ಹಾಸನ (ಅ.04):  ಜಿಲ್ಲೆಯಲ್ಲಿಯೇ ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದು, ಆರೋಪಗಳನ್ನು ಹೊತ್ತ ಪೊಲೀಸ್‌ ಅ​ಧಿಕಾರಿಗಳನ್ನೇ ಮತ್ತೆ ಹಾಸನಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹೆಚ್‌.ಡಿ. ರೇವಣ್ಣ ಹರಿಹಾಯ್ದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ರೌಡಿ ವ್ಯಕ್ತಿ ಸುರೇಶ್‌ ಎಂಬಾತನನ್ನು 25 ಲಕ್ಷ ಲಂಚಕ್ಕಾಗಿ ಹಾಸನದಲ್ಲಿ ಪೊಲೀಸ್‌ ಅಧಿ​ಕಾರಿಯಾಗಿ ನೇಮಕ ಮಾಡಿದೆ. ಈ ಅಧಿಕಾರಿ ಇಲ್ಲಿಗೆ ಬಂದ ಕೂಡಲೇ ರೌಡಿಗಳು ಇವರನ್ನು ಸ್ವಾಗತಿಸಿದ್ದಾರೆ. ಇಡೀ ಹಾಸನ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳ ವರ್ಗಾವಣೆಗೆ ಈತನೇ ಕಿಂಗ್‌ ಪಿನ್‌. ದಂಧೆಯ ಹಿಂದೆ ಯಾರಿದ್ದಾರೆ ಎಂಬುದನ್ನ ಗೃಹ ಇಲಾಖೆ ಹೇಳಬೇಕು ಎಂದರು.

15 ವರ್ಷದ ಬಳಿಕ JDS ಆಡಳಿತ ಅಂತ್ಯ : ಅಧಿಕಾರ ಕಸಿದ ಬಿಜೆಪಿ ...

ಬಸವರಾಜ್‌ ಬೊಮ್ಮಯಿ ಮತ್ತು ಮುಖ್ಯಮಂತ್ರಿಗಳ ಬಗ್ಗೆ ನನಗೆ ಗೌರವವಿದೆ. ಒಂದು ಸ್ಥಳಕ್ಕೆ ವರ್ಗಾವಣೆ ಮಾಡಿ ಕಳುಹಿಸುವ ಮೊದಲು ಗೃಹ ಇಲಾಖೆಯವರು ಆತನ ಹಿನ್ನೆಲೆಯನ್ನು ನೋಡಬೇಕು. ಯಾವುದನ್ನು ಮಾಡದೆ ಏಕಾಏಕಿ ವರ್ಗಾವಣೆ ಮಾಡಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಪಿಎಸ್‌ಐ ಕಿರಣ್‌ ಸಾವಿನ ಬಗ್ಗೆಯೂ ಮುಂದಿನ ದಿನಗಳಲ್ಲಿ ವೀಡಿಯೋ ಬಹಿರಂಗಪಡಿಸುತ್ತೇನೆ ಎಂದು ಎಚ್ಚರಿಸಿದರು.

ರೌಡಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಪೊಲೀಸ್‌ ಅಧಿಕಾರಿಗಳನ್ನು ಜಿಲ್ಲೆಗೆ ನೇಮಿಸಿರುವುದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಏನಾದರೂ ದುರ್ಘಟನೆ ನಡೆದರೇ ಅದಕ್ಕೆ ದಕ್ಷಿಣ ವಲಯ ಐಜಿಪಿಯವರನ್ನೇ ಕಾರಣಕರ್ತರಾಗಿ ಮಾಡಬೇಕಾಗುತ್ತದೆ. ಐಜಿಪಿ ವಿಪುಲ್‌ ಕುಮಾರ್‌ ರಬ್ಬರ್‌ ಸ್ಟ್ಯಾಂಪ್‌ ಇದ್ದಂತೆ. ಜಾತೀಯತೆಯನ್ನು ಗುರಿಯಾಗಿಟ್ಟುಕೊಂಡು ವರ್ಗಾವಣೆ ಮಾಡಲಾಗಿದ್ದು, ದುಡ್ಡು ಒಂದಿದ್ರೆ ಸಾಕು ಭ್ರಷ್ಟರನ್ನ ಕೂಡಾ ಓಲೈಸುತ್ತಾರೆ. ಸುರೇಶ್‌ ಒರ್ವ ರೌಡಿಯಂತಿರುವ ಪೊಲೀಸ್‌ ಅಧಿಕಾರಿ. ಪೆನ್ಷನ್‌ ಮೊಹಲ್ಲಾದ 18 ಪ್ರಕರಣವನ್ನ ಕೈಬಿಟ್ಟೆದ್ದೇವೆ ಎಂದು ಇದೇ ಸುರೇಶ್‌ ಹೇಳಿದ್ದಾನೆ.

ಈತನನ್ನು ಹಾಸನ ಜಿಲ್ಲೆಗೆ ಹಾಕುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದರು. ಆದರೇ ಈಗ ಅದೇ ಅ​ಧಿಕಾರಿ ಬಂದಿರುವುದು ಉತ್ತಮ ಬೆಳವಣಿಗೆಯಲ್ಲ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ತಿಳಿಸುವುದಾಗಿ ಹೇಳಿದರು.