ಪ್ರತಿಯೊಬ್ಬರು ದಿನನಿತ್ಯ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡುವುದರಿಂದ ಸದೃಢವಾದ ಆರೋಗ್ಯ ಮತ್ತು ಪೌಷ್ಟಿಕಮಟ್ಟವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಬದುಕು ಸಂಸ್ಥೆಯ ಮೋಹನ್ ತಿಳಿಸಿದರು.

ತಿಪಟೂರು : ಪ್ರತಿಯೊಬ್ಬರು ದಿನನಿತ್ಯ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡುವುದರಿಂದ ಸದೃಢವಾದ ಆರೋಗ್ಯ ಮತ್ತು ಪೌಷ್ಟಿಕಮಟ್ಟವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಬದುಕು ಸಂಸ್ಥೆಯ ಮೋಹನ್ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಗಾಂಧಿನಗರದ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬದುಕು ಸಂಸ್ಥೆ ಸಹಯೋಗದೊಂದಿಗೆ ನಡೆದ ಪೋಷಣ್ ಮಾಸಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಥಳೀಯವಾಗಿ ದೊರೆಯುವ ಸೊಪ್ಪು ತರಕಾರಿಗಳು, ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಉಪಯೋಗಿಸುವುದರಿಂದ ಉತ್ತಮ ಆರೋಗ್ಯ, ಪೌಷ್ಟಿಕತೆಯನ್ನು ಹೊಂದಬಹುದಾಗಿದೆ. ಸ್ಥಳೀಯ ಆಹಾರಗಳು ಬಳಕೆಯಿಂದ ಆಸ್ಪತ್ರೆಯಿಂದ ದೂರವಿರಬಹುದಲ್ಲದೆ. ಹಣದ ಉಳಿತಾಯವನ್ನು ಮಾಡಬಹುದ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಇರುವ ಸೌಲಭ್ಯಗಳ ಬಗ್ಗೆ ಬಾಲ್ಯವಿವಾಹ ತಡೆಗಟ್ಟುವಿಕೆಯ ಬಗ್ಗೆ ಕಾನೂನು ಅರಿವು ಮೂಡಿಸಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯ ನಗರ ವೃತ್ತದ ಮೇಲ್ವಿಚಾರಕಿ ಮೀನಾಕ್ಷಿ ಮಾತನಾಡಿ, ಗರ್ಭಿಣಿ, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಂದ ದೊರೆಯುವ ಪೌಷ್ಟಿಕ ಆಹಾರ ಹಾಗೂ ಇತರೆ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಪಡೆಯಲು ಮಾಹಿತಿ ನೀಡಿದರು.

ಆರೋಗ್ಯ ನಿರ್ವಹಣೆಯಲ್ಲಿ ಶುದ್ಧಕುಡಿಯುವ ನೀರು, ವೈಯಕ್ತಿಕ ಸ್ವಚ್ಛತೆಗೆ ಮತ್ತು ಶೌಚಾಲಯ ಬಳಕೆಗೆ ಒತ್ತು ನೀಡಬೇಕು. ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ ಮಹಿಳೆಯರ ರಕ್ತಹೀನತೆಯನ್ನು ತಡೆಗಟ್ಟುವ ಬಗ್ಗೆ ಮಕ್ಕಳ ಆರೋಗ್ಯ ಪೌಷ್ಠಿಕತೆಯ ಬಗ್ಗೆ ಮಾಹಿತಿ ನೀಡಿದರು.

ಸರ್ಕಾರಿ ಶಾಲೆಯ ಶಿಕ್ಷಕ ಚಿದಾನಂದ್ ಮಾತನಾಡಿ, ಪೌಷ್ಟಿಕಾಂಶ ನೈಸರ್ಗಿಕ ಔಷಧಿ ಗುಣಗಳುಳ್ಳ ಸೊಪ್ಪುಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದೊರೆಯಲಿದ್ದು, ಹೆಚ್ಚಿನ ಪೌಷ್ಟಿಕಾಂಶಗಳನ್ನು ಇವುಗಳಿಂದ ಪಡೆಯಬಹುದಾಗಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಪೌಷ್ಠಿಕತೆ ಬಗ್ಗೆ ಅರಿವು ಮೂಡಿಸಿದರು.

ನಗರಸಭಾ ಸದಸ್ಯರಾದ ಭಾರತಿ ಮಂಜುನಾಥ್, ಆಶೀಫಾ ಬಾನು ಮಾತನಾಡಿ, ಸೊಪ್ಪು, ತರಕಾರಿಗಳಂತಹ ಆಹಾರಗಳಲ್ಲಿ ಹೆಚ್ಚು ಪೋಷಕಾಂಶಗಳು ಅಡಗಿದ್ದು, ಸ್ಥಳೀಯ ಆಹಾರ ಪದಾರ್ಥಗಳನ್ನು ಸೇವಿಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ. ಈ ಬಗ್ಗೆ ತಾಯಂದಿರು ಹೆಚ್ಚು ಗಮನ ಹರಿಸಿ ಪೌಷ್ಠಿಕಾಂಶಗಳ ಬಗ್ಗೆ ಅರಿವು ಮೂಡಿಸಿಕೊಂಡಲ್ಲಿ ಮನೆಮಂದಿಯೆಲ್ಲಾ ಆರೋಗ್ಯವಂತರಾಗಿರಬಹುದು ಎಂದರು.

ಕಾರ್ಯಕ್ರಮದಲ್ಲಿ ಕೇಂಬ್ರಿಡ್ಜ್ ಶಾಲಾ ವ್ಯವಸ್ಥಾಪಕ ಮುರುಳೀಧರ್, ಅಂಗನವಾಡಿ ಶಿಕ್ಷಕಿಯ ಮಮತಾ, ಶಿವಮ್ಮ, ಭ್ರಮರ, ಪದ್ಮ, ಶೀಲ ಹಾಗೂ ಸ್ಥಳೀಯರಿದ್ದರು.