ಕಲಬುರಗಿ: ಭೀಕರ ಚಳಿಗೆ ಥಂಡಾ ಹೊಡೆದ ಆಳಂದ ಜನ..!
ಸಂಜೆ 6 ಬೆಳಿಗ್ಗೆ 8 ಗಂಟೆವರೆಗೂ ಚಳಿ ಹೆಚ್ಚಾಗುತ್ತಿದೆ. ನಸುಕಿನ 3ರಿಂದ 5 ಗಂಟೆ ಸಮಯದಲ್ಲಿ ಚಳಿ ಮತ್ತಷ್ಟು ಜೋರಾಗಿ ಬೀಸತೊಡಗಿದೆ.
ಆಳಂದ(ನ.23): ತಾಲೂಕಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರವಾದ ಶೀತಗಾಳಿ ಬೀಸುತ್ತಿದ್ದು, ತಾಲೂಕಿನ ಜನತೆ ಚಳಿಗೆ ನಡುಗತೊಡಗಿದ್ದಾರೆ. ನಾಲ್ಕು ಗೋಡೆಯ ಮಧ್ಯೆ ಇದ್ದರೂ ಚಳಿಯ ಕಾಟ ತಡೆಯಲು ಆಗುತ್ತಿಲ್ಲ ಇದರಿಂದ ಉಣ್ಣೆ ಬಟ್ಟೆ, ರಗ್ಗು ಧರಿಸಿ ಮಲಗುವುದು ಸರ್ವೇ ಸಾಮಾನ್ಯವಾಗಿದೆ. ಯುವಕರು, ವಯೋವೃದ್ಧರು, ಮಹಿಳೆಯರು ಚಳಿಯಿಂದ ರಕ್ಷಿಸಿಕೊಳ್ಳಲು ಮನೆಯ ಮುಂದೆ ಕಸಕಡ್ಡಿಗೆ ಬೆಂಕಿಹಚ್ಚಿ ದೇಹಕ್ಕೆ ಕಾವು ಪಡೆಯುತ್ತಿದ್ದಾರೆ. ಸಂಜೆ 6 ಬೆಳಿಗ್ಗೆ 8 ಗಂಟೆವರೆಗೂ ಚಳಿ ಹೆಚ್ಚಾಗುತ್ತಿದೆ. ನಸುಕಿನ 3ರಿಂದ 5 ಗಂಟೆ ಸಮಯದಲ್ಲಿ ಚಳಿ ಮತ್ತಷ್ಟು ಜೋರಾಗಿ ಬೀಸತೊಡಗಿದೆ.
ಕಳೆದ 2, 3 ವರ್ಷಗಳಿಂದ ನಿರಂತರ ಮಳೆ ಸುರಿದು ವಾಡಿಕೆಗಿಂತಲೂ ಮಳೆಯಾಗಿದ್ದರಿಂದ ಭೂಮಿ ತಣ್ಣಗಾಗಿ ಶೀತಗಾಳಿ ಬೀಸುತ್ತಿದೆ. ತಾಲೂಕಿನಲ್ಲಿ ಕನಿಷ್ಟ20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ.
ದಿವ್ಯಾಂಗ ವ್ಯಕ್ತಿಯ ಕೃಷಿ ಕಾಯಕಕ್ಕೆ ಬೆಕ್ಕಸ ಬೆರಗಾದ ಕಲಬುರಗಿ ಮಂದಿ..!
ನಿತ್ಯ ಬೆಳಗಿನಜಾವ ವಾಯು ವಿಹಾರಕ್ಕೆ ಹೋಗುವವರು ಸ್ವಲ್ಪ ತಡವಾಗಿ ಮನೆಯಿಂದ ಹೋಗುತ್ತಿದ್ದಾರೆ. ವಯೋವೃದ್ಧರು, ನಿವೃತ್ತ ನೌಕರರು ವಾಯು ವಿಹಾರಕ್ಕೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಮಕ್ಕಳಂತೂ ಹಾಸಿಗೆಯಿಂದ ಎದ್ದೇಳಲು ಹಿಂದೇಟು ಹಾಕುತ್ತಿದ್ದಾರೆ. ಒಟ್ಟಾರೆ ಮುಟ್ಟಿದ್ದೆಲ್ಲಾ ಮಂಜುಗಡ್ಡೆಯಂತೆ ತಣ್ಣಗಾಗಿದ್ದರೆ, ಕೈಕಾಲುಗಳು ಹೆಚ್ಚಿನ ಶೀತದಿಂದ ಕುಟ್ ಹಿಡಿಯುತ್ತಿವೆ. ಹೀಗಾಗಿ ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯದ ಪೂರ್ವದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಜನ ಬೆಂಕಿ ಮೈಕೈ ಕಾಯಿಸಿಕೊಳ್ಳುವುದು ಗೋಚರಿಸುತ್ತಿದೆ.
ಸೂಯಾಸ್ತವಾಗುವ ಮುನ್ನವೇ ಬಾನಾಡಿಗಳು ಗೂಡು ಸೇರುವಂತೆ ಜನರು ಊರಿನ ಸಾರ್ವಜನಿಕ ಕಟ್ಟೆ, ದೇವಾಲಯ, ಹೋಟೆಲ್ ಮೊದಲಾದ ಕಡೆ ಸಂಜೆಯಿಂದ ತಡರಾತ್ರಿವರೆಗೆ ಕುಳಿತು ಹರಟೆ ಹೊಡೆಯುವ ಜನ ಈಗ ರಾತ್ರಿ 7 ಗಂಟೆಗೆ ಮನೆ ಸೇರುವಂತಾಗಿದೆ. ಮಂಗಳವಾರ ಭಾಗಶಃ ಮೋಡ ಕವಿದ ವಾತಾವರಣ ಕಂಡಿತು.