ಬೆಂಗಳೂರು :  ಕರ್ತವ್ಯದಲ್ಲಿದ್ದಾಗ ಮುಖ್ಯಮಂತ್ರಿ ಹಾಗೂ ಸರ್ಕಾರವನ್ನು ಮಾಧ್ಯಮಗಳ ಎದುರು ಟೀಕಿಸಿದ್ದ ಹೆಡ್‌ ಕಾನ್ಸ್‌ಟೇಬಲ್‌ ಒಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಹೊಸಕೋಟೆ ಮೂಲದ ಕೆಎಸ್‌ಆರ್‌ಪಿ ಮೊದಲನೇ ಬೆಟಾಲಿಯನ್‌ಗೆ ಸೇರಿರುವ ನಾಗರಾಜ್‌ ಅಮಾನತುಗೊಂಡ ಹೆಡ್‌ ಕಾನ್ಸ್‌ಟೇಬಲ್‌. ಜೆ.ಪಿ.ನಗರದ ಮುಖ್ಯಮಂತ್ರಿಗಳ ಮನೆ ಮುಂದೆ ಕರ್ತವ್ಯಕ್ಕೆ ನಿಯೋಜನೆ ಆಗಿದ್ದ ಸಂದರ್ಭದಲ್ಲಿ ಮಾಧ್ಯಮವೊಂದರ ಮುಂದೆ ಮುಖ್ಯಮಂತ್ರಿ ಹಾಗೂ ಸರ್ಕಾರವನ್ನು ಇವರು ಟೀಕಿಸಿದ್ದರು. ಇದು ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಹಿರಿಯ ಅಧಿಕಾರಿಗಳು ಕ್ರಮಕ್ಕೆ ಸೂಚಿಸಿದ್ದರು. ಸೂಚನೆ ಮೇರೆಗೆ ನಾಗರಾಜ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ನಾಗರಾಜ್‌ ಅವರು ಜೆ.ಪಿ.ನಗರದಲ್ಲಿರುವ ಮುಖ್ಯಮಂತ್ರಿ ಅವರ ನಿವಾಸದ ಎದುರು ಭದ್ರತೆಗೆ ನಿಯೋಜನೆಗೊಂಡಿದ್ದರು. ಈ ವೇಳೆ ಕುಟುಕು ಕಾರ್ಯಾಚರಣೆ ನಡೆಸಿದ್ದ ಖಾಸಗಿ ಸುದ್ದಿವಾಹಿನಿಯೊಂದು ನಾಗರಾಜ್‌ ಅವರ ಬಳಿ ಸರ್ಕಾರದ ಬಗ್ಗೆ ಅಭಿಪ್ರಾಯ ಕೇಳಿತ್ತು. ಖಾಸಗಿ ಸುದ್ದಿವಾಹಿನಿಯ ಚುಟುಕು ಕಾರ್ಯಾಚರಣೆ ಬಗ್ಗೆ ತಿಳಿಯದ ನಾಗರಾಜ್‌, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸರ್ಕಾರವನ್ನು ಟೀಕಿಸಿದ್ದರು. ಈ ಕುಟುಕು ಕಾರ್ಯಾಚರಣೆಯ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಮುಖ್ಯಮಂತ್ರಿ ಮುಜುಗರಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಅಧಿಕಾರಿಗಳು ಹೆಡ್‌ ಕಾನ್ಸ್‌ಟೇಬಲ್‌ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.