ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ 500 ರಿಂದ 600 ಎಕರೆ ಭೂಮಿಯ ಅಗತ್ಯವಿದೆ. ಏ.30ರೊಳಗೆ ಜಾಗದ ಕುರಿತಾದ ಸಮಸ್ಯೆ ಬಗೆಹರಿಸಿಕೊಡುವಂತೆ ರಾಜ್ಯ ಕೈಗಾರಿಕಾ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮಂಡ್ಯ (ಏ.14): ಜಿಲ್ಲೆಯಲ್ಲಿ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ 500 ರಿಂದ 600 ಎಕರೆ ಭೂಮಿಯ ಅಗತ್ಯವಿದೆ. ಏ.30ರೊಳಗೆ ಜಾಗದ ಕುರಿತಾದ ಸಮಸ್ಯೆ ಬಗೆಹರಿಸಿಕೊಡುವಂತೆ ರಾಜ್ಯ ಕೈಗಾರಿಕಾ ಸಚಿವರಿಗೆ ಮನವಿ ಮಾಡಿದ್ದು, ಮೇ ತಿಂಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ಭೂಮಿ ಪೂಜೆ ಮಾಡುವ ಉದ್ದೇಶ ಹೊಂದಿರುವುದಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಬೃಹತ್ ಕೈಗಾರಿಕೆ ಖಾತೆ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ನಡೆದ ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ರಾಜ್ಯದಲ್ಲಿ ಉದ್ಯಮಗಳನ್ನು ಉತ್ತೇಜಿಸಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ವಿಸ್ತೃತ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಕೂಡ ಪಾಲ್ಗೊಂಡಿದ್ದರು. ಇವರ ಜೊತೆ ಮಂಡ್ಯದ ಜನಪ್ರತಿನಿಧಿಗಳು ಹಾಗೂ ಮಾಜಿ ಮಂತ್ರಿಗಳು, ಮಾಜಿ ಶಾಸಕರು ಭಾಗಿಯಾಗಿದ್ದರು.
ಎಚ್‌ಡಿಕೆ ಹೇಳಿದ್ದಿಷ್ಟು
ಈಗಾಗಲೇ ಬೃಹತ್ ಕೈಗಾರಿಕೆ ಇಲಾಖೆಯ ಅಧೀನದಲ್ಲಿ ಬರುವ ಆಟೋ ಮೋಟಿವ್ ರಿಸರ್ಚ್ ಇನ್ಸ್ಟಿಟ್ಯೂಟ್ ಪರೀಕ್ಷಾ ಕೇಂದ್ರವನ್ನು ಮಂಡ್ಯದಲ್ಲಿ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಅಂತಹ ಕೇಂದ್ರಗಳು ಇಡೀ ರಾಷ್ಟ್ರದಲ್ಲಿ ನಾಲ್ಕು ಕಡೆ ಮಾತ್ರ ಇವೆ. ಐದನೇ ಕೇಂದ್ರವನ್ನು ಕರ್ನಾಟಕಕ್ಕೆ ತರಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ನಮ್ಮ ಇಲಾಖೆಗೆ ಸಂಬಂಧಿಸಿದ ಎಆರ್‌ಎಐ ಅಂತಾರಾಷ್ಟ್ರೀಯ ಮಟ್ಟದ ಪರೀಕ್ಷಾ ಕೇಂದ್ರ ಆಗಬೇಕಿದೆ.
ಈ ಕೇಂದ್ರದಿಂದ ಆಟೋ ಮೊಬೈಲ್ ಕ್ಷೇತ್ರಕ್ಕೆ ಅದರಲ್ಲೂ ಮುಖ್ಯವಾಗಿ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಅತಿ ಹೆಚ್ಚಿನ ಉತ್ತೇಜನ ದೊರೆಯಲಿದೆ. ಎಆರ್‌ಎಐ ಕೇಂದ್ರವು ಸೇರಿದಂತೆ ಅದಕ್ಕೆ ಪೂರಕ ವ್ಯವಸ್ಥೆಗಳನ್ನು ನಿರ್ಮಿಸುವ ಉದ್ದೇಶದಿಂದ ಸುಮಾರು 500-600 ಎಕರೆ ಭೂಮಿ ಬೇಕಿದೆ. ಅದು ನನ್ನ ಲೋಕಸಭಾ ಕ್ಷೇತ್ರ ಮಂಡ್ಯದಲ್ಲೇ ಆಗಬೇಕು ಎಂದು ನಿರ್ಧರಿಸಿದ್ದೇನೆ. ಎಆರ್‌ಎಐ ಕೇಂದ್ರಕ್ಕೆ ಈಗಾಗಲೇ ಜಿಲ್ಲೆಯಲ್ಲಿ ಎರಡು ಮೂರು ಜಾಗ ನೋಡಿದ್ದೇವೆ.
ಅಲ್ಲಿ ಲಭ್ಯವಿರುವ ಜಾಗ ಬಹಳ ಸೀಮಿತವಾಗಿದೆ. ಆ ಅಂಶದ ಬಗ್ಗೆಯೂ ರಾಜ್ಯದ ಕೈಗಾರಿಕಾ ಸಚಿವರ ಜತೆ ಚರ್ಚಿಸಲಾಯಿತು. ಕೈಗಾರಿಕಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯನ್ನು ಸಮಾನಂತರವಾಗಿ ನಡೆಯಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಏಪ್ರಿಲ್ 30ರೊಳಗೆ ಜಾಗದ ಸಮಸ್ಯೆ ಬಗೆಹರಿಸಿ ಕೊಡುವಂತೆ ಸಚಿವರನ್ನು ಕೋರಿದ್ದೇನೆ. ಏಕೆಂದರೆ ಮೇ ತಿಂಗಳಲ್ಲಿ ಟೆಸ್ಟಿಂಗ್ ಕೇಂದ್ರ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸುವ ಉದ್ದೇಶವನ್ನು ನನ್ನ ಸಚಿವಾಲಯ ಹೊಂದಿದೆ ಎಂದರು.
ನಾನು ಕೂಡ ಭೂಮಿ ಬಗ್ಗೆ ಒಂದು ಸಲಹೆಯನ್ನು ಸಚಿವರಿಗೆ ನೀಡಿದ್ದೇನೆ. ಒಂದೆಡೆ 500 ಎಕರೆ ಸರ್ಕಾರಿ ಭೂಮಿ ಇದೆ. ಭೂಮಿಯಲ್ಲಿ ಯಾರಾದರೂ ರೈತರು ಅನುಭೋಗದಲ್ಲಿ ಇದ್ದರೆ ಅವರಿಗೆ ಸೂಕ್ತ ಪರಿಹಾರ ನೀಡಿ ಭೂಮಿಯನ್ನು ತೆಗೆದುಕೊಳ್ಳಬಹುದು. ಈ ಬಗ್ಗೆ ನಾನು ಕೂಡ ಆ ರೈತರ ಜೊತೆ ಒಮ್ಮೆ ಚರ್ಚಿಸಿದೆ ಅದಕ್ಕೆ ಅವರಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿತ್ತು. ಅದೇ ರೀತಿ ಮುಂಗಡ ಪತ್ರದಲ್ಲಿ 100 ಎಕರೆ ಇರುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು ಎಂದು ಸಚಿವರು ಹೇಳಿದರು.
ಮಂಡ್ಯ ಕೃಷಿ ಆಧಾರಿತ ನೀರಾವರಿ ಜಿಲ್ಲೆ. ಅಲ್ಲಿ ಸರ್ಕಾರಿ ಮತ್ತು ಒಣಭೂಮಿ ಲಭ್ಯತೆ ಅತ್ಯಂತ ಕಡಿಮೆ ಇದೆ. ಆದರೆ, ಉದ್ದೇಶಿತ ಪರೀಕ್ಷಾ ಕೇಂದ್ರಕ್ಕೆ ಸರ್ಕಾರ 100 ಎಕರೆ ನೀಡುವುದಾಗಿ ತಿಳಿಸಿದೆ ಎಂಬುದೇನೋ ಸರಿ. ಆದರೆ, ಇನ್ನು ಹೆಚ್ಚಿನ ಜಾಗ ಕೊಟ್ಟರೆ ಉತ್ತಮ ರೀತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ತರಬಹುದು ಎಂದರು. ಸಭೆಯಲ್ಲಿ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕ ಪಿ.ರವಿಕುಮಾರ್ ಹಾಗೂ ಎಆರ್‌ಎಐ ಪರೀಕ್ಷಾ ಕೇಂದ್ರ, ಕೆಐಎಡಿಬಿ ಅಧಿಕಾರಿಗಳು ಹಾಜರಿದ್ದರು.


