ಮೈಸೂರು (ಮಾ.11): ಮೈಮುಲ್ ಚುನಾವಣೆಯಲ್ಲಿ ಶಾಸಕ ಜಿ.ಟಿ.ದೇವೇಗೌಡರ ಬಣವನ್ನು ಮಣಿಸಲು ಜೆಡಿಎಸ್‌ ನಾಯಕರು ಸಜ್ಜಾಗಿದ್ದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೈಸೂರಿನ ಹೊರವಲಯದಲ್ಲಿ ಪಕ್ಷದ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ, ತಂತ್ರಗಾರಿಕೆ ರೂಪಿಸಿದ್ದಾರೆ.

ರಾಜಕೀಯದ ಸೋಂಕಿಲ್ಲದೆ ಮಾ. 16 ರಂದು ನಡೆಯಬೇಕಿದ್ದ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ರಾಜಕೀಯ ಚಟುವಟಿಕೆ ಆರಂಭವಾಗಿದ್ದು, ಮೂರು ಪಕ್ಷಗಳು ಮೈಮುಲ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಅಲ್ಲದೆ ನಾಯಕರು ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಪ್ರಕಟ? ..

ಈವರೆಗೂ ಮೈಮುಲ್‌ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಎಚ್‌.ಡಿ.ರೇವಣ್ಣ ಅವರು ಈ ಬಾರಿ ಜಿ.ಟಿ.ದೇವೇಗೌಡರ ಬಣವನ್ನು ಮಣಿಸಬೇಕೆಂದು ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ.

 ಸಂಜೆ ಈ ಇಬ್ಬರೂ ದಳಪತಿಗಳು ಮೈಸೂರಿಗೆ ಆಗಮಿಸಿ ಎಲ್ಲಾ ತಾಲೂಕುಗಳ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ್ದು, ಶಾಸಕ ಜಿ.ಟಿ.ದೇವೇಗೌಡರ ಬಣದವರನ್ನು ಮಣಿಸುವ ಕುರಿತು ತಂತ್ರಗಾರಿಕೆ ರೂಪಿಸಿದ್ದಾರೆ.

ಈ ವೇಳೆ ಹುಣಸೂರು ತಾಲೂಕಿನ ಇಬ್ಬರು ಮುಖಂಡರಲ್ಲಿನ ಸಮಸ್ಯೆ ಬಗೆಹರಿಸಲು ಮುಂದಾದರೂ ಪ್ರಯೋಜನವಾಗಿಲ್ಲ. ಹಾಗಾಗಿ ಗುರುವಾರ ಬೆಳಗ್ಗೆ ಸಭೆ ಆಯೋಜಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಒಟ್ಟಾರೆ ಮೈಮುಲ್ ಚುನಾವಣೆ ಶಾಸಕ ಜಿ.ಟಿ.ದೇವೇಗೌಡ ಮತ್ತು ಸಾರಾ ಮಹೇಶ್‌ ಅವರಿಗೆ ಪ್ರತಿಷ್ಠೆಯ ಕಣವಾಗಿದ್ದು, ಮೈಸೂರು ಭಾಗದಲ್ಲಿ ತಾವು ಪ್ರಬಲ ನಾಯಕರು ಅನ್ನುವುದನ್ನು ಸಾಬೀತುಗೊಳಿಸಲು ಇದೊಂದು ವೇದಿಕೆ ಆಗಿದೆ. ಹಾಗಾಗಿ ಸಹಕಾರ ಕ್ಷೇತ್ರಗಳ ಚುನಾವಣೆಯು ರಂಗುಪಡೆದುಕೊಂಡಿದೆ.