ಬೆಂಗಳೂರು[ಮಾ.11]: ಬೆಂಗಳೂರಿನಲ್ಲಿ ಒಟ್ಟು ನಾಲ್ಕು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ವಿದೇಶದಿಂದ ಆಗಮಿಸಿದವರು ಹಾಗೂ ಅವರ ಸಂಪರ್ಕದಲ್ಲಿದ್ದವರಿಗೆ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲೇ ಇದ್ದ ಯಾರಿಗೂ ಸೋಂಕು ವರದಿಯಾಗಿಲ್ಲ. ಹೀಗಾಗಿ ಸೋಂಕು ಹರಡದಂತೆ ತಡೆಗಟ್ಟುವುದನ್ನು ಆದ್ಯತೆಯಾಗಿ ಪರಿಗಣಿಸಿ ಕೆಲಸ ಮಾಡುತ್ತಿದ್ದೇವೆ. ಜನರು ಎಲ್ಲಾ ರೀತಿಯಲ್ಲೂ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಒಟ್ಟು ನಾಲ್ಕು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಮಂಗಳವಾರ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಯಡಿಯೂರಪ್ಪ ಅವರು ಬಳಿಕ ಕೊರೋನಾ ಸೋಂಕು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿದ್ದ ಟೆಕ್ಕಿ, ಪತ್ನಿ ಹಾಗೂ ಪುತ್ರಿಗೆ ಸೋಂಕು ದೃಢಪಟ್ಟಿದೆ. ಜತೆಗೆ ಮತ್ತೊಬ್ಬರಿಗೂ ಸೋಂಕು ದೃಢಪಟ್ಟಿದ್ದು, ಒಟ್ಟು ನಾಲ್ಕು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಎಲ್ಲರಿಗೂ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಹೀಗಾಗಿ ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ. ಸೋಂಕು ಹರಡದಂತೆ ಎಲ್ಲಾ ರೀತಿಯಲ್ಲೂ ಕ್ರಮ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಆತಂಕಪಡದೆ ಎಚ್ಚರವಹಿಸುವ ಮೂಲಕ ಸಹಕಾರ ನೀಡಬೇಕು ಎಂದು ಹೇಳಿದರು.

95 ಸಾವಿರ ಮಂದಿಯ ತಪಾಸಣೆ:

ಬೆಂಗಳೂರು ಹಾಗೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರುಗಳಲ್ಲಿ 95 ಸಾವಿರಕ್ಕೂ ಹೆಚ್ಚು ಮಂದಿ ವಿದೇಶಿ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. ಇವರಲ್ಲಿ ಕೊರೋನಾ ಸೋಂಕು ಹೊಂದಿರುವ ದೇಶಗಳಿಂದ ಆಗಮಿಸಿರುವ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದ 1,048 ಜನರನ್ನು ಗುರುತಿಸಿ ಪ್ರತ್ಯೇಕವಾಗಿ ನಿಗಾ ವಹಿಸಲಾಗಿದೆ. ಇವರಲ್ಲಿ ರೋಗಲಕ್ಷಣ ಇರುವ 446 ಮಾದರಿಗಳನ್ನು ಪರೀಕ್ಷಿಸಿದ್ದು 389 ಮಾದರಿಗÙಲ್ಲಿ ಸೋಂಕು ದೃಢಪಟ್ಟಿಲ್ಲ. ಉಳಿದಂತೆ ನಾಲ್ಕು ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದ್ದು ರಾಜೀವ್‌ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

700 ಹಾಸಿಗೆ ವ್ಯವಸ್ಥೆ:

ಕೊರೋನಾ ಸೋಂಕು ಚಿಕಿತ್ಸೆಗೆ ಆರೋಗ್ಯ ಇಲಾಖೆ ಅಧಿಕಾರಿಗು ಹಾಗೂ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

ಸೋಂಕಿತರ ಚಿಕಿತ್ಸೆಗೆ ಒಟ್ಟು 700 ಹಾಸಿಗೆಗಳ ವ್ಯವಸ್ಥೆ ಮಾಡಿದ್ದೇವೆ. ಉಳಿದಂತೆ 600-700 ಮಂದಿಗೆ ತಾತ್ಕಾಲಿಕ ಕ್ವಾರಂಟೈನ್‌ (ನಿಗಾ ವ್ಯವಸ್ಥೆ) ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾ ವಾರ್ಡ್‌ಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರಿನಲ್ಲಿ ಮೂರು ಕಡೆ ರಕ್ತ ಮಾದರಿ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಸದ್ಯದಲ್ಲೇ ಮೈಸೂರು, ಹಾಸನ ಹಾಗೂ ಶಿವಮೊಗ್ಗ ಮೆಡಿಕಲ್‌ ಕಾಲೇಜುಗಳಲ್ಲೂ ಪ್ರಯೋಗಾಲಯ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ಮಾಸ್ಕ್‌ ಕೊರತೆ ಇಲ್ಲ:

ಆಸ್ಪತ್ರೆಗಳಲ್ಲಿ ಮುಂದಿನ ಆರು ತಿಂಗಳಿಗೆ ಅಗತ್ಯವಿರುವಷ್ಟುಮಾಸ್ಕ್‌ ಹಾಗೂ ಚಿಕಿತ್ಸಾ ಪರಿಕರ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಮಾಸ್ಕ್‌ಗಳ ಕೃತಕ ಅಭಾವ ಸೃಷ್ಟಿಸಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ವಿಮಾನ ನಿಲ್ದಾಣ, ಗಡಿಯಲ್ಲಿ ತೀವ್ರ ತಪಾಸಣೆ

ಕೊರೋನಾ ಸೋಂಕಿತರು ಹೆಚ್ಚಾದ ಹಿನ್ನೆಲೆ ರಾಜ್ಯದಂತ ಆರೋಗ್ಯ ಇಲಾಖೆಯು ವಿಮಾನ ನಿಲ್ದಾಣ ಹಾಗೂ ಗಡಿ ಪ್ರದೇಶದಲ್ಲಿ ತಪಾಸಣೆ ಇನ್ನಷ್ಟುಪರಿಣಾಮಕಾರಿಯಾಗಿಸಲು ಮುಂದಾಗಿದೆ. ಸೋಂಕಿತರು ಇದ್ದ ಪ್ರದೇಶ ಹಾಗೂ ಅವರು ಓಡಾಟ ನಡೆಸಿದ ಪ್ರದೇಶವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಟೆಕ್ಕಿಗಳ ಆಫೀಸ್‌ ಸಿಬ್ಬಂದಿಗೆ, ಸೋಂಕಿತ ಬಾಲಕಿಯ ಶಾಲಾ ಮಕ್ಕಳು, ನೆರೆ ಹೊರೆಯವರ ತಪಾಸಣೆ ಮಾಡಲಾಗುತ್ತಿದೆ. ಜತೆ ಮನೆಯಲ್ಲಿ ನಿಗಾವಹಿಸುವ ಜತೆಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ರಾಜ್ಯದ ಇನ್ನಷ್ಟುಕಡೆ ಸೋಂಕು ಪರೀಕ್ಷೆ ಲ್ಯಾಬ್‌

ಸದ್ಯ ಬೆಂಗಳೂರಿನಲ್ಲಿ ಎರಡು ಕಡೆ ಮಾತ್ರ ಇದ್ದ ಕೊರೋನಾ ಸೋಂಕು ಪರೀಕ್ಷಾ ಕೇಂದ್ರಗಳನ್ನು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆ, ಮೈಸೂರು, ಹಾಸನ, ಶಿವಮೊಗ್ಗ ವೈದ್ಯಕೀಯ ಕಾಲೇಜಿಗೆ ವಿಸ್ತರಿಸಲಾಗಿದೆ. ಆ ಎಲ್ಲಾ ಕೇಂದ್ರಗಳು ಮಂಗಳವಾರದಿಂದ ಕಾರ್ಯಚರಣೆ ನಡೆಸುತ್ತಿವೆ. ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಬಳ್ಳಾರಿ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿಯಲ್ಲಿ ಸೋಂಕು ಪರೀಕ್ಷಾ ಕೇಂದ್ರ ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಮಾಹಿತಿ ನೀಡಿದರು.

ನೌಕರರನ್ನು ವಿದೇಶಕ್ಕೆ ಕಳಿಸುವಂತಿಲ್ಲ

ಐಟಿ ಕಂಪನಿಗಳೊಂದಿಗೆ ಸಭೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸೋಂಕಿನ ಅಪಾಯ ಕಡಿಮೆಯಾಗುವವರೆಗೂ ಯಾವ ಕಂಪನಿಯೂ ತನ್ನ ಉದ್ಯೋಗಿಗಳನ್ನು ಕೆಲಸದ ಮೇಲೆ ವಿದೇಶಕ್ಕೆ ಕಳುಹಿಸಬಾರದು ಎಂದು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್‌ ಹೇಳಿದರು.

ಈ ಬಗ್ಗೆ ಎಲ್ಲಾ ಕಂಪನಿಗಳಿಗೂ ಸೂಚನೆ ನೀಡಲಾಗಿದೆ. ಜನಸಾಮಾನ್ಯರೂ ಸಹ ಸೋಂಕುಪೀಡಿತ ದೇಶಗಳಿಗೆ ತೆರಳುವ ಯೋಜನೆಗಳನ್ನು ಅನಿವಾರ್ಯ ಪರಿಸ್ಥಿತಿ ಹೊರತಾಗಿ ಮುಂದೂಡಬೇಕು ಎಂದು ಮನವಿ ಮಾಡಿದರು.

ನಿಮ್ಮನ್ನು ರಕ್ಷಿಸಿಕೊಂಡು ಇತರರನ್ನು ರಕ್ಷಿಸಿ: ಸುಧಾಕರ್‌

ವಿದೇಶದಿಂದ ಬಂದವರಿಂದಲೇ ರಾಜ್ಯದಲ್ಲಿ ಸೋಂಕು ಹರಡುತ್ತಿದೆ. ಹೀಗಾಗಿ, ಕಳೆದ ಒಂದು ತಿಂಗಳಿಂದ ವಿದೇಶಕ್ಕೆ ತೆರಳಿ ಬಂದವರು ಸೋಂಕು ಲಕ್ಷಣ ಇರಲಿ, ಇಲ್ಲದೇ ಇರಲಿ ಕಡ್ಡಾಯವಾಗಿ ಭಾರತಕ್ಕೆ ವಾಪಸ್ಸಾದ ನಂತರ 28 ದಿನಗಳು ಮನೆಯಲ್ಲಿಯೇ ಪ್ರತ್ಯೇಕ ನಿಗಾವಹಿಸಿ. ಜತೆಗೆ ಸಣ್ಣ ಪ್ರಮಾಣದ ಅನಾರೋಗ್ಯ ಕಾಣಿಸಿಕೊಂಡರೆ ಶೀಘ್ರ ಆಸ್ಪತ್ರೆಗೆ ತೆರಳಿ. ಈ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜತೆಗೆ ಕುಟುಂಬ ಸೇರಿದಂತೆ ಇತರರನ್ನು ರಕ್ಷಿಸಿ ಎಂದು ವಿದೇಶ ಪ್ರಯಾಣ ಮಾಡಿಬಂದವರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಮನವಿ ಮಾಡಿದರು.

ಬಿಸಿಲು ಹೆಚ್ಚಿದೆ, ಸೋಂಕು ಹರಡಲ್ಲ: ರಾಮುಲು

ಚೀನಾ ವಾತಾವರಣ ಹಾಗೂ ಆಹಾರ ಸಂಸ್ಕೃತಿಗೂ ನಮ್ಮ ಆಹಾರ ಸಂಸ್ಕೃತಿ, ವಾತಾವರಣಕ್ಕೂ ಸಾಕಷ್ಟುವ್ಯತ್ಯಾಸವಿದೆ. ನಮ್ಮಲ್ಲಿ ಬಿಸಿಲು ಹೆಚ್ಚಿರುವುದರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ತೇವಾಂಶ ವಾತಾವರಣದಲ್ಲಿ ಕೊರೋನಾ ವೈರಾಣು ಹೆಚ್ಚು ಹರಡುತ್ತದೆ ಎಂಬುದು ತಜ್ಞರ ಅಭಿಪ್ರಾಯ. ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದ್ದು, ಎಲ್ಲಡೆ ಬಿಸಿಲು ಹೆಚ್ಚಾಗಿ ಉಷ್ಣಾಂಶದ ವಾತಾವರಣವಿದೆ. ಇದರಿಂದ ವೈರಾಣು ಹೆಚ್ಚು ಹರಡುವುದಿಲ್ಲ. ಬೆಂಗಳೂರಿನ ವಾತಾವರಣಕ್ಕೆ ಸೋಂಕು ಹರಡುವ ಸಾಧ್ಯತೆಯಿದ್ದರೂ ನಿಯಂತ್ರಿಸಲು ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ.

ಇನ್ನು ಚೀನಾ ಆಹಾರ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ವ್ಯತ್ಯಾಸವಿದೆ. ಹೀಗಾಗಿ ನಮ್ಮಲ್ಲಿ ಸೋಂಕು ಹೆಚ್ಚಾಗಿ ಹರಡುವುದಿಲ್ಲ. ಜನಸಾಮಾನ್ಯರು ಆತಂಕಕ್ಕೆ ಒಳಗಾಗದೇ ಶುಚಿತ್ವ ಕಾಪಾಡಿಕೊಳ್ಳಿ ಎಂದು ಆರೋಗ್ಯ ಸಚಿವರು ಸಲಹೆ ನೀಡಿದರು.

ಇಲ್ಲಿಯವರೆಗಿನ ಕೊರೋನಾ ಎಫೆಕ್ಟ್

* ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕು ದೃಢಪಟ್ಟವರು- 4

* ಆಸ್ಪತ್ರೆಯಲ್ಲಿ ನಿಗಾವಹಿಸಲಾದ ಶಂಕಿತರು - 9 ( ರಾಜೀವ್‌ಗಾಂಧಿ ಆಸ್ಪತ್ರೆ - 6, ಹಾಸನ, ದಕ್ಷಿಣ ಕನ್ನಡ, ಬಾಗಲಕೋಟೆ ತಲಾ ಒಬ್ಬರು)

* ವಿದೇಶಕ್ಕೆ ತೆರಳಿ ಬಂದು ಮನೆಯಲ್ಲಿಯೇ ಪ್ರತ್ಯೇಕ ನಿಗಾವಹಿಸಿರುವವರು - 760

* ವಿದೇಶಕ್ಕೆ ತೆರಳಿ ಬಂದು 28 ದಿನ ನಿಗಾ ಪೂರೈಸಿದವರು - 275

* ಒಟ್ಟು ಸೋಂಕು ಪರೀಕ್ಷೆಗೊಳಪಟ್ಟವರು - 446

* ಸೋಂಕು ಪರೀಕ್ಷಾ ವರದಿ ನೆಗೆಟಿವ್‌ - 389, ಪಾಸಿಟಿವ್‌ - 4

* ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೆ ಒಳಪಟ್ಟವರು - 95,151 ( ಬೆಂಗಳೂರು- 64,343, ಮಂಗಳೂರು- 25,440)

* ಮಂಗಳೂರು ಹಾಗೂ ಕಾರವಾರ ಕಡಲ ಬಂದರಿನಲ್ಲಿ ತಪಾಸಣೆಗೆ ಒಳಪಟ್ಟವರು - 5,368

ಸಹಾಯವಾಣಿ -104

ವಿದೇಶದಿಂದ ಹಿಂತಿರುಗಿದವರು ಏನು ಮಾಡಬೇಕು?

ಚೀನಾ, ಇರಾನ್‌, ದಕ್ಷಿಣ ಕೊರಿಯಾ, ಇಟಲಿ ಸೇರಿದಂತೆ ಕೊರೋನಾ ಬಾಧಿತ ದೇಶಗಳಿಂದ ಬಂದವರು ಕೂಡಲೇ ಹತ್ತಿರದ ಆಸ್ಪತ್ರೆಗೆ ವರದಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, 104 ಸಹಾಯವಾಣಿಗೆ ಕರೆ ಮಾಡಬೇಕು.

ವಿದೇಶ ಪ್ರಯಾಣದಿಂದ ಬಂದವರು ತಮ್ಮ ಕುಟುಂಬ ಸದಸ್ಯರನ್ನೂ ಸಹ ಹೆಚ್ಚಾಗಿ ಸಂಪರ್ಕಿಸದೆ 14 ದಿನಗಳ ಕಾಲ ಸ್ವಯಂ ಪ್ರತ್ಯೇಕವಾಗಿರಬೇಕು. ಈ ಅವಧಿಯಲ್ಲಿ ಉಸಿರಾಟದ ತೊಂದರೆ, ಕೆಮ್ಮು, ನೆಗಡಿ, ಗಂಟಲ ಉರಿಯೂತ ಅಥವಾ ಯಾವುದೇ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆದುಕೊಳ್ಳಬೇಕು.