ವಸಂತಕುಮಾರ್‌ ಕತಗಾಲ

ಕಾರವಾರ [ಆ.13]:  ‘ಅಣ್ಣಾರಾ ನಮ್ಮ ಊರ್ನಾಗೆ ಭಾರೀ ಬರ ಐತ್ರೀ. ಹೊಲ ಪಲ ಮಾಡಾಕ ಆಗಾಂಗಿಲ್ಲಾ ಹೇಳಿ ನೀರ ಹುಡಕಂತಾ ಇಲ್ಲಿ ಬಂದ ನೆಲೆಸಿವ್ರಿ. ಆದ್ರ ಆ ನೀರೇ ನಮ್ಮ ಭವಿಸ್ಯ ತೆಗೆದ ಬಿಡಿತ್ರೕ.’

ಇದು ಹಾವೇರಿಯಲ್ಲಿ ಬರಗಾಲದಿಂದ ಬದುಕು ಕಟ್ಟಿಕೊಳ್ಳಲಾಗದೆ ಉದ್ಯೋಗ ಹುಡುಕುತ್ತ ಕಾರವಾರದ ಕುರ್ನಿಪೇಟೆಗೆ ಬಂದ ದಿನಗೂಲಿ ಕಾರ್ಮಿಕ ಕುಟುಂಬವೊಂದರ ನೋವಿನ ಮಾತು. ನೀರಿಲ್ಲದ ಗೋಳಿನಿಂದ ಗುಳೆ ಎದ್ದು ಬಂದವರನ್ನು ಆ ನೀರೇ ಗೋಳು ಹೊಯ್ದುಕೊಳ್ಳುವಂತೆ ಮಾಡಿದೆ. ಕೈಗಾ ಸಮೀಪದ ವಿರ್ಜೆ ಪರಿಹಾರ ಕೇಂದ್ರದಲ್ಲಿರುವ ಹಾವೇರಿಯ ಕೆಲವು ಕುಟುಂಬಗಳಿಗೆ ಮುಂದೇನು ಎಂಬ ಚಿಂತೆ ಎದುರಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಾವೇರಿಯ ಮಹಾಂತೇಶ್‌ ವೀರಪ್ಪ ದೇವೇಶ್‌, ಪೂರ್ಣಾ ಮಹಾಂತೇಶ್‌ ಮತ್ತಿತರರ ಕುಟುಂಬಗಳು ಎಲ್ಲವನ್ನೂ ಕಳೆದುಕೊಂಡಿವೆ. ಕಾಳಿ ನದಿಯ ಅಬ್ಬರದಲ್ಲಿ ಈ ಬಡ ಕುಟುಂಬದವರ ಮನೆಯಲ್ಲಿದ್ದ ಎಲ್ಲ ವಸ್ತುಗಳು ಜಲಸಮಾಧಿಯಾಗಿವೆ. ದಾಖಲೆಗಳು ನೀರು ಪಾಲಾಗಿವೆ. ಉಕ್ಕೇರಿದ ಕಾಳಿಯಿಂದ ಬಚಾವಾಗಲು ಉಟ್ಟಬಟ್ಟೆಯಲ್ಲಿ ಗುಡ್ಡವೇರಿದ ಈ ಕುಟುಂಬಗಳು ಪರಿಹಾರ ಕೇಂದ್ರದ ಊಟಕ್ಕಾಗಿ ಕೈಯೊಡ್ಡುವಂತಾಗಿದೆ.

ಕಾಡುತ್ತಿರುವ ಅನಾರೋಗ್ಯ:

ಪರಿಹಾರ ಕೇಂದ್ರದಲ್ಲಿ ವೈದ್ಯರು ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ. ಶುಶ್ರೂಷಕಿಯರು ಕೂಡ ಲಭ್ಯ ಇರುತ್ತಾರೆ. ಆದರೆ ನೆರೆ ಸಂತ್ರಸ್ತರನ್ನು ಜ್ವರ ಹಾಗೂ ನೆಗಡಿ ಕಾಡುತ್ತಿದೆ. ಕೆಲವೆಡೆ ನೀರಿನ ಸಮಸ್ಯೆಯೂ ಉಂಟಾಗಿದೆ. ರಾಡಿ ಮಣ್ಣಿನಲ್ಲಿ ನಡೆದಾಗಿ ಕಾಲುಗಳಲ್ಲಿ ಅಲರ್ಜಿ ಸಮಸ್ಯೆ ಎದುರಾಗಿದೆ. ಔಷಧಿಗಳು ಲಭ್ಯ ಇದ್ದರೂ ನಿರಾಶ್ರಿತರು ಮನೆ, ಸಾಮಗ್ರಿಗಳನ್ನು ಕಳೆದುಕೊಂಡು ಮಾನಸಿಕವಾಗಿ, ಆರ್ಥಿಕವಾಗಿ ಹಾಗೂ ದೈಹಿಕ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ.

ಬಡಿದ ಪಾರ್ಶ್ವವಾಯು

ಕಾಳಿ ನದಿ ತೀರದಲ್ಲಿ 78 ವರ್ಷಗಳಿಂದ ಇದ್ದ ವಿಶ್ವನಾಥ ಶಂಕರ ತಾಮ್ಸೆ ಅವರನ್ನು ಸಿದ್ಧರ ಪರಿಹಾರ ಕೇಂದ್ರಕ್ಕೆ ಕರೆ ತರಲಾಗಿತ್ತು. ಆದರೆ ಬದುಕಿ ಬಾಳಿದ್ದ ಮನೆ ಕುಸಿದು ಬದುಕು ಮೂರಾಬಟ್ಟೆಯಾದ ಚಿಂತೆಯಲ್ಲಿ ರಕ್ತದೊತ್ತಡ ಹೆಚ್ಚಿ ಪಾಶ್ರ್ವವಾಯು ಬಡಿದಿದೆ. ಪರಿಹಾರ ಕೇಂದ್ರದಲ್ಲಿದ್ದ ಕುಟುಂಬದ ಐವರು ಹಣ ಸಂಗ್ರಹಿಸಿ ಮಣಿಪಾಲಕ್ಕೆ ಚಿಕಿತ್ಸೆಗೆ ಕೊಂಡೊಯ್ದಿದ್ದಾರೆ.