ಬೆಂಗಳೂರು(ಏ.09): ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ಪ್ರಕರಣ ನಿಯಂತ್ರಿಸಲು 8500 ಬೂತ್‌ ಮಟ್ಟದ ‘ಕಾರ್ಯ ಪಡೆ’ ರಚಿಸಿ, ಪ್ರತಿ ಮನೆಗಳ ಸಮೀಕ್ಷೆ ಹಾಗೂ ಪರೀಕ್ಷೆ ಮಾಡಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.

ಕೊರೋನಾ ನಿಯಂತ್ರಣ ಸಂಬಂಧ ಬಿಬಿಎಂಪಿ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಹಿರಿಯ ಅಧಿಕಾರಿಗಳ ಜೊತೆ ವಿಕಾಸ ಸೌಧದಲ್ಲಿ ನಡೆಸಿದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ವರದಿಯಾಗುತ್ತಿರುವ ಸೋಂಕಿನ ಪ್ರಕರಣಗಳ ಪೈಕಿ ಶೇ.80ರಷ್ಟು ಬೆಂಗಳೂರಿನಲ್ಲಿ ದಾಖಲಾಗುತ್ತಿವೆ. ಹೀಗಾಗಿ ಹೆಚ್ಚಿನ ನಿಯಂತ್ರಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಸಿಬ್ಬಂದಿ, ಸರ್ಕಾರೇತರ ಸಂಘಗಳ ಪ್ರತಿನಿಧಿ ಮುಂತಾದವರನ್ನು ಒಳಗೊಂಡ ಬೂತ್‌ ಮಟ್ಟದ ಕಾರ್ಯಪಡೆ ರಚಿಸಲಾಗುವುದು. ಈ ತಂಡ ಪ್ರತಿ ಮನೆಗೆ ಭೇಟಿ ಮಾಡಿ ಸಮೀಕ್ಷೆ ಮಾಡಲಿದೆ. ಕೊರೋನಾ ಲಕ್ಷಣ ಇರುವವರು, ಲಸಿಕೆ ತೆಗೆದುಕೊಂಡಿರುವವರು, ಪಾಸಿಟಿವ್‌ ಬಂದು ಮನೆಯಲ್ಲಿ ಪ್ರತ್ಯೇಕವಾಸ ಇರುವವರ ಬಗ್ಗೆ ಮಾಹಿತಿ ಪಡೆದು ಅಗತ್ಯ ಮಾರ್ಗದರ್ಶನ ನೀಡಲಿದೆ ಎಂದರು.

ಕಳೆದ ವರ್ಷ ಕಾರ್ಯಪಡೆ ರಚಿಸಲಾಗಿದ್ದರೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಆಗಲಿಲ್ಲ. ಆದರೆ, ಈ ಬಾರಿ ಆ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ವಾರ್ಡ್‌ಗೊಂದರಂತೆ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟು 250 ಆ್ಯಂಬುಲೆನ್ಸ್‌ ಸಜ್ಜುಗೊಳಿಸಲಾಗಿದೆ. ಅಗತ್ಯವಿದ್ದ ಕಡೆಗೆ ಎರಡು ಆ್ಯಂಬುಲೆನ್ಸ್‌ ನೀಡಲಾಗುವುದು. ಜನಸಂದಣಿ ಹೆಚ್ಚಿರುವ ಪಬ್‌, ರೆಸ್ಟೋರೆಂಟ್‌, ಮಾರ್ಕೆಟ್‌, ರೈಲ್ವೆ, ಬಸ್‌ ನಿಲ್ದಾಣ ಪ್ರದೇಶಗಳಲ್ಲಿ ಆಗಾಗ ತಪಾಸಣೆ ಮಾಡಬೇಕು. ಜನರ ಜೊತೆ ಹೆಚ್ಚು ನಿಕಟ ಸಂಪರ್ಕ ಹೊಂದುವವರನ್ನು ಪದೇ ಪದೆ ತಪಾಸಣೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಬೆಂಗ್ಳೂರಲ್ಲಿ ಕೊರೋನಾರ್ಭಟ: ಬೆಡ್‌ ಸಂಖ್ಯೆ ಹೆಚ್ಚಿಸಲು ಗೌರವ್‌ ಗುಪ್ತಾ ಸೂಚನೆ

ದಿನಕ್ಕೆ 1 ಲಕ್ಷ ತಪಾಸಣೆ:

ನಗರದಲ್ಲಿ ನಿತ್ಯ 5 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ, ದಿನಕ್ಕೆ ಒಂದು ಲಕ್ಷ ಕೊರೋನಾ ಪರೀಕ್ಷೆ ನಡೆಸಬೇಕು. ಒಂದು ಪ್ರಕರಣಕ್ಕೆ 20 ಜನರ ತಪಾಸಣೆ ಮಾಡಲಾಗುವುದು. ಸಾರ್ವಜನಿಕರು ಸಹ ಪರೀಕ್ಷೆ ನಡೆಸಲು ಮನೆಗೆ ಬಂದಾಗ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜ್ವರ ಕೇಂದ್ರ ಚಾಲ್ತಿ:

ಸದ್ಯ ಪಾಲಿಕೆಯಲ್ಲಿ ಇರುವ ಎಲ್ಲ ಜ್ವರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಬರುವವರಲ್ಲಿ ವಿಷಮ ಶೀತ ಜ್ವರ ಮಾದರಿ ಲಕ್ಷಣ(ಐಎಲ್‌ಎ), ತೀವ್ರ ಉಸಿರಾಟದ ತೊಂದರೆ(ಸಾರಿ) ಲಕ್ಷಣ ಕಂಡು ಬಂದರೆ ಅವರ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ ಎಂದರು.

'ಕೊರೋನಾ ಸ್ಫೋಟಕ್ಕೆ ವಲಸೆ ಕಾರ್ಮಿಕರೇ ಕಾರಣ'

2000 ಗೃಹ ರಕ್ಷಕರ ನಿಯೋಜನೆ:

ಕೊರೋನಾ ನಿಯಮ ಪಾಲನೆಗೆ ಸದ್ಯ ಇರುವ ಮಾರ್ಷಲ್‌ಗಳ ಸಂಖ್ಯೆ ಸಾಕಾಗುವುದಿಲ್ಲ. ಜನಸಂದಣಿ ಪ್ರದೇಶಗಳಲ್ಲಿ ನಿಗಾ ವಹಿಸಲು ಎರಡು ಸಾವಿರ ಗೃಹರಕ್ಷಕ ಸಿಬ್ಬಂದಿ ನಿಯೋಜಿಸುವಂತೆ ಈಗಾಗಲೇ ಗೃಹ ಇಲಾಖೆಗೆ ಮನವಿ ಮಾಡಲಾಗಿದೆ. ವಿಶೇಷ ತಂಡ ರಚಿಸಿ ವಸತಿ ಸಮುಚ್ಛಯ ನಿವಾಸಿಗಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪಾಲಿಕೆ ಮುಖ್ಯ ಅಯುಕ್ತ ಗೌರವ್‌ ಗುಪ್ತ ಸೇರಿದಂತೆ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಹಾಸಿಗೆ ಸೌಲಭ್ಯಕ್ಕೆ ಕ್ರಮ

ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕೆಂದು ಸೂಚಿಸಲಾಗಿದೆ. ಇದರಲ್ಲಿ ಸರ್ಕಾರದ ಶಿಫಾರಸು ಮಾಡಿರುವ ರೋಗಿಗಳಿಗೆ ಎಷ್ಟುಮೀಸಲಿಡಬೇಕೆಂಬ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಲಾಗುವುದು. ಸೋಂಕಿತರಿಗೆ ಚಿಕಿತ್ಸೆ ನೀಡಲು ಐಸಿಯು, ಆಕ್ಸಿಜನ್‌ ಸೌಲಭ್ಯ ಇರುವ ಹಾಸಿಗೆಗಳು ಸಾಕಷ್ಟುಇವೆ. ಯಾವುದೇ ಕೊರತೆ ಇಲ್ಲ ಎಂದು ಸಚಿವ ಡಾ. ಸುಧಾಕರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಸಹ ಸೋಂಕು ನಿಯಂತ್ರಣಕ್ಕೆ ಈಗಾಗಲೇ ಅನೇಕ ಮಾರ್ಗಸೂಚಿ ಹೊರಡಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು.