ರಾಷ್ಟ್ರ ರಾಜಕಾರಣದತ್ತ ಎಚ್‌ಡಿಕೆ, ರಾಜ್ಯರಾಜಕಾರಣಕ್ಕೆ ನಿಖಿಲ್..!
ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿರುವುದರಿಂದ, ರಾಷ್ಟ್ರ ರಾಜಕಾರಣದಲ್ಲಿ ಸಂಸದ ಎಚ್.ಡಿ.ಕುಮಾರಸ್ವಾಮಿ ಬ್ಯುಸಿಯಾಗುವುದರಿಂದ, ರಾಜ್ಯ ರಾಜಕಾರಣದ ಜವಾಬ್ದಾರಿಯನ್ನು ನಿಖಿಲ್ ಕುಮಾರಸ್ವಾಮಿ ವಹಿಸಿಕೊಳ್ಳುವುದಕ್ಕೆ ಸಜ್ಜಾಗುತ್ತಿದ್ದಾರೆ.
ಮಂಡ್ಯ ಮಂಜುನಾಥ
ಮಂಡ್ಯ : ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿರುವುದರಿಂದ, ರಾಷ್ಟ್ರ ರಾಜಕಾರಣದಲ್ಲಿ ಸಂಸದ ಎಚ್.ಡಿ.ಕುಮಾರಸ್ವಾಮಿ ಬ್ಯುಸಿಯಾಗುವುದರಿಂದ, ರಾಜ್ಯ ರಾಜಕಾರಣದ ಜವಾಬ್ದಾರಿಯನ್ನು ನಿಖಿಲ್ ಕುಮಾರಸ್ವಾಮಿ ವಹಿಸಿಕೊಳ್ಳುವುದಕ್ಕೆ ಸಜ್ಜಾಗುತ್ತಿದ್ದಾರೆ.
ರಾಜಕಾರಣದ ಕಡೆ ಹೆಚ್ಚು ಆಸಕ್ತಿ ಮತ್ತು ಗಮನಹರಿಸಿರುವ ನಿಖಿಲ್ ಕುಮಾರಸ್ವಾಮಿ ಪೂರ್ಣಾವಧಿ ರಾಜಕಾರಣಿಯಾಗಿರುವುದಕ್ಕೆ ಬಯಸಿದ್ದಾರೆ. ಇದೇ ಕಾರಣಕ್ಕೆ ನಿಖಿಲ್ ಸಿನಿಮಾರಂಗಕ್ಕೆ ಗುಡ್‌ಬೈ ಹೇಳಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗುವುದರೊಂದಿಗೆ ಜೆಡಿಎಸ್‌ಗೆ ರಾಜ್ಯದಲ್ಲಿ ಹೊಸ ಶಕ್ತಿ ತುಂಬುವುದಕ್ಕೆ ರೆಡಿಯಾಗಿದ್ದಾರೆ.
ಪ್ರಜ್ವಲ್ ಪ್ರಕರಣದಿಂದ ಜೆಡಿಎಸ್‌ನೊಳಗೆ ಮಂಕು ಕವಿದ ವಾತಾವರಣವಿದೆ. ಎಚ್.ಡಿ.ದೇವೇಗೌಡರಿಗೆ ವಯಸ್ಸು ಸ್ಪಂದಿಸುತ್ತಿಲ್ಲ. ಕುಮಾರಸ್ವಾಮಿ ಏಕಾಂಗಿಯಾಗಿ ಪಕ್ಷ ಕಟ್ಟುವುದಕ್ಕೆ ಹರಸಾಹಸ ನಡೆಸುತ್ತಿರುವಾಗಲೇ ನಿಖಿಲ್‌ಕುಮಾರಸ್ವಾಮಿ ಅಪ್ಪನಿಗೆ ನೆರವಾಗಿ ನಿಲ್ಲುವುದಕ್ಕೆ ಬಯಸಿದ್ದಾರೆ.
ರಾಷ್ಟ್ರ ರಾಜಕಾರಣದತ್ತ ಮುಖ ಮಾಡುವುದಕ್ಕೆ ತಂದೆ ಕುಮಾರಸ್ವಾಮಿ ಸಜ್ಜಾಗುತ್ತಿರುವಾಗಲೇ ರಾಜ್ಯ ರಾಜಕಾರಣದ ಸೂತ್ರ ಹಿಡಿಯುವುದಕ್ಕೆ ಪುತ್ರ ನಿಖಿಲ್ ಸಿದ್ಧತೆ ಆರಂಭಿಸಿದ್ದಾರೆ. ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭೆ ಚುನಾವಣೆಗಳಲ್ಲಿ ಸೋತರೂ ನಿಖಿಲ್ ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ಎದೆಗುಂದಿಲ್ಲ. ಮುಂದೆ ಗೆಲ್ಲುವ ಕನಸಿನೊಂದಿಗೆ ರಾಜಕಾರಣದಲ್ಲಿ ಮುಂದುವರೆದಿದ್ದಾರೆ. ಮಾತಿನಲ್ಲಿ ಪ್ರಬುದ್ಧತೆ, ಲಯ ಕಂಡುಕೊಂಡಿರುವ ನಿಖಿಲ್ ಸಂಘಟನೆಯಲ್ಲಿ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಾ ಸಾಗಿದ್ದಾರೆ. ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುವಷ್ಟು ಸಾಮರ್ಥ್ಯ ಗಳಿಸಲಾಗದಿದ್ದರೂ ಕೊಟ್ಟ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗುವಷ್ಟು ಚಾಕಚಕ್ಯತೆ ಸಂಪಾದಿಸಿರುವುದು ವಿಶೇಷವಾಗಿದೆ.
ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಂದ ರಾಜಕೀಯದ ಪಾಠ ಕಲಿತಿರುವ ನಿಖಿಲ್ ಕುಮಾರಸ್ವಾಮಿ ಸದ್ಯಕ್ಕೆ ಜೆಡಿಎಸ್ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಯುವ ನಾಯಕರಾಗಿ ಹೊರಹೊಮ್ಮಿದ್ದಾರೆ. ಹಳೆಯ ಮೈಸೂರು ಭಾಗದ ಎಲ್ಲ ಹಿರಿಯ ಮುಖಂಡರ ಪ್ರೀತಿ-ವಿಶ್ವಾಸ ಗಳಿಸುವಲ್ಲಿಯೂ ಯಶಸ್ವಿಯಾಗಿದ್ದು, ಯುವಕರನ್ನು ಸಂಘಟಿಸಿಕೊಂಡು ಪಕ್ಷಕ್ಕೆ ಬಲ ತುಂಬುತ್ತಾ ಸಾಗಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಲಹೆಯಂತೆ ಸಿನಿಮಾ ರಂಗವನ್ನು ನಿಖಿಲ್ ತ್ಯಜಿಸಿದ್ದು, ಸಿನಿಮಾ-ರಾಜಕೀಯ ರಂಗ ಎರಡು ದೋಣಿಗಳ ಮೇಲಿನ ನಡಿಗೆಯಿಂದ ಯಶಸ್ಸು ಕಾಣಲಾಗುವುದಿಲ್ಲ. ಒಂದು ಗುರಿ ಇಟ್ಟುಕೊಂಡು ಅದರತ್ತ ಸಾಗಿದರೆ ಯಶಸ್ಸು ಸಾಧ್ಯ ಎಂದು ಕಿವಿಮಾತು ಹೇಳಿದ್ದಾರೆ. ತಾತನ ಮಾತನ್ನು ಗಂಭಿರವಾಗಿ ಪರಿಗಣಿಸಿರುವ ನಿಖಿಲ್ ಕುಮಾರಸ್ವಾಮಿ ಪೂರ್ಣಾವಧಿ ರಾಜಕಾರಣಿಯಾಗುವ ದೃಢ ನಿರ್ಧಾರ ಮಾಡಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದರೆ ಪಕ್ಷ ಸಂಘಟನೆ ಕಡೆ ಗಮನಹರಿಸುವುದು ಕಷ್ಟ. ಹೀಗಾಗಿ ಪಕ್ಷ ಸಂಘಟನೆಯ ಸಂಪೂರ್ಣ ಜವಾಬ್ದಾರಿ ನಿಖಿಲ್ ಹೆಗಲಿಗೆ ಹೊರಿಸುವುದಕ್ಕೆ ದಳಪತಿಗಳು ನಿರ್ಧರಿಸಿ, ನಿಖಿಲ್‌ಗೆ ಮಾರ್ಗದರ್ಶಕರಾಗಿರಲು ಬಯಸಿದ್ದಾರೆ.
ಸದ್ಯಕ್ಕೆ ನಿಖಿಲ್ ಕುಮಾರಸ್ವಾಮಿ ಹೊರತುಪಡಿಸಿದರೆ ಪ್ರಜ್ವಲ್ ಪೆನ್‌ಡ್ರೈವ್ ಸುಳಿಯಲ್ಲಿ ಸಿಲುಕಿದ್ದಾರೆ. ಸೂರಜ್ ರೇವಣ್ಣ ನಾಯಕತ್ವದ ಗುಣಗಳನ್ನು ಎಲ್ಲಿಯೂ ಪ್ರದರ್ಶಿಸಿಲ್ಲ. ಸಂಘಟನಾತ್ಮಕವಾಗಿ ಮುನ್ನುಗ್ಗುವ ಉತ್ಸಾಹವನ್ನು ಪ್ರದರ್ಶಿಸಿಲ್ಲದ ಕಾರಣ ಜೆಡಿಎಸ್ ಪಕ್ಷವನ್ನು ಮುನ್ನಡೆಸುವುದಕ್ಕೆ ನಿಖಿಲ್ ಕುಮಾರಸ್ವಾಮಿ ಸಮರ್ಥರು ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.