ಬೆಂಗಳೂರು[ಸೆ. 22] ಬೆಂಗಳೂರು ದಕ್ಷಿಣ ವ್ಯಾಪ್ತಿಯ ಆಡುಗೋಡಿ ಪೊಲೀಸ್ ಇನ್ಸ್ ಪೆಕ್ಟರ್ ದಿಲೀಪ್ ಕೆ.ಎಚ್. ಎಂದಿನಂತೆ ತಮ್ಮ ಕರ್ತವ್ಯದಲ್ಲಿ ಮಗ್ನರಾಗಿದ್ದರು. ಆಗ ಪಿವಿಆರ್ ಸಿನಿಮಾ ಮಂದಿರದಿಂದ ಕರೆಯೊಂದು ಬರುತ್ತದೆ. ಅನುಮಾನಾಸ್ಪದವಾಗಿ ಥಿಯೇಟರ್ ಒಳನುಗ್ಗಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬ ನಮ್ಮ ವಶದಲ್ಲಿದ್ದಾನೆ. ದಯವಿಟ್ಟು ಬಂದು ವಿಚಾರಣೆ ಮಾಡಿ ಎಂದು ಪಿವಿಆರ್ ಸಿಬ್ಬಂದಿ ಕರೆ ಮಾಡಿರುತ್ತಾರೆ.

ತಕ್ಷಣ ಸ್ಥಳಕ್ಕೆ ಧಾವಿಸುವ ದಿಲೀಪ್ ಮತ್ತು ಅವರ ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತರುತ್ತಾರೆ. ಟಿಕೆಟ್ ಇಲ್ಲದೇ ಸಿನಿಮಾ ನೋಡಲು ಒಳನುಗ್ಗುತ್ತಿದ್ದ ಎಂಬ ಆರೋಪದ ಮೇಲೆ ವ್ಯಕ್ತಿಯನ್ನು ವಶಕ್ಕೆ ಪಡೆಯುತ್ತಾರೆ. ಆದರೆ ವಿಚಾರಣೆ ನಡೆಸಿದಾಗ ಬೇರೆಯದೇ ಕತೆ ತೆರೆದುಕೊಳ್ಳುತ್ತದೆ.

ಉತ್ತರ ಕರ್ನಾಟಕ ಮೂಲದ ವ್ಯಕ್ತಿ ಬಡತನದಿಂದ ಸಂಕಷ್ಟಕ್ಕೆ ಸಿಲುಕಿದವ. ತಮ್ಮ ನೆಚ್ಚಿನ ನಟ ಪ್ರಭಾಸ್ ಅವರ ಸಾಹೋ ಚಿತ್ರ ವೀಕ್ಷಣೆಗೆ ಹಣವಿಲ್ಲದೇ ಅನಿವಾರ್ಯವಾಗಿ ಥಿಯೇಟರ್ ಗೆ ನುಗ್ಗುವ ಯತ್ನ ಮಾಡಿದ್ದ. ಬಾಲ್ಯದಲ್ಲಿಯೇ ಪಾಲಕರ ಕಳೆದುಕೊಂಡವ ಜಾಸ್ತಿ ಶಿಕ್ಷಣ ಏನನ್ನೂ ಪಡೆದಿರಲಿಲ್ಲ. ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದವನಿಗೆ  ಉದ್ಯೋಗ ಸಿಕ್ಕಿರಲಿಲ್ಲ. ಈ ನಡುವೆ ಬಿಡುಗಡೆಯಾದ ‘ಸಾಹೋ;  ಸಿನಿಮಾ ನೋಡುವ ಆಸೆಯಾಗಿತ್ತು. ಥಿಯೇಟರ್ ಗೆ ಬಂದಿದ್ದವ ಒಳನುಗ್ಗುವ ಯತ್ನ ಮಾಡಿ ಸಿಬ್ಬಂದಿ ಕೈಗೆ ಸಿಕ್ಕಿಹಾಕಿಕೊಂಡು ಪೆಟ್ಟು ತಿಂದಿದ್ದ.

ತಾನು ಬರಬಹುದಾಗಿದ್ದರೂ ಶ್ವಾನಕ್ಕಾಗಿ ಪ್ರವಾಹದ ಮಧ್ಯವೇ ದಿನ ಕಳೆದ ಹುಬ್ಬಳ್ಳಿ ಅಜ್ಜ!

ಎಲ್ಲವನ್ನು ಅರಿತುಕೊಂಡ ಇನ್ಸ್ ಪೆಕ್ಟರ್ ದಿಲೀಪ್ ಠಾಣೆಗೆ ಕರೆದುಕೊಂಡು ಬಂದಿದ್ದ ಸುರೇಶ್ ಅವರಿಗೆ ಮೊದಲು ತಿಂಡಿ ಮತ್ತು ಬಟ್ಟೆಯ ವ್ಯವಸ್ಥೆ ಮಾಡಿದರು.  ಇದಾದ ಮೇಲೆ ಸುರೇಶ್ ಅವರನ್ನು ಪಿವಿಆರ್ ಗೆ ಕರೆದುಕೊಂಡು ಹೋಗಿ ತಮ್ಮದೆ ಹಣದಲ್ಲಿ ಸಾಹೋ ಸಿನಿಮಾ ತೋರಿಸಿದ್ದಾರೆ.  ಅಲ್ಲದೇ ದಿಲೀಪ್ ಸಹ ಆತನೊಂದಿಗೆ ಸಿನಿಮಾ ನೋಡಿದ್ದಾರೆ. 

ಇಷ್ಟಕ್ಕೆ ಸುಮ್ಮನಾಗದ ದಿಲೀಪ್ ಪೊಲೀಸ್ ಸ್ಟೇಶನ್ ನಲ್ಲಿ ಹೌಸ್ ಕೀಪಿಂಗ್ ಕೆಲಸದ ಜತೆಗೆ ಹತ್ತಿರದ ಹೊಟೇಲ್ ವೊಂದರಲ್ಲಿಯೂ ಕೆಲಸ ಕೊಡಿಸಿದ್ದಾರೆ. ದಿಲೀಪ್ ಅವರ ಮಾನವೀಯ ಕೆಲಸ ಮೆಚ್ಚಿಕೊಂಡಿರುವ ಡಿಸಿಪಿ ಇಶಾ ಪಂತ್ ಸಹ ಮೆಚ್ಚುಗೆ ಸೂಚಿಸಿದ್ದಾರೆ. ಮಾನವೀಯತೆ ನೆಲೆಯಲ್ಲಿ ಉತ್ತಮ ಕೆಲಸ ಮಾಡಿದ ದಿಲೀಪ್ ಅವರಿಗೆ ನಮ್ಮ ಕಡೆಯಿಂದಲೂ ಅಭಿನಂದನೆ.