Asianet Suvarna News Asianet Suvarna News

ತೆಂಗು ಬೆಳೆಗಾರರ ಧರಣಿಗೆ ಹೆಚ್‌ಡಿಕೆ ಬೆಂಬಲ

ರಾಷ್ಟ್ರೀಯ ಪಕ್ಷಗಳಿಂದ ತೆಂಗು ಬೆಳೆಗಾರರಿಗೆ ಆಗುತ್ತಿರುವ ನಿರಂತರ ಅನ್ಯಾಯ, ನಷ್ಟವನ್ನು ಸರಿಪಡಿಸಲು ಅಸಾಧ್ಯವಾಗಿದ್ದು, ಪ್ರಾದೇಶಿಕ ಪಕ್ಷ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತಂದರೆ ಕ್ವಿಂಟಾಲ್‌ ಕೊಬ್ಬರಿಗೆ 15 ಸಾವಿರ ರು. ಬೆಂಬಲ ಬೆಲೆ ಘೋಷಿಸುವ ಮೂಲಕ ತೆಂಗು ಬೆಳೆಗಾರರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

HDK supports coconut farmers strike snr
Author
First Published Mar 10, 2023, 4:36 AM IST | Last Updated Mar 10, 2023, 4:36 AM IST

 ತಿಪಟೂರು :  ರಾಷ್ಟ್ರೀಯ ಪಕ್ಷಗಳಿಂದ ತೆಂಗು ಬೆಳೆಗಾರರಿಗೆ ಆಗುತ್ತಿರುವ ನಿರಂತರ ಅನ್ಯಾಯ, ನಷ್ಟವನ್ನು ಸರಿಪಡಿಸಲು ಅಸಾಧ್ಯವಾಗಿದ್ದು, ಪ್ರಾದೇಶಿಕ ಪಕ್ಷ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತಂದರೆ ಕ್ವಿಂಟಾಲ್‌ ಕೊಬ್ಬರಿಗೆ 15 ಸಾವಿರ ರು. ಬೆಂಬಲ ಬೆಲೆ ಘೋಷಿಸುವ ಮೂಲಕ ತೆಂಗು ಬೆಳೆಗಾರರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ತಿಪಟೂರು ತಾಲ್ಲೂಕಿನಲ್ಲಿ ಪಂಚರತ್ನ ಯಾತ್ರೆ ನಡೆಸಿದ್ದು, ಕೆ.ಬಿ.ಕ್ರಾಸ್‌ನಲ್ಲಿ ರಾತ್ರಿ ವಾಸ್ತವ್ಯ ಮಾಡಿ ಗುರುವಾರ ಬೆಳಗ್ಗೆ ಸುದ್ದಗಾರರೊಂದಿಗೆ ಅವರು ಮಾತನಾಡಿದರು.

ಈ ವೇಳೆ, ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ಹಸಿರು ಸೇನೆ, ರೈತ ಸಂಘದ ವತಿಯಿಂದ ಕ್ವಿಂಟಾಲ್‌ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿದರಲ್ಲದೆ, ಕಳೆದ 18ದಿನಗಳಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹೋರಾಟಗಾರರು ಹಾಗೂ ಬೆಳೆಗಾರರನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಿಂದ ತೆಂಗು ಬೆಳೆಗಾರರು ಸೇರಿದಂತೆ ಯಾವುದೇ ರೈತರ ಅಭಿವೃದ್ಧಿ ಶೂನ್ಯವಾಗಿರುವುದು ನಿಮಗೆಲ್ಲ ತಿಳಿದಿದೆ, ಈಗಲಾದರೂ ರೈತರು ಒಗ್ಗಟ್ಟಾಗಿ ಜೆಡಿಎಸ್‌ ಪಕ್ಷಕ್ಕೆ ಬೆಂಬಲ ಸೂಚಿಸುವ ಮೂಲಕ ಸ್ವತಂತ್ರವಾಗಿ ಸರ್ಕಾರವನ್ನು ರಚಿಸುವ ಶಕ್ತಿ ನೀಡಿದರೆ ನಿಮ್ಮೆಲ್ಲ ಬೇಡಿಕೆಗಳನ್ನು ನಾನು ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಿಪಟೂರು ಜೆಡಿಎಸ್‌ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್‌, ಜೆಡಿಎಸ್‌ ತಾ. ಅಧ್ಯಕ್ಷ ಗುರುಮೂರ್ತಿ, ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ್‌, ನಗರಸಭೆ ಮಾಜಿ ಸದಸ್ಯೆ ರೇಖಾ ಅನೂಪ್‌, ಜೆಡಿಎಸ್‌ ಮುಖಂಡರುಗಳಾದ ನೊಣವಿನಕೆರೆ ಜಗದೀಶ್‌, ಹುಣಸೇಘಟ್ಟಪ್ರಕಾಶ್‌, ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಬಿ. ಯೋಗೀಶ್ವರಸ್ವಾಮಿ, ಸಹ ಕಾರ್ಯದರ್ಶಿ ಜಯಚಂದ್ರ ಶರ್ಮ, ರೈತ ಮುಖಂಡ ಮನೋಹರ ಪಟೇಲ್‌ ಮತ್ತಿತರರಿದ್ದರು.

200 ಕೋಟಿ ರು. ಪರಿಹಾರ ವಾಪಸ್‌!

ನಾನು ಮುಖ್ಯಮಂತ್ರಿಯಾಗಿದ್ದಾಗ ತೆಂಗು ಬೆಳೆಗಾರರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೆ. ತೆಂಗಿಗೆ ಕಪ್ಪುತಲೆ ಹುಳು, ನುಸಿರೋಗಗಳ ಕಾಟ ವಿಪರೀತವಾಗಿ ಬೆಳೆಗಾರರು ಹೆಚ್ಚು ನಷ್ಟಕ್ಕೊಳಗಾದಾಗ ಸುಮಾರು 200 ಕೋಟಿ ರು. ಪರಿಹಾರ ನೀಡಿದ್ದೆ. ಆದರೆ ತಿಪಟೂರಿನ ಆಗಿನ ಆಡಳಿತ ಸರಿಯಾಗಿ ತೆಂಗು ಬೆಳೆಗಾರರಿಗೆ ವಿತರಿಸದೆ ಅನುದಾನ ವಾಪಸ್‌ ಹೋಗಿದ್ದು, ಇದು ಇಲ್ಲಿನ ಜನಪ್ರತಿನಿಧಿಗಳಿಗೆ ತೆಂಗು ಬೆಳೆಗಾರರ ಬಗ್ಗೆ ಇರುವ ಕಾಳಜಿ ಎಂಥದ್ದು ಎಂಬುದನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಫೋಟೋ 9-ಟಿಪಿಟಿ1ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಧರಣಿ ನಿರತ ರೈತರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ.

Latest Videos
Follow Us:
Download App:
  • android
  • ios