ಕೊಪ್ಪಳ ತಾಲೂಕಿನ ಇರಕಲ್ ಗಡ ಗ್ರಾಮದಲ್ಲಿ, ಹಳೆ ವೈಷಮ್ಯದಿಂದ ದುಷ್ಕರ್ಮಿಗಳು ರೈತ ಹನುಮಪ್ಪ ಪಿನ್ನಿ ಎಂಬುವವರ ದನದ ಕೊಟ್ಟಿಗೆಗೆ ಬೆಂಕಿ ಹಚ್ಚಿದ್ದಾರೆ. ಈ ಘೋರ ಕೃತ್ಯದಲ್ಲಿ ಎರಡು ಎತ್ತು, ಎರಡು ಆಕಳು, ಒಂದು ಆಡು ಹಾಗೂ ಒಂದು ನಾಯಿ ಸೇರಿದಂತೆ ಆರು ಮೂಕ ಪ್ರಾಣಿಗಳು ಜೀವಂತ ದಹನವಾಗಿವೆ.

ಕೊಪ್ಪಳ (ಮಾ.20): ಮನುಷ್ಯನ ದ್ವೇಷಕ್ಕೆ ಮೂಕ ಪ್ರಾಣಿಗಳು ಬಲಿಯಾಗಿರುವ ಆಘಾತಕಾರಿ ಘಟನೆಯೊಂದು ಕೊಪ್ಪಳ ತಾಲೂಕಿನ ಇರಕಲ್ ಗಡ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ. ಹಳೆ ವೈಷಮ್ಯವೋ ಕಿಡಿಗೇಡಿಗಳ ಕೃತ್ಯವೋ ಗೊತ್ತಿಲ್ಲ, ದುಷ್ಕರ್ಮಿಗಳು ದನದ ಕೊಟ್ಟಿಗೆಗೆ ಬೆಂಕಿ ಹಚ್ಚಿದ ಪರಿಣಾಮ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಜೀವಂತವಾಗಿ ನರಳಿ ನರಳಿ ಸಾವನ್ನಪ್ಪಿವೆ. ಹನುಮಪ್ಪ ಪಿನ್ನಿ ಎಂಬುವವರಿಗೆ ಸೇರಿದ ಈ ಕೊಟ್ಟಿಗೆ ಈಗ ಸ್ಮಶಾನ ಸದೃಶವಾಗಿದೆ. ಕೊಟ್ಟಿಗೆಯಲ್ಲಿದ್ದ ಜಾನುವಾರು ಸುಟ್ಟು ಕರಕಲಾಗಿವೆ.

Add Asianetnews Kannada as a Preferred SourcegooglePreferred

ಸುಟ್ಟು ಕರಕಲಾದ ಜಾನುವಾರು ಕಂಡು ಹನುಮಪ್ಪ ಕಣ್ಣೀರು!

ಇರಕಲ್ ಗಡ ಗ್ರಾಮದ ರೈತ ಹನುಮಪ್ಪ ಪಿನ್ನಿ ಎಂಬ ರೈತ ಎಂದಿನಂತೆ ನಿನ್ನೆ ಸಂಜೆ ತಮ್ಮ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ, ಸುರಕ್ಷತೆಯ ದೃಷ್ಟಿಯಿಂದ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು. ಆದರೆ, ರಾತ್ರಿಯ ಕತ್ತಲಲ್ಲಿ ಬಂದ ದುಷ್ಕರ್ಮಿಗಳು ಕೊಟ್ಟಿಗೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಕೊಟ್ಟಿಗೆಗೆ ಬೀಗ ಹಾಕಿದ್ದರಿಂದಾಗಿ ಒಳಗಿದ್ದ ಪ್ರಾಣಿಗಳಿಗೆ ಹೊರಬರಲಾಗದೆ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ನರಳಿ ನರಳಿ ಜೀವಬಿಟ್ಟಿವೆ.

ಇದನ್ನೂ ಓದಿ: ಗದಗ: ರಥೋತ್ಸವದ ವೇಳೆ ಕಾರು ಅಡ್ಡ ನಿಲ್ಲಿಸಿ ಕಿರಿಕ್, ದಾರಿ ಬಿಡುವಂತೆ ಹೇಳಿದ್ದಕ್ಕೆ ಹಲ್ಲೆ? ಸಲೀಂ ಗ್ಯಾಂಗ್ ಅರೆಸ್ಟ್!

ಬೆಳಗ್ಗೆ ಎಂದಿನಂತೆ ಕೊಟ್ಟಿಗೆಗೆ ಹೋಗಿದ್ದ ರೈತ ಹನುಮಪ್ಪ ಅಲ್ಲಿನ ಭೀಕರ ದೃಶ್ಯ ಕಂಡು ಕುಸಿದುಬಿದ್ದು ಏನೂ ತೋಚದಂತಾಗಿ, ಅಸಹಾಯಕನಾಗಿ ಕಣ್ಣೀರು ಹಾಕಿದ್ದಾನೆ. ತನಗಾದ ನಷ್ಟಕ್ಕಿಂತ ಹೆಚ್ಚಾಗಿ ಸಾಕಿ ಬೆಳೆಸಿದ ಜಾನುವಾರುಗಳು ಕಣ್ಮುಂದೆ ಸುಟ್ಟು ಕರಕಲಾಗಿರುವುದು ಕಂಡು ಕಣ್ಣೀರು ಹಾಕುತ್ತಿದ್ದಾರೆ.

ಎತ್ತು, ಆಕಳು ಸೇರಿದಂತೆ ಆರು ಜೀವಗಳು ಬಲಿ

ಕೃಷಿ ಕೆಲಸಕ್ಕೆ ಆಸರೆಯಾಗಿದ್ದ 2 ಎತ್ತುಗಳು, ಹಾಲು ಕೊಡುತ್ತಿದ್ದ 2 ಆಕಳುಗಳು ಸೇರಿದಂತೆ ಒಂದು ಆಡು ಹಾಗೂ ಮನೆಯನ್ನು ಕಾಯುತ್ತಿದ್ದ ನಾಯಿ ಕೂಡ ಬೆಂಕಿಗೆ ಆಹುತಿಯಾಗಿವೆ. ದುಷ್ಕರ್ಮಿಗಳ ಈ ಕ್ರೂರ ಕೃತ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, 'ಪ್ರಾಣಿಗಳಿಗೇನು ಗೊತ್ತು ಮನುಷ್ಯರ ದ್ವೇಷ?' ಅವುಗಳನ್ನ ಸುಟ್ಟು ಈ ದುಷ್ಕರ್ಮಿಗಳಿಗೆ ಪಾಪ ತಟ್ಟದೇ ಇರದು ಎಂದು ಕಿಡಿಕಾರುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಜಾನುವಾರುಗಳನ್ನು ಕಳೆದುಕೊಂಡ ರೈತ ಕುಟುಂಬ ಈಗ ಬೀದಿಗೆ ಬಿದ್ದಂತಾಗಿದೆ.

ಇದನ್ನೂ ಓದಿ: Photos: ಚಾಲಕನ ನಿರ್ಲಕ್ಷ್ಯ, ತನ್ನಿಂತಾನೆ ಚಲಿಸಿ ಡಿಪೋದ ಕಟ್ಟಡಕ್ಕೆ ನುಗ್ಗಿದ BMTC ಬಸ್!

ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನ ಬಂಧಿಸಿ, ರೈತನಿಗೆ ನ್ಯಾಯ ಕೊಡಿಸಿ

ಕೊಪ್ಪಳ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆಂಕಿ ಹಚ್ಚಿದ ಆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಿ ರೈತನಿಗೆ ನ್ಯಾಯ ಕೊಡಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.