ಶಿವಮೊಗ್ಗ [ಜ.25]: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡುತ್ತಿರುವ ಹೇಳಿಕೆ ಗಮನಿಸಿದರೆ ಅವರಿಗೆ ಮಾನಸಿಕ ಚಿಕಿತ್ಸೆ ನೀಡುವುದು ಸೂಕ್ತ ಎಂದು ಪಾಲಿಕೆ ಉಪಮೇಯರ್‌ ಹಾಗೂ ಬಿಜೆಪಿ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಎಸ್‌.ಎನ್‌. ಚನ್ನಬಸಪ್ಪ ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ರಾಜ್ಯದ ಜನತೆಯ ಹಾಗೂ ರಕ್ಷಣಾ ಇಲಾಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರ ನೈತಿಕ ಬಲ ಕುಸಿಯುವ ಹೇಳಿಕೆ ನೀಡುತ್ತಿದ್ದಾರೆ. ಕುಮಾರಸ್ವಾಮಿ ದೇಶದ್ರೋಹಿ ಮಾನಸಿಕತೆ. ಇವರು ದೇಶದ ಪರವಾಗಿದ್ದಾರಾ? ದೇಶದ್ರೋಹಿಗಳ ಪರವಾಗಿದ್ದಾರಾ? ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

‘ಪಾಕಿಸ್ತಾನದ ಮೇಲೆ ಪ್ರೀತಿಯಿದ್ರೆ ಎಚ್‌ಡಿಕೆ ದೇಶ ಬಿಡಲಿ’...

ರಾಜ್ಯದ ಜನತೆಯ ಹಾಗೂ ತನಿಕೆಯ ದಿಕ್ಕು ತಪ್ಪಿಸುವ ಪಯತ್ನ ನಿಲ್ಲಿಸಬೇಕು. ಜನತೆ ಸ್ಪಷ್ಟಉತ್ತರ ನೀಡಬೇಕು. ಒಂದು ವೇಳೆ ಭಯೋತ್ಪಾದಕರ ಪರವಾಗಿದ್ದೇನೆ ಎಂದರೆ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕೆಂದರು.

ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಗಮನಿಸಿದರೆ ಸ್ಥಿಮಿತ ಇರುವ ವ್ಯಕ್ತಿ ಈ ರೀತಿ ಹೇಳಿಕೆ ನೀಡುವುದಿಲ್ಲ. ಅವ​ರು ವಿಕ್ಟೋರಿಯ ಆಸ್ಪತ್ರೆಯಲ್ಲಿ ತಪಾಸಣೆಗೊಳಗಾಗುವುದು ಸೂಕ್ತ ಎಂದು ಸಲಹೆ ನೀಡಿದರು.