ಬೆಂಗಳೂರು(ನ.21): ಡಾರ್ಕ್‌ನೆಟ್‌ನಲ್ಲಿ ಗಣ್ಯರ ಮಕ್ಕಳು ತರಿಸುತ್ತಿದ್ದ ಡ್ರಗ್ಸ್‌ ದಂಧೆಗೆ ಸಹಕರಿಸಿದ್ದ ಆರೋಪ ಹೊತ್ತಿದ್ದ ಸದಾಶಿವನಗರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಪ್ರಭಾಕರ್‌ ಅವರನ್ನು ಸಿಸಿಬಿ ಬಂಧಿಸಿದೆ.

ವಿದೇಶದಿಂದ ಡಾರ್ಕ್‌ನೆಟ್‌ ಮೂಲಕ ಡ್ರಗ್ಸ್‌ ಅನ್ನು ದಂಧೆಕೋರರು ತರಿಸಿಕೊಳ್ಳುತ್ತಿದ್ದರು. ಆಗ ಚಾಮರಾಜಪೇಟೆಯ ಅಂಚೆ ಕಚೇರಿಯಲ್ಲಿ ಆ ಪಾರ್ಸೆಲ್‌ ಸ್ವೀಕರಿಸುವ ಹಾಗೂ ಗ್ರಾಹಕರಿಗೆ ತಲುಪಿಸುವ ಹಂತದಲ್ಲಿ ದಂಧೆಕೋರರಿಗೆ ಪ್ರಭಾಕರ್‌ ತಾಂತ್ರಿಕ ನೆರವು ನೀಡುತ್ತಿದ್ದ. ಇದಕ್ಕಾಗಿ ಪ್ರತಿಯಾಗಿ ಹೆಡ್‌ಕಾನ್‌ಸ್ಟೇಬಲ್‌ಗೆ ಹಣ ಸಂದಾಯವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರಕರಣದ ಆರೋಪಿಗಳಾದ ಸುನೀಷ್‌ ಹೆಗ್ಡೆ, ಹೇಮಂತ್‌ ಮುದ್ದಪ್ಪ ಹಾಗೂ ಪ್ರಸಿದ್‌ ಶೆಟ್ಟಿ ವಿಚಾರಣೆ ವೇಳೆ ಪ್ರಭಾಕರ್‌ ಪಾತ್ರದ ಕುರಿತು ಮಾಹಿತಿ ಸಿಕ್ಕಿತು. ಬಳಿಕ ಅವರ ಮೊಬೈಲ್‌ ಕರೆಗಳ ವಿವರ ಹಾಗೂ ವಾಟ್ಸಾಪ್‌ ಸಂದೇಶಗಳನ್ನು ಪರಿಶೀಲಿಸಿದಾಗ ಹೆಡ್‌ಕಾನ್‌ಸ್ಟೇಬಲ್‌ ಸಂವಹನ ಕುರಿತು ಮತ್ತಷ್ಟು ವಿವರ ಲಭ್ಯವಾಯಿತು. ಒಂದು ವರ್ಷದಿಂದ ಆರೋಪಿಗಳಿಗೆ ನಿರಂತರವಾಗಿ ಕಾನೂನು ಬಾಹಿರವಾಗಿ ಆತ ಟವರ್‌ ಲೋಕೇಷನ್‌ ಶೇರ್‌ ಮಾಡಿರುವುದು ಗೊತ್ತಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಡ್ರಗ್ಸ್‌ ಕೇಸಲ್ಲಿ ಇನ್ನಷ್ಟು ಗಣ್ಯರ ಕುಟುಂಬಕ್ಕೆ ನಡುಕ..!

5 ಸಾವಿರಕ್ಕೆ ಟವರ್‌ ಲೋಕೇಷನ್‌

ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಚಲನವಲನದ ಪತ್ತೆಗೆ ಟವರ್‌ ಲೋಕೇಷನ್‌ ಪಡೆಯಲು ಠಾಣಾಧಿಕಾರಿಗಳಿಗೆ ಮೊಬೈಲ್‌ ಸೇವಾ ಕಂಪನಿಗಳು ಅವಕಾಶ ನೀಡಿವೆ. ಈ ತಾಂತ್ರಿಕ ಕೆಲಸಕ್ಕೆ ಪರಿಣಿತ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದಕ್ಕಾಗಿ ಅವರಿಗೆ ವಿಶೇಷ ತರಬೇತಿ ಸಹ ಕೊಡಲಾಗುತ್ತದೆ. ಅಂತೆಯೇ ದೆಹಲಿ ಮಟ್ಟದಲ್ಲಿ ಪ್ರಭಾಕರ್‌ ತಾಂತ್ರಿಕ ತರಬೇತಿ ಪಡೆದಿದ್ದ. 2007ರಲ್ಲಿ ಇಲಾಖೆಗೆ ಸೇರಿದ್ದ ಪ್ರಭಾಕರ್‌, ಸದಾಶಿವನಗರ ಠಾಣೆಯಲ್ಲಿ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದಾಶಿವನಗರ ಠಾಣಾ ಸರಹದ್ದಿನಲ್ಲೇ ಸುನೀಷ್‌ ಹೆಗ್ಡೆ, ಹೇಮಂತ್‌ ಮುದ್ದಪ್ಪ, ಸುಜಯ್‌, ಪ್ರಸಿದ್‌ ಶೆಟ್ಟಿ ಹಾಗೂ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ನೆಲೆಸಿದ್ದರು. ಸ್ಥಳೀಯವಾಗಿ ಪೊಲೀಸ್‌ ಸ್ನೇಹಿತರಂತೆ ಬಿಂಬಿಸಿಕೊಂಡಿದ್ದ ಆರೋಪಿಗಳು, ಕೆಲ ಅಧಿಕಾರಿ ಮತ್ತು ಸಿಬ್ಬಂದಿಗೆ ‘ಉಡುಗೊರೆ’ ಕೊಟ್ಟು ವಿಶ್ವಾಸ ಗಳಿಸಿದ್ದರು. ಅದೇ ರೀತಿ ಪ್ರಭಾಕರ್‌ಗೆ ಸಹ ಅವರು ಗಾಳ ಹಾಕಿ ಬೀಳಿಸಿದ್ದರು. ಡಾರ್ಕ್‌ನೆಟ್‌ನಲ್ಲಿ ಡ್ರಗ್ಸ್‌ ಖರೀದಿಸಿದಾಗ ಆರೋಪಿಗಳಿಗೆ ಆತನಿಂದ ನೆರವು ಸಿಕ್ಕಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಡಾರ್ಕ್‌ನೆಟ್‌ ವೆಬ್‌ಸೈಟ್‌ನಲ್ಲಿ ವಿದೇಶದಿಂದ ಹೈಡ್ರೋ ಗಾಂಜಾ ಸೇರಿದಂತೆ ಇತರೆ ಡ್ರಗ್ಸ್‌ಗಳು ಆರೋಪಿಗಳು ಖರೀದಿಸುತ್ತಿದ್ದರು. ಆ ಡ್ರಗ್ಸ್‌ ಅಂಚೆ ಮೂಲಕ ಚಾಮರಾಜಪೇಟೆ ಅಂಚೆ ಕಚೇರಿಗೆ ತಲುಪುತ್ತಿತ್ತು. ಆ ಪಾರ್ಸೆಲ್‌ ಸ್ವೀಕರಿಸುವಾಗ ಯಾರಿಗೂ ಅನುಮಾನಬಾರದಂತೆ ವಿಐಪಿ ಪುತ್ರರು ಎಚ್ಚರಿಕೆವಹಿಸಿದ್ದರು. ಆ ಪಾರ್ಸಲ್‌ ವಿತರಿಸುವ ಪೋಸ್ಟ್‌ ಮ್ಯಾನ್‌ ಮೊಬೈಲ್‌ ನಂಬರ್‌ ಪಡೆಯುತ್ತಿದ್ದ ಅವರು, ಡ್ರಗ್ಸ್‌ ಪಾರ್ಸಲ್‌ ಬಂದ ದಿನ ಪೋಸ್ಟ್‌ ಮ್ಯಾನ್‌ ಎಲ್ಲಿದ್ದಾನೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಪ್ರಭಾಕರ್‌ನಿಂದ ಟವರ್‌ ಲೋಕೇಷನ್‌ ಪಡೆಯುತ್ತಿದ್ದರು. ಅದೇ ರೀತಿ ಗ್ರಾಹಕರ ಟವರ್‌ ಲೋಕೇಷನ್‌ ಅನ್ನು ಸಹ ಪಡೆಯುತ್ತಿದ್ದರು. ಹೀಗೆ ಒಬ್ಬರ ಟವರ್‌ ಲೋಕೇಷನ್‌ ಕಳುಹಿಸಿದರೆ ಪ್ರತಿಯಾಗಿ 5 ಸಾವಿರ ಅನ್ನು ಹೆಡ್‌ ಕಾನ್‌ಸ್ಟೇಬಲ್‌ಗೆ ಡ್ರಗ್ಸ್‌ ದಂಧೆಕೋರರು ಕೊಡುತ್ತಿದ್ದರು ಎಂದು ಮೂಲಗಳು ಹೇಳಿವೆ.

ಪೆಡ್ಲಿಂಗ್‌ಗೆ ಪೊಲೀಸಪ್ಪನ ಸಾಥ್‌!

ಗೋವಾದಲ್ಲಿ ಮಾಜಿ ಸಚಿವರ ಪುತ್ರ ದರ್ಶನ್‌, ಸುನೀಷ್‌, ಹೇಮಂತ್‌ ಬಂಧಿತರಾಗಿದ್ದರು. ಬಳಿಕ ಆರೋಪಿಗಳ ವಿಚಾರಣೆ ಪ್ರಭಾಕರ್‌ ನೆರವಿನ ಸಂಗತಿ ಬಯಲಾಗಿತ್ತು. ಕೂಡಲೇ ಆತನನ್ನು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್‌ ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಿದ್ದರು. ಮೊದಲು ಆರೋಪಿಗಳ ಪರಾರಿ ವೇಳೆ ಸಹಕರಿಸಿದ್ದಾನೆ ಎಂಬ ಅನುಮಾನವಿತ್ತು. ಆದರೆ ಆರೋಪಿಗಳ ವಾಟ್ಸಾಪ್‌ ಸಂದೇಶಗಳನ್ನು ಪರಿಶೀಲಿಸಿದಾಗ ಪೆಡ್ಲಿಂಗ್‌ಗೆ ಸಹ ಪ್ರಭಾಕರ್‌ ಸಾಥ್‌ ಕೊಟ್ಟಿರುವ ಮಾಹಿತಿ ಸಿಕ್ಕಿತು. ಹೀಗಾಗಿ ಹೆಡ್‌ ಕಾನ್‌ಸ್ಟೇಬಲ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.