ಮೈತ್ರಿ ಸರ್ಕಾರ ಪತನಕ್ಕೆ ಎಚ್ಡಿಕೆ ಕಾರಣ : ರೇವಣ್ಣ
ಎಚ್.ಡಿ ಕುಮಾರಸ್ವಾಮಿ ಅವರೇ ಮೈತ್ರಿ ಸರ್ಕಾರ ಪತನವಾಗಲು ಕಾರಣ ಎಂದು ರೇವಣ್ನ ಆರೋಪ ಮಾಡಿದ್ದಾರೆ.
ರಾಮನಗರ [ಆ.29]: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕುಮಾರಸ್ವಾಮಿ ಅವರ ಸ್ವಯಂಕೃತ ಅಪರಾಧ ಕಾರಣವೇ ಹೊರತು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣಕರ್ತರಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರವರ ಟೀಕೆಗೆ ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ತಿರುಗೇಟು ನೀಡಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಾದವರು ಜೆಡಿಎಸ್ - ಕಾಂಗ್ರೆಸ್ ಪಕ್ಷಗಳ ತತ್ವ ಸಿದ್ಧಾಂತ ಹಾಗೂ ಮೈತ್ರಿ ಧರ್ಮಪಾಲನೆ ಮಾಡಬೇಕಾಗಿತ್ತು. ಇದ್ಯಾವುದನ್ನು ಕುಮಾರಸ್ವಾಮಿ ಪಾಲಿಸಲೇ ಇಲ್ಲ. ಈ ವಿಚಾರದಲ್ಲಿ ವ್ಯತ್ಯಾಸಗಳಾಗಿ ಮೈತ್ರಿ ಸರ್ಕಾರ ಪತನಗೊಂಡಿತು ಎಂದರು.
ಮನವಿಗೆ ಸ್ಪಂದಿಸಲಿಲ್ಲ: ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಸ್ಪರ್ಧೆ ಮಾಡಿದ್ದೆ. ಅದನ್ನು ಪರಿಗಣಿಸದ ಕುಮಾರಸ್ವಾಮಿ ಅವರು ನಾನು ಭೇಟಿ ಮಾಡಿದಾಗಲೆಲ್ಲ ಆತ್ಮೀಯವಾಗಿಯೇ ನಡೆದುಕೊಳ್ಳುತ್ತಿದ್ದರು. ನಾನೇ ಖುದ್ದಾಗಿ ಎರಡು ಮೂರು ಭೇಟಿಯಾಗಿ ಮನವಿ ಮಾಡಿದ್ದ ಒಂದೇ ಒಂದು ಕೆಲಸವನ್ನು ಕುಮಾರಸ್ವಾಮಿ ಮಾಡಲೇ ಇಲ್ಲ.
ಕಾಗಿನೆಲೆ ಪ್ರಾಧಿಕಾರ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿಗಳೇ ಆಗಿದ್ದಾರೆ. ಪ್ರಾಧಿಕಾರದ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಮನವಿ ಮಾಡಿದರು ಸ್ಪಂದಿಸಲಿಲ್ಲ. ಕುಮಾರಸ್ವಾಮಿ ಅವರ ಇಂತಹ ಬೇಜವಾಬ್ದಾರಿ ನಡವಳಿಕೆಗಳಿಗೆ ಅನೇಕ ಉದಾಹರಣೆಗಳಿವೆ ಎಂದು ಕಿಡಿಕಾರಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದೋಸ್ತಿ ಸರ್ಕಾರ ಅಧಿಕಾರದಲ್ಲಿ ಇರುವಾಗ ಮುಖ್ಯಮಂತ್ರಿಗಳು ಉಭಯ ಪಕ್ಷಗಳ ಶಾಸಕರು ಹಾಗೂ ಸಚಿವರುಗಳಿಗೆ ಸಮಾನ ಪ್ರಮಾಣದಲ್ಲಿ ಅನುದಾನ ಹಂಚಿಕೆ ಮಾಡಬೇಕು. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಸಚಿವರಿಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗಿದೆ. ಅಲ್ಲದೆ, ಬಿಜೆಪಿ ಶಾಸಕರಿಗೆ ಹೆಚ್ಚು ವಿಶೇಷ ಅನುದಾನ ನೀಡಿದ್ದಾರೆ.
ಮೈತ್ರಿ ಧರ್ಮದಲ್ಲಿರುವ ಶಾಸಕರಿಗೆ ಅನುದಾನ ಬಿಡುಗಡೆ ಮಾಡದಿದ್ದಾಗ ಯಾರನ್ನು ಪ್ರಶ್ನೆ ಮಾಡಬೇಕು. ಅನುದಾನ ಹಾಗೂ ಅಧಿಕಾರ ಹಂಚಿಕೆಯಲ್ಲಿ ಕುಮಾರಸ್ವಾಮಿ ನಡೆದುಕೊಂಡ ನಡವಳಿಕೆಗಳು ಯಾರೂ ಒಪ್ಪುವಂತಹದಲ್ಲ ಎಂದು ರೇವಣ್ಣ ಹೇಳಿದರು.
ಹಿಂದಿನಿಂದಲೂ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧವಾಗಿ ಸ್ಪರ್ಧೆ ಮಾಡುತ್ತಲೇ ಬಂದಿದ್ದವು. ಕೋಮುವಾದಿ ಪಕ್ಷವನ್ನು ದೂರವಿಡುವ ಉದ್ದೇಶದಿಂದ ರಾಷ್ಟ್ರ ನಾಯಕರ ಅಪೇಕ್ಷೆಯಂತೆ ಜಾತ್ಯತೀತ ಶಕ್ತಿಗಳು ಒಗ್ಗೂಡಿ ಮೈತ್ರಿ ಸರ್ಕಾರ ರಚನೆ ಮಾಡಲಾಯಿತು. ಎರಡು ಪಕ್ಷಗಳ ಹಿರಿಯ ನಾಯಕರು ಒಂದಾದರು ಸಹ ಕಾರ್ಯಕರ್ತರು ಮಾತ್ರ ಒಂದಾಗಲೇ ಇಲ್ಲ. ಇದು ಸರ್ಕಾರದಲ್ಲಿ ಬಿರುಕು ಮೂಡಲು ಪ್ರಮುಖ ಕಾರಣ ಎಂದರು.
ಯಾರು ಹೊಣೆ: ಅನರ್ಹ ಶಾಸಕರಲ್ಲಿ ಕೆಲವರು ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಂಡವರು ಇರಬಹುದು. ಆದರೆ, ರಮೇಶ್ ಜಾರಕಿಹೊಳಿ, ಮುನಿರತ್ನ, ಎಸ್.ಟಿ. ಸೋಮಶೇಖರು ಅವರೆಲ್ಲ ಕಾಂಗ್ರೆಸ್ನಲ್ಲಿಯೇ ಇದ್ದವರು. ಅವರೆಲ್ಲರು ಸಿದ್ದರಾಮಯ್ಯರವರ ಮಾತು ಕೇಳಿ ಹೋದರಂದು ಹೇಳಿದರೆ ನಂಬಲುಸಾಧ್ಯವೇ? ಹಾಗಾದರೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್ .ವಿಶ್ವನಾಥ್, ಕೆ.ಸಿ.ನಾರಾಯಣಗೌಡ ಹಾಗೂ ದೇವೇಗೌಡರ ಮನೆಮಗನಂತಿದ್ದ ಗೋಪಾಲಯ್ಯ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಅದಕ್ಕೆ ಯಾರನ್ನು ಹೊಣೆ ಮಾಡಬೇಕು. ರಾಷ್ಟ್ರೀಯ ನಾಯಕರಾದ ದೇವೇಗೌಡರು ಸತ್ಯಕ್ಕೆ ಹತ್ತಿರವಾದ ಮಾತುಗಳನ್ನು ಆಡಬೇಕು. ಇದೆಲ್ಲವನ್ನು ನಾಡಿನ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಟಾಂಗ್ ನೀಡಿದರು.
ಸಿದ್ದು ಮಾಸ್ ಲೀಡರ್: ಸಿದ್ದರಾಮಯ್ಯ ಕಡೆಗಣಿಸುವ ನಾಯಕರಲ್ಲ. ಅವರಲ್ಲಿ ಮಾಸ್ ಲೀಡರ್ಶಿಪ್ ಇದೆ. ಇಲ್ಲ ಎನ್ನಲು ಯಾರಿಂದಲೂ ಸಾಧ್ಯವಿಲ್ಲ. ಐದು ವರ್ಷ ಉತ್ತಮ ಆಡಳಿತ ನೀಡಿದವರು. ಜನರಿಗೆ ತಲುಪುವ ಕಾರ್ಯಕ್ರಮ ನೀಡಿದವರು. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಒಬ್ಬರದೇ ನಾಯಕತ್ವ ಎಂದು ಹೇಳಲಾಗದು. ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಇದೆ ಎಂದರು.
ಈಗ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟದ ದಿನಗಳು ಎದುರಾಗಿವೆ. ಇಂತಹ ಸನ್ನಿವೇಶದಲ್ಲಿ ಪಕ್ಷವನ್ನು ಸಂಘಟಿಸಿ ಮುನ್ನಡೆಸುವ ಸೂಕ್ತ ವ್ಯಕ್ತಿ ಬೇಕಾಗಿದ್ದಾರೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮಾತ್ರವಲ್ಲದೆ ಅನೇಕರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿತರಾಗಿದ್ದಾರೆ. ಆದರೆ, ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ.
ನಾನು 30 ಶಾಸಕರು ಹಾಗೂ 120 ಶಾಸಕರಿದ್ದ ಕಾಂಗ್ರೆಸ್ನ್ನು ನೋಡಿದ್ದೇನೆ. ಪಕ್ಷದಲ್ಲಿ ಅನೇಕ ಏಳುಬೀಳುಗಳನ್ನು ನೋಡಿದ್ದೇವೆ. ಈಗ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸುಲಲಿತವಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಒಂದೇ ತಿಂಗಳಲ್ಲಿ ಬಿಜೆಪಿಯ ಯೋಗ್ಯತೆ ಏನೆಂಬುದು ಜನರಿಗೆ ಗೊತ್ತಾಗಿದೆ. ಮತ್ತೊಮ್ಮೆ ಜನರ ಬಳಿ ಹೋದಾಗ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ರೇವಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.