'ನ್ಯಾಯಸಮ್ಮತವಾಗಿ ನಡೆದಿಲ್ಲ ಎಲೆಕ್ಷನ್ : ಅಧಿಕಾರಿಗಳೇ ಶಾಮೀಲು'
ರಾಜ್ಯದ ಎರಡು ಕ್ಷೇತ್ರಗಳಲ್ಲಿ ನಡೆದ ಚುನಾವಣೆಯೂ ನ್ಯಾಯಸಮ್ಮತವಾಗಿ ನಡೆದಿಲ್ಲ ಎಂದು ಆರೋಪಿಸಲಾಗಿದೆ.
ಹಾಸನ (ನ.10): ಸರಕಾರದ ಹಿಡಿತಕ್ಕೆ ಸಿಲುಕಿ ಚುನಾವಣಾ ಆಯೋಗವು ನಲುಗುತ್ತಿದೆ. ರಾಜ್ಯದಲ್ಲಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಗಂಭೀರವಾಗಿ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾ ಆಯೋಗ ರಾಜ್ಯದಲ್ಲಿ ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ. ರಾಜ್ಯ ಚುನಾವಣಾ ಆಯೋಗ ಸರ್ಕಾರದ ಹಿಡಿತಕ್ಕೆ ಸಿಲುಕಿ ನಲುಗುತ್ತಿದೆ. ಸರ್ಕಾರಿ ಅಧಿಕಾರಿಗಳನ್ನು ದುಡ್ಡು ಹಂಚಲು ಸರಕಾರ ಇಟ್ಟುಕೊಂಡಿದೆ. ಈ ರೀತಿ ಚುನಾವಣೆ ನಡೆಸುವ ಬದಲು ನಾಮನಿರ್ದೇಶನ ಮಾಡಿಕೊಳ್ಳುವುದು ಒಳ್ಳೆಯದು. ಶಿರಾ ಹಾಗೂ ಆರ್.ಆರ್.ನಗರ ಜಿಲ್ಲಾ ಚುನಾವಣಾಧಿಕಾರಿಗಳು ಸರ್ಕಾರದೊಂದಿಗೆ ಶಾಮೀಲಾಗಿ ಚುನಾವಣೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ನಾಯಕರ ವಿರುದ್ಧ ಗರಂ ಆದ ಸುಮಲತಾ : ದಬ್ಬಾಳಿಕೆ ಎಂದು ಅಸಮಾಧಾನ ...
ಸ್ಥಳೀಯ ಸಂಸ್ಥೆ ಚುನಾವಣೆ ಮೀಸಲಾತಿ ವಿಚಾರದಲ್ಲಿ ಸರ್ಕಾರ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದೆ. ನವೆಂಬರ್ 3 ರಂದು ಎರಡೂ ಉಪಚುನಾವಣೆಯಲ್ಲಿ ಯಾವ ರೀತಿ ಚುನಾವಣೆ ನಡೆದಿದೆ ಎಂಬುದು ಮತದಾರರಿಗೆ ಗೊತ್ತಿರುವ ವಿಚಾರವಾಗಿದೆ. ಎರಡು ಕ್ಷೇತ್ರಗಳಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಶಿರಾ ಕ್ಷೇತ್ರದ ಒಂದು ಊರಿನಲ್ಲಿ ಅಭ್ಯರ್ಥಿಯನ್ನೇ ಊರೊಳಗಡೆ ಬಿಟ್ಟಿಲ್ಲ. ಆದರೂ ಆ ಊರಿನಲ್ಲಿ ಶೇ.80 ರಷ್ಟುಮತಗಳು ಲೀಡ್ ಇದೆ ಅಂತಾ ರಾಷ್ಟ್ರೀಯ ಪಕ್ಷದವರು ಹೇಳುತ್ತಿರುವುದಾಗಿ ಆರೋಪಿಸಿದರು.
ಆಡಳಿತ ಯಂತ್ರವನ್ನ ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಒಂದು ಓಟಿಗೆ 5 ಸಾವಿರ ಮೂರು ಸಾವಿರ ಅಂತಾ ಹಂಚಿದ ಮೇಲೆ ಯಾಕೆ ಚುನಾವಣೆ ಮಾಡಬೇಕು ಎಂದು ಪ್ರಶ್ನೆ ಮಾಡಿದ ಅವರು, ಚುನಾವಣೆಗೂ ಮೊದಲೇ 25 ಸಾವಿರ ಮತದಿಂದ ನಮ್ಮದೆ ಗೆಲುವು ಎಂದು ಹೇಳಿದ್ದಾರೆ. ಗುಪ್ತಚರ ಇಲಾಖೆಯನ್ನ ಏನು ಚುನಾವಣೆ ಸಮೀಕ್ಷೆ ಮಾಡೋಕೆ ಬಿಟ್ಟಿದ್ದೀರಾ? ಯಾವುದೇ ಚುನಾವಣೆ ನಡೆದರೂ ಸೋಲು ಗೆಲುವು ಇದ್ದೇ ಇರುತ್ತದೆ. ಸೋತರೂ ದೇವೇಗೌಡರು ಕಂಗೆಟ್ಟಿಲ್ಲ. 2004 ರ ಚುನಾವಣೆಯಲ್ಲಿ ಎಲ್ಲಾ ಮಾಧ್ಯಮಗಳಲ್ಲಿ ಜೆಡಿಎಸ್ ಪಕ್ಷವು ಸೊನ್ನೆ ಅಂತಾ ಬಂತು. ಆದರೆ ಜೆಡಿಎಸ್ 58 ಸ್ಥಾನ ಗೆಲುವು ಪಡೆದಿತ್ತು ಎಂದರು.