ಮಂಡ್ಯ(ಜೂ.08): ಕೊರೋನಾ ವಿಚಾರದಲ್ಲಿ ಮಂಡ್ಯ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಕೊರೋನಾ ವೈರಾಣು ಸೋಂಕಿನ ವೈದ್ಯಕೀಯ ಪರೀಕ್ಷೆ ವರದಿ ಬರುವ ಮೊದಲೇ ಕ್ವಾರಂಟೈನ್‌ನಲ್ಲಿದ್ದ ಮುಂಬೈ ವಲಸಿಗ ಯುವಕನನ್ನು ಮನೆಗೆ ಕಳುಹಿಸಿದ್ದು, ಎರಡು ದಿನಗಳ ನಂತರ ಆತನಿಗೆ ಪಾಸಿಟಿವ್‌ ಎಂಬುದು ದೃಢಪಟ್ಟಿದೆ.

ಮುಂಬೈನಿಂದ ಬಂದಿದ್ದ ಕೆ.ಆರ್‌.ಪೇಟೆಯ ಹನುನಹಳ್ಳಿ ಗ್ರಾಮದ 27 ವರ್ಷದ ಯುವಕನನ್ನು ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಿ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿತ್ತು. ಮೊದಲೆರ​ಡು ರಿಪೋರ್ಟ್‌ ನೆಗೆಟಿವ್‌ ಬಂದಿತ್ತು. ಕ್ವಾರಂಟೈನ್‌ ಮುಗಿ​ಸಿದ ಬಳಿಕ ಸ್ಕ್ವಾಬ್‌ ಸಂಗ್ರಹಿಸಿದ ಅಧಿಕಾರಿಗಳು ಅದರ ವರದಿ ಬರುವ ಮುನ್ನವೇ ಆತನನ್ನು ಮನೆಗೆ ಕಳುಹಿಸಿದ್ದರು. ಈಗ 3ನೇ ರಿಪೋರ್ಟ್‌ನಲ್ಲಿ ಯುವಕನಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಧಾವಿಸಿದ ವೈದ್ಯಕೀಯ ಸಿಬ್ಬಂದಿ ಆ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಚಿವರ ಆಗಮನದ ವೇಳೆಯಲ್ಲೇ ಭಾರೀ ಸ್ಫೋಟ, ಅಪಾಯದಿಂದ ಪಾರಾದ ನಾರಾಯಣಗೌಡ

ಆದರೆ, ಮನೆಗೆ ಬಂದಿದ್ದ ಯುವಕ ಊರಿಡೀ ಓಡಾಡಿದ್ದಾನೆ. ಹೀಗಾಗಿ ಗ್ರಾಮದಲ್ಲಿ ಕೊರೋನಾ ಆತಂಕ ಶುರುವಾಗಿದೆ. ಈಗಾಗಲೇ ಸೋಂಕಿತನ ಮನೆಯನ್ನು ಸೀಲ್ಡೌನ್‌ ಮಾಡಿ, ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಈ ಹಿಂದೆ ಕೆ.ಆರ್‌.ಪೇಟೆ ತಾಲೂಕಿನ ಸಾದುಗೋನಹಳ್ಳಿಯ ಮಹಿಳೆಯೊಬ್ಬರನ್ನು ಇದೇ ರೀತಿ ವೈದ್ಯಕೀಯ ವರದಿ ಬರುವ ಮೊದಲೇ ಮನೆಗೆ ಕಳುಹಿಸಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದರು.