Asianet Suvarna News Asianet Suvarna News

ಸದ್ಯದಲ್ಲೇ ನಾರಾಯಣ ಗೌಡ ಬಣ್ಣ ಬಯಲು : ಮಾಜಿ ಸಿಎಂ ಎಚ್‌ಡಿಕೆ

ಜೆಡಿಎಸ್‌ ಬಿಟ್ಟು ಬಿಜೆಪಿಗೆ ಹೋಗಿ ಸಚಿವರಾಗಿರುವವರು ಯಾರು ಮಾಡದ ಕೆಲಸ ಮಾಡಿದ್ದೇನೆ ಎನ್ನುತ್ತಿದ್ದಾರೆ. ಇಲ್ಲಿ ಮಾಜಿ ಸಿಎಂ ಯಡಿಯೂರಪ್ಪರ ಹುಟ್ಟೂರು ರಸ್ತೆಯನ್ನೇ ಸರಿಪಡಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

 HD Kumaraswamy slams Narayanagowda snr
Author
First Published Dec 26, 2022, 5:46 AM IST

  ಕೆ.ಆರ್‌.ಪೇಟೆ :  ಜೆಡಿಎಸ್‌ ಬಿಟ್ಟು ಬಿಜೆಪಿಗೆ ಹೋಗಿ ಸಚಿವರಾಗಿರುವವರು ಯಾರು ಮಾಡದ ಕೆಲಸ ಮಾಡಿದ್ದೇನೆ ಎನ್ನುತ್ತಿದ್ದಾರೆ. ಇಲ್ಲಿ ಮಾಜಿ ಸಿಎಂ ಯಡಿಯೂರಪ್ಪರ ಹುಟ್ಟೂರು ರಸ್ತೆಯನ್ನೇ ಸರಿಪಡಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ತಾಲೂಕಿನ ಪುರಸಭಾ ವ್ಯಾಪ್ತಿಯ ಹೊಸ ಹೊಳಲು ಗ್ರಾಮದಲ್ಲಿ ಜೆ ಡಿ ಎಸ್‌ (JDS)  ಪಂಚರತ್ನ ರಥಯಾತ್ರೆ ಆಗಮಿಸಿದ ವೇಳೆ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಕೆ.ಆರ್‌.ಪೇಟೆ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ನೂರಾರು ಕೋಟಿ ಬಿಡುಗಡೆ ಮಾಡಿದ್ದೆ. ಈಗಲೂ ಸಹ ಕೆ.ಆರ್‌.ಪೇಟೆಯಲ್ಲಿ ನಾನು ತೆಗೆದುಕೊಂಡ ಕಾರ್ಯಕ್ರಮಗಳೇ ಮುಂದುವರೆಯುತ್ತಿವೆ ಎಂದರು.

ನಾರಾಯಣಗೌಡ ನಾನು ಮಂತ್ರಿಯಾಗಿ (Minister)  ಯಾರು ಮಾಡದ ಕೆಲಸ ಮಾಡಿದ್ದೇನೆ ಎನ್ನುತ್ತಿದ್ದಾನೆ. ಸದ್ಯದಲ್ಲೇ ಆತನ ಬಣ್ಣ ಬಯಲು ಆಗುತ್ತದೆ. ಆತನ ಬಗ್ಗೆ ಚರ್ಚೆ ಮಾಡುವ ಮಟ್ಟಕ್ಕೆ ನಾನು ಇಳಿಯಲ್ಲ. ಜನರೇ ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಚರತ್ನ ರಥಯಾತ್ರೆ ಹೋದೆ ಕಡೆಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಅಭಿಮಾನದಿಂದ ನನಗೆ ಹೋದಲ್ಲಿ ಎಲ್ಲ ಬಗೆಯ ವಿಶೇಷ ಹಾರಗಳನ್ನು ಹಾಕುತ್ತಿದ್ದಾರೆ. ಈ ಹಾರಗಳು ಗಿನ್ನಿಸ್‌ ರೆಕಾರ್ಡ್‌ಗೆ ಹೋಗಬಹುದು. ಕ್ರೇನ್‌ ಮೂಲಕ ಹಾರವನ್ನು ಸ್ವಯಂ ಪ್ರೇರಣೆಯಿಂದ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಎದ್ದಿರುವ ಈ ಹಾರದ ಕ್ರೇಜ್‌, ಗಿನ್ನಿಸ್‌ ರೆಕಾರ್ಡ್‌ ಸೇರುತ್ತದೆ ಎಂದರು.

ಜನತೆ ಮುಂದೆ ಸತ್ಯಾಂಶ ಇಡಲಿ:

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದರು. ಕೆಲವು ದಾಖಲೆಗಳನ್ನು ಜನತೆ ಮುಂದೆ ಇಡಬೇಕು. ಮಂತ್ರಿಯೊಬ್ಬರು ಮಾನನಷ್ಟಮೊಕದ್ದಮೆ ಹೂಡಿದ್ದರಿಂದ ಅವರ ಬಂಧನವಾಗಿ ಬಿಡುಗಡೆಯಾಗಿದೆ. ಅವರ ಬಳಿ ದಾಖಲೆಗಳು ಇದ್ದರೆ ರಾಜ್ಯದ ಜನತೆ ಮುಂದೆ ಸತ್ಯಾಂಶ ಇಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಜನಾರ್ದನ ರೆಡ್ಡಿ ನೂತನ ಪಕ್ಷ ಘೋಷಣೆ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಬೇರೆ ಪಕ್ಷ ಮಾಡಬಹುದು ಎಂದು ಎಲ್ಲರೂ ನಿರೀಕ್ಷೆ ಇಟ್ಟಿದ್ದರು. ಅವರು ಬೇರೆ ಪಕ್ಷ ಮಾಡುವುದರಿಂದ ಏನು ಆಗುತ್ತದೆ ಎನ್ನುವುದನ್ನು ಮುಂದೆ ನೋಡೋಣ ಎಂದರು.

ಗಂಗಮತಸ್ಥ ಸಮುದಾಯಕ್ಕೆ ನ್ಯಾಯ:

ಗಂಗಮತಸ್ಥರ ಸಮಾಜಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಿರುವುದು ನನಗೆ ತಿಳಿದಿದೆ. ನಿಮ್ಮೆಲ್ಲರ ಆಶೀರ್ವಾದ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಆಗ ಖಂಡಿತ ಸರ್ಕಾರದಿಂದ ವಿಶೇಷ ಮೀಸಲಾತಿಯಾಗಿ ಪರಿಗಣಿಸಿ ಗಂಗಮತಸ್ಥ ಸಮುದಾಯಕ್ಕೆ ನ್ಯಾಯ ಒದಗಿಸುತ್ತೇನೆ. ಸಮುದಾಯದ ಜನತೆ ಆರ್ಥಿಕತೆ ಹೆಚ್ಚಾಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಭಾಷಣದ ವೇಳೆ ರಥಯಾತ್ರೆಯಿಂದ ಕೆಳಗಿಳಿದು ದೇವಸ್ಥಾನಕ್ಕೆ ಬರುವಂತೆ ಮಾಜಿ ಸಿಎಂ ಎಚ್ಡಿಕೆಗೆ ಹೊಸಹೊಳಲು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ರಥಯಾತ್ರೆಯಿಂದ ಕೆಳಗಿಳಿದ ಕುಮಾರಸ್ವಾಮಿ ಅವರು ಸಿಂಗಮ್ಮದೇವಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು 

ರುದ್ರಾಕ್ಷಿಮಾಲೆ ಬೇಡ ಅಂದೆ: ಪಾಂಡವಪುರ ತಾಲೂಕಿನ ಹುಲಿಕೆರೆಯಲ್ಲಿ ವೀರಶೈವ ಸಮುದಾಯದ ಮುಖಂಡರು ರುದ್ರಾಕ್ಷಿಮಾಲೆ ಹಿಡಿದುಕೊಂಡು ನನ್ನನ್ನು ಗೌರವಿಸಲು ಮಧ್ಯರಾತ್ರಿ 12.30ರ ವೇಳೆ ಕಾಯುತ್ತಿದ್ದರು. ರಥಯಾತ್ರೆ ಅಲ್ಲಿಗೆ ಹೋದಾಗ, ಒಂದು ಕಾಲದಲ್ಲಿ ನಾವೆಲ್ಲ ನಿಮ್ಮ ಜೊತೆ ಇದ್ದೆವು. ಕಳೆದ ಅವಧಿಯಲ್ಲಿ ಯಡಿಯೂರಪ್ಪನವರಿಗಾಗಿ ನಿಮ್ಮನ್ನು ವಿರೋಧಿಸಿದೆವು. ಈ ಬಾರಿ ಆ ತಪ್ಪು ಮಾಡುವುದಿಲ್ಲ, ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು. ನಂತರ ಮುಖಂಡರು ತಾವು ತಂದಿದ್ದ ರುದ್ರಾಕ್ಷಿ ಮಾಲೆ ನನಗೆ ಹಾಕಲು ಬಂದರು. ಆದರೆ, ನಾನು ರುದ್ರಾಕ್ಷಿಮಾಲೆ ಹಾಕಿಸಿಕೊಳ್ಳುವಷ್ಟುದೊಡ್ಡವನಲ್ಲ. ಆ ಮಾಲೆಯನ್ನು ದಯಮಾಡಿ ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳಿಗೆ ಅರ್ಪಿಸಿ ಎಂದು ಮನವಿ ಮಾಡಿದೆ ಎಂದು ಕುಮಾರಸ್ವಾಮಿ ರಥಯಾತ್ರೆ ವೇಳೆ ತಿಳಿಸಿದರು.

ಎಚ್ಡಿಕೆಗೆ ನಾನಾ ಹಾರ ಹಾಕಿ ಸ್ವಾಗತ

ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕಿನ ವಿವಿಧೆಡೆ ಶನಿವಾರ ಸಂಚರಿಸಿದ ಪಂಚರತ್ನ ರಥಯಾತ್ರೆ ಭಾನುವಾರ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ತಾಲೂಕಿನ ಗಡಿಭಾಗ ಅಶೋಕನಗರದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಸೇಬಿನ ಹಾರ ಹಾಕಿ, ಡೊಳ್ಳುಕುಣಿತ, ಸೋಮನಕುಣಿತ, ಜಾನಪದ ಕಲಾ ತಂಡಗಳೊಂದಿಗೆ ಭವ್ಯ ಸ್ವಾಗತ ಕೋರಿ ಕಾರ್ಯಕರ್ತರು ಸಂಭ್ರಮಿಸಿದರು. ನಂತರ ಮಾರ್ಗದುದ್ದಕ್ಕೂ ಬಾಳೆಕಾಯಿ, ಕೊಬ್ಬರಿ, ಬೆಲ್ಲ, ರಾಗಿತೆನೆ ಸೇರಿ ವಿವಿಧ ರೀತಿಯ ಹಾರ ಹಾಕಿ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲಾಯಿತು.

Close

Follow Us:
Download App:
  • android
  • ios