ಪೂರ್ಣಾವಧಿ ಆಡಳಿತಕ್ಕೆ ಒಕ್ಕಲಿಗರಿಗೆ ಶಾಪವಿದೆ : ಇವರದ್ದೆಲ್ಲಾ ಅರ್ಧದ ಅಧಿಕಾರ
ಪೂರ್ಣಾವಧಿಯಲ್ಲಿ ಅಧಿಕಾರ ನಡೆಸಲು ಒಕ್ಕಲಿಗರಿಗೆ ಶಾಪವಿದೆ. ಇವರದ್ದೆಲ್ಲಾವೂ ಅರ್ಧಕ್ಕೆ ಅಧಿಕಾರ ಮುಕ್ತಾಯ.. ಏನಿದು ವಿಚಾರ..?
ರಾಮನಗರ (ಜ.16): ಕೆಂಗಲ್ ಹನುಮಂತಯ್ಯ, ದೇವೇಗೌಡ ಮುಖ್ಯಮಂತ್ರಿಗಳಾಗಿ ಅವಧಿ ಪೂರ್ಣಗೊಳಿಸಲಿಲ್ಲ. ಒಕ್ಕಲಿಗ ಸಮುದಾಯದ ನಾಯಕರಿಗೆ ಪೂರ್ಣಾವಧಿ ಆಡಳಿತ ನಡೆಸಲು ಶಾಪ ತಗುಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ಲಕ್ಷ್ಮೀ ನಾರಾಯಣಸ್ವಾಮಿಗೆ ತಪ್ಪೊಪ್ಪಿನ ಕಾಣಿಕೆ ಅರ್ಪಿಸಿದ ಬಳಿಕ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುವ ವಿಚಾರದಲ್ಲಿ ನಮ್ಮ ಒಕ್ಕಲಿಗ ಸಮುದಾಯಕ್ಕೆ ಒಂದು ರೀತಿ ಅಂಟು ಶಾಪವಿದೆ ಎಂದರು.
ನಿಖಿಲ್ ಕುಮಾರಸ್ವಾಮಿ ಪಕ್ಷದ ಜವಾಬ್ದಾರಿ:
ರಾಜ್ಯದಲ್ಲಿ 2023ಕ್ಕೂ ಮೊದಲೇ ವಿಧಾನಸಭಾ ಚುನಾವಣೆ ಘೋಷಣೆಯಾದರೂ ಎದುರಿಸಲು ಸಿದ್ಧರಿದ್ದೇವೆ. ಈಗ ಪಕ್ಷ ಸಂಘಟನೆಗೆ ಮುಂದಾಗಿದ್ದೇನೆ. ಮುಂದಿನ ದಿನಗಳಲ್ಲಿ ನಡೆಯಲಿರುವ ತಾಪಂ ಹಾಗೂ ಜಿಪಂ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ. ಪುತ್ರ ನಿಖಿಲ್ ಕುಮಾರಸ್ವಾಮಿ ಪಕ್ಷದ ಜವಾಬ್ದಾರಿ ಹೊರಲಿದ್ದಾರೆ. ಇಂದಿನಿಂದ ರಾಜ್ಯ ಪ್ರವಾಸ ಆರಂಭಿಸಿದ್ದು, ಪ್ರತಿ ಮತದಾರರ ಬಳಿ ಹೋಗುತ್ತೇನೆ. 2004ರಲ್ಲಿ ಮತದಾರರ ಬಳಿ ಹೋಗಿದ್ದೆ. ಅದನ್ನು ಬಿಟ್ಟರೆ ಈವರೆಗೂ ನನನ್ನು ಗೆಲ್ಲಿಸುತ್ತಲೇ ಬಂದಿದ್ದಾರೆ. ಇದೊಂದು ಬಾರಿ ಕಡೆಯ ಅವಕಾಶ ನೀಡಿದರೆ ರಾಜ್ಯವನ್ನು ಅಭಿವೃದ್ಧಿ ಮಾಡಿ, ಜನರ ಋುಣ ತೀರಿಸುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು, ನಾಡಿನ ಮತದಾರರು 5 ವರ್ಷಗಳ ಅಧಿಕಾರ ನೀಡುವಂತೆ ಮನವಿ ಮಾಡಿದರು.
ಜೆಡಿಎಸ್ ತೊರೆದು ಬಿಜೆಪಿ ಸೇರಲು ಸಜ್ಜಾದ ನಾಯಕಿ ...
ಮುಂದಿನ ಚುನಾವಣೆ ನನ್ನ ಪಾಲಿನ ಕೊನೆ ಹೋರಾಟ. 5 ವರ್ಷಗಳ ಪೂರ್ಣ ಆಡಳಿತ ನೀಡಿದರೆ, ಪಂಚರತ್ನ ಯೋಜನೆ ಮೂಲಕ ಪ್ರತಿ ಗ್ರಾಮ ಪಂಚಾಯಿತಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ. ಯುವಕರಿಗೆ ಉದ್ಯೋಗ ನೀಡಲು ಪೈಲೆಟ್ ಪ್ರಾಜೆಕ್ಟ್ ಮಾದರಿಯಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿಸುತ್ತೇನೆ. ಸರ್ಕಾರ ಮನಸ್ಸು ಮಾಡಿದರೆ ಏನು ಅಭಿವೃದ್ಧಿ ಬೇಕಿದ್ದರೂ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸುತ್ತೇನೆ ಎಂದು ತಿಳಿಸಿದರು.
ಲಕ್ಷ್ಮೀ ನಾರಾಯಣನಿಗೆ ಸಮರ್ಪಣೆ:
ಲಕ್ಷ್ಮೀ ನಾರಾಯಣ ಸ್ವಾಮಿ ಬೆಟ್ಟದ ಅಭಿವೃದ್ಧಿಗೆ ನಾನು ಟೊಂಕ ಕಟ್ಟಿದ್ದೇನೆ. ದೇಣಿಗೆ ರೂಪದಲ್ಲಿ 42 ಲಕ್ಷ ರು..ಗಳನ್ನು ಸಂಗ್ರಹಿಸಿರುವ ಗ್ರಾಮಸ್ಥರು ಬೆಟ್ಟಕ್ಕೆ ಕಚ್ಚಾ ರಸ್ತೆ ನಿರ್ಮಿಸಿದ್ದಾರೆ. ಇಡೀ ಬೆಟ್ಟದ ರಸ್ತೆಗೆ ಡಾಂಬರೀಕರಣ ಸೇರಿದಂತೆ ಬೆಟ್ಟದ ಸಂಪೂರ್ಣ ಅಭಿವೃದ್ಧಿ, ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವುದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಶಾಸಕರಾದ ಎ.ಮಂಜುನಾಥ್, ಅನಿತಾ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ, ಜೆಡಿಎಸ್ ಮುಖಂಡರಾದ ಸುಬ್ಬಾಶಾಸ್ತಿ್ರ , ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಇದ್ದರು.
1983ರಲ್ಲಿ ನಾನು ಬಿಡದಿ ಸಮೀಪದ ಕೇತಗಾನಹಳ್ಳಿಗೆ ಬಂದೆ. ಅಂದು ಜಮೀನು ಖರೀದಿಸಿದ್ದ ದೆಸೆಯಿಂದಾಗಿ ಈ ಮಣ್ಣಿನ ಋುಣ ನನ್ನ ಮೇಲಿದೆ. ಆ ಜಮೀನು ಇಲ್ಲದಿದ್ದರೆ ನಾನು ರಾಮನಗರಕ್ಕೆ ಬರುತ್ತಿರಲಿಲ್ಲ ಅನ್ನಿಸುತ್ತದೆ. ಆದರೆ, ಹಿರೇಮಠ್, ರವಿಕೃಷ್ಣಾರೆಡ್ಡಿ ಅಂತಹವರು ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಭೂಮಿಯನ್ನು ಕಾನೂನು ರೀತಿ ಕೊಂಡುಕೊಂಡಿದ್ದರೂ, ಕಿರುಕುಳ ನೀಡುತ್ತಿದ್ದಾರೆ. ಇಲ್ಲಸಲ್ಲದ ಆರೋಪಗಳಿಂದಾಗಿ ರೋಸಿ ಹೋಗಿದ್ದೇನೆ.
ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.
ಜಿಲ್ಲೆಯಲ್ಲಿ 540 ಕೋಟಿ ವೆಚ್ಚದಲ್ಲಿ ಸತ್ತೇಗಾಲದಿಂದ ವೈ.ಜಿ. ಗುಡ್ಡ, ಮಂಚನಬೆಲೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂಪಿಸಿದ್ದೇ ಕುಮಾರಸ್ವಾಮಿ. ಮಾಗಡಿಗೆ 1560 ಕೋಟಿ ವೆಚ್ಚದ ನಾಲ್ಕು ಪಥದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮಂಚನಬೆಲೆ ಬಳಿ 120 ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಾಣಕ್ಕೆ ಯೋಜನೆ ರೂಪಿಸಿದರು. ರಾಮನಗರಕ್ಕೆ ಜಿಲ್ಲಾ ಕೇಂದ್ರದ ಸ್ಥಾನಮಾನ ಬರಲು ಕುಮಾರಣ್ಣ ಕಾರಣ.
-ಎ.ಮಂಜುನಾಥ್, ಮಾಗಡಿ ಶಾಸಕ
ರೈತರು, ಬಡವರು ಹಾಗೂ ಶೋಷಿತರಿಗಾಗಿ ಜೆಡಿಎಸ್ ಉಳಿದಿದೆ. ಇನ್ನು ಮುಂದೆ ಯುವಕರ ಧ್ವನಿಯಾಗಿಯೂ ಕೆಲಸ ಮಾಡಲಿದೆ. ಪಕ್ಷಕ್ಕೆ ಬಹುಮತ ಬರದಿದ್ದರೂ ಕುಮಾರಸ್ವಾಮಿರವರು ಮೈತ್ರಿ ಸರ್ಕಾರದಲ್ಲಿ ರೈತರ ಸಾಲಮನ್ನಾ ಮಾಡಿ ಕೊಟ್ಟಮಾತನ್ನು ಉಳಿಸಿಕೊಂಡರು. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಲು 2023ರ ಚುನಾವಣೆಯಲ್ಲಿ ನಾನೂ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ.
-ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ
ಮಾಜಿ ಸಿಎಂ ಕುಮಾರಸ್ವಾಮಿ ಮಾನವೀಯ ಗುಣವುಳ್ಳ ರಾಜಕಾರಣಿ. ಅವರ ಮಾರ್ಗದರ್ಶನದಲ್ಲಿ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಕಾಣಬೇಕಾದರೆ ನಿಮ್ಮೆಲ್ಲರ ಆಶೀರ್ವಾದ ಬೇಕಿದೆ.
-ಅನಿತಾ ಕುಮಾರಸ್ವಾಮಿ, ರಾಮನಗರ ಶಾಸಕ