ಗಿಡ್ಡ ತಳಿಯ ಮಹತ್ವ ಇನ್ನೂ ತಿಳಿದಿಲ್ಲ. ಈ ಭಾಗದಲ್ಲಿ ಈಗ ಕೇವಲ ಒಂದು ಅಥವಾ ಎರಡು ಜಾನುವಾರುಗಳನ್ನು ಮಾತ್ರ ಸಾಕಲಾಗುತ್ತಿದೆ. ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಗೀರ್‌ ತಳಿಯ ಹಾಲಿಗೂ ಉತ್ತಮ ಬೇಡಿಕೆ ಇದೆ. ಜಾನುವಾರುಗಳನ್ನು ಸಾಕಲು ಪಶು ವೈದ್ಯ ಇಲಾಖೆಯಲ್ಲಿ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ಎನ್‌.ಆರ್‌.ಈ.ಜಿ. ಯೋಜನೆಯಡಿ ದನದ ಕೊಟ್ಟಿಗೆ ನೀಡಲು ಸಹಾಯಧನ ನೀಡಲಾಗುತ್ತದೆ. ರೈತರು ಈ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು. ಅಲ್ಲದೆ ಗಿರಿರಾಜ ಕೋಳಿ ವಿತರಣೆ ಮಾಡಲಾಗುತ್ತದೆ. ಈ ವರ್ಷ ತಾಲೂಕಿಗ 42 ಘಟಕ ಬಂದಿವೆ. ಗುಬ್ಬಿಗಾ ಗ್ರಾಮ ಪಂಚಾಯಿತಿಗೆ 3 ಫಲಾನುಭವಿಗಳಿಗೆ ನೀಡಲಾಗುತ್ತದೆ ಎಂದರು.

ಚಿತ್ರದುರ್ಗ: 5 ನಿಮಿಷದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ ಗೋಮಾತೆ.

ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್‌. ನಾಗೇಶ್‌ ಮಾತನಾಡಿ, ಗ್ರಾಮಗಳಲ್ಲಿ ಈಗ ದನ ಮೇಯುವ ಗೋಮಾಳ ಜಾಗವು ಒತ್ತುವರಿಯಾಗಿದೆ. ದನಗಳು ಮೇಯಲು ಜಾಗವಿಲ್ಲವಾಗಿದೆ. ಹಿಂದಿನ ಕಾಲಕ್ಕಿಂತ ಈಗ ಪಶು ವೈದ್ಯ ಇಲಾಖೆಯಲ್ಲಿ ಹೆಚ್ಚು ಸೌಲಭ್ಯಗಳು ಸಿಕ್ಕುತ್ತಿದೆ. ಇದನ್ನು ರೈತರು ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅವಳಿ ಕರುಗಳಿಗೆ ಜನ್ಮ ನೀಡಿದ ಗೋಮಾತೆ; ಇಲ್ಲಿದೆ ವಿಡಿಯೋ..!...

ನರಸಿಂಹರಾಜಪುರ ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ವಿಜಯಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ 2 ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮಿಶ್ರತಳಿ ಜಾನುವಾರುಗಳನ್ನು ಸಾಕಲು ಪ್ರೋತ್ಸಾಹ ನೀಡುವುದೇ ಇದರ ಉದ್ದೇಶ. ಇಂದು ವಿವಿಧ ಜಾತಿಯ ಜಾನುವಾರುಗಳ ಸ್ಪರ್ಧೆ ಇದ್ದು ಗೆದ್ದ ಜಾನುವಾರುಗಳ ಮಾಲೀಕರಿಗೆ ಬಹುಮಾನ ನೀಡಲಾಗುವುದು. ಜ.29ರಂದು 2ನೇ ಕಾರ್ಯಕ್ರಮ ಬಿ.ಎಚ್‌.ಕೈಮರದಲ್ಲಿ ನಡೆಯಲಿದೆ. ತಾಪಂ ಅನುದಾನದಲ್ಲಿ 1 ವರ್ಷಕ್ಕೆ 13 ಕಾರ್ಯಕ್ರಮ ನಡೆಸಲಿದ್ದೇವೆ. ಪಶು ಪಾಲನಾ ಇಲಾಖೆಯಿಂದ ಜಲಕೃಷಿ ಯೋಜನೆಗೆ ಸಹಾಯಧನ, ಮೇವು ಕತ್ತರಿಸುವ ಯಂತ್ರಕ್ಕೆ ಶೇ.50ರಷ್ಟುಸಹಾಯಧನ, ಮೇವಿನ ಬೀಜ ನೀಡುವ ಯೋಜನೆ, ಗಿರಿರಾಜ ಕೋಳಿ ನೀಡುವ ಯೋಜನೆಗಳಿವೆ. ಪಶುಭಾಗ್ಯ ಯೋಜನೆಯಡಿ ತಾಲೂಕಿಗೆ 8 ಫಲಾನುಭವಿಗಳಿಗೆ ನೀಡಲಾಗುವುದು ಎಂದು ವಿವರಿಸಿದರು.

ಅಧ್ಯಕ್ಷತೆಯನ್ನು ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ಗಂಗಮ್ಮ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷ ಶಂಕರ್‌, ಸದಸ್ಯರಾದ ಸಂಗೀತ, ಎಲಿಯಾಸ್‌, ಗುಬ್ಬಿಗಾ ಹಾಲು ಒಕ್ಕೂಟದ ಅಧ್ಯಕ್ಷ ಮಧು, ವಗಡೆಕಲ್ಲು ಹಾಲು ಒಕ್ಕೂಟದ ಅಧ್ಯಕ್ಷ ವರ್ಗೀಸ್‌, ಪಿಡಿಓ ರತ್ನಮ್ಮ, ಕಟ್ಟಿನಮನೆ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಕೇಶ್‌, ಬಾಳೆಹೊನ್ನೂರು ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಿಧಾ, ಮುತ್ತಿನಕೊಪ್ಪ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪವನ್‌ ಉಪಸ್ಥಿತರಿದ್ದರು.

ಜಾನುವಾರುಗಳ ಪ್ರದರ್ಶನದಲ್ಲಿ ವಿಜೇತರಾದ ರೈತರಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಎಲ್ಲ ಜಾನುವಾರುಗಳ ರೈತರಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು. ಆದರ್ಶ ಸ್ವಾಗತಿಸಿ, ಡಾ.ರಾಕೇಶ್‌ ಕಾರ್ಯಕ್ರಮ ನಿರೂಪಿಸಿದರು.