ಹಾಸನ (ಅ.30):  ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್‌ ಶಾಮೀಲಾಗಿದೆ ಎನ್ನುವ ಮಾತು ಸುಳ್ಳು. ಶಾಮೀಲಾಗುವ ಪರಿಸ್ಥಿತಿ ಜೆಡಿಎಸ್‌ಗೆ ಬಂದಿಲ್ಲ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌.ರ್‌. ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್‌ ಕೈಜೋಡಿಸಿದ್ದು, ಶಿರಾ ಜೆಡಿಎಸ್‌ ಅಭ್ಯರ್ಥಿ ಬಗ್ಗೆ ಡಿಕೆಶಿ ಹೇಳಿಕೆಗೆ ರೇವಣ್ಣ ತಿರುಗೇಟು ನೀಡಿದರು.

ವಿಧಾನಸಭೆಯಲ್ಲಿ ಮಾಧುಸ್ವಾಮಿ ಮಾತನಾಡುವಾಗ ಡಿಕೆ ಶಿವಕುಮಾರ್‌ ಎಲ್ಲಿ ಹೋದರು ಎಂದು ವ್ಯಂಗ್ಯವಾಡಿದ್ದಾರೆ. ಡಿಕೆಶಿ ದೊಡ್ಡವರು ನಾನು ಅವರ ಬಗ್ಗೆ ಯಾಕೆ ಮಾತನಾಡಲಿ. ಆದರೆ ಮಾಧುಸ್ವಾಮಿ ವಿಧಾನಸಭೆಯಲ್ಲಿ ಎಳೆಎಳೆಯಾಗಿ ಬಿಡಿಸುವಾಗ ಇವರು ಎಲ್ಲಿದ್ದರು? ಅಷ್ಟೇ ಅಲ್ಲದೆ ನಾವು ಯಾರ ಬಳಿಯೂ ಅಡ್ಜೆಸ್ಟ್‌ಮೆಂಟ್‌ಗೆ ಹೋಗಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್‌ ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ ಎಂದು ಪರೋಕ್ಷವಾಗಿ ಕಿಡಿಕಾರಿದರು.

'ಸಿದ್ದರಾಮಯ್ಯ, ದೇವೇಗೌಡ್ರೇ ಪ್ರಚಾರಕ್ಕೆ ಹೋದ್ಮೇಲೆ ನಾನು ಹೋಗದಿದ್ರೆ ತಪ್ಪಾಗುತ್ತೆ'

ಬಿಜೆಪಿ ಅಧಿಕಾರಕ್ಕೋಸ್ಕರ ನಗರಸಭೆಯ ಅಧ್ಯಕ್ಷ ಚುನಾವಣೆಯಲ್ಲಿ ಮೀಸಲಾತಿ ಹೆಸರಲ್ಲಿ ಕಾನೂನುಗಳನ್ನು ಪಾಲಿಸುತ್ತಿಲ್ಲ. ಯಾವುದೇ ಸಭೆ ನಡೆಸಬೇಕಾದರೆ ಅರ್ಧಕ್ಕಿಂತ ಹೆಚ್ಚು ಗೆಲುವು ಪಡೆದಿರಬೇಕು. ನಗರಸಭೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆರ್‌.ಮೋಹನ್‌ ನಕಲಿ ಜಾತಿ ಪ್ರಮಾಣಪತ್ರವನ್ನು ನೀಡಿದ್ದು, ಅಭ್ಯರ್ಥಿಯ ತಂದೆ ಕೂಡ ಮರಾಠ ಜನಾಂಗಕ್ಕೆ ಮಾತ್ರ ಸೇರಿದವರಾಗಿದ್ದಾರೆ. ಅವರು ವ್ಯಾಸಂಗ ಮಾಡಿದ ಸಿದ್ದಗಂಗಾ ಮಠದ ದಾಖಲಾತಿ ಪರಿಶೀಲನೆ ವೇಳೆ ಈ ಮಾಹಿತಿಗಳಿಗೆ ಬೆಳಕಿಗೆ ಬಂದಿದ್ದು, ಇತ್ತೀಚೆಗೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮೋಹನ್‌ ಅವರು ನೀಡಿರುವ ದಾಖಲಾತಿಯಲ್ಲಿ ಸಹ ಮರಾಠ ಗೊಂಡ ಎಂದು ತಿದ್ದುಪಡಿ ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಬಿಟ್ಟರೆ ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲಿಯೂ ಸಹ ಮರಾಠ ಗೊಂಡ ಎಸ್ಟಿಮೀಸಲಾತಿ ಅಡಿ ಬರುವುದಿಲ್ಲ. ಈ ಸಂಬಂಧ ಹೈಕೋರ್ಟಿಗೆ ಮಾಹಿತಿ ನೀಡಲಾಗುವುದು ಹಾಗೂ ಅಕ್ರಮ ಮೀಸಲಾತಿ ಹಾಗೂ ಜಾತಿ ಪ್ರಮಾಣ ಪತ್ರದ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿದರು.