ಹಾಸನ (ಡಿ.13):  ಸಿದ್ದರಾಮಯ್ಯನವರ ವ್ಯಕ್ತಿತ್ವ ತುಂಬಾ ದೊಡ್ಡದು. ಹಾಗಾಗಿ ಅವರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಯಾವ ರೀತಿ ಬೇಕಾದರೂ ಮಾತನಾಡಿಕೊಳ್ಳಲಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದರು.

ನಗರದ ಸಂಸದರ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಅವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ಆದರೆ ನಾನು ಅವರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಅವರು ಮಾತನಾಡಲು ಸ್ವಾತಂತ್ರ್ಯವಿದೆ ಮಾತನಾಡಲಿ. ಆದರೆ ತೀರ್ಪು ಕೊಡುವವರು ಜನರಲ್ಲವೇ? ನಾನು ಎಲ್ಲೂ ಓಡಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಾನು ಯಾವ ಪಕ್ಷದ ಸಭೆಯನ್ನು ಕೂಡ ಕರೆದಿಲ್ಲ. ಕುಮಾರಸ್ವಾಮಿ ಮತ್ತು ಬಂಡೆಪ್ಪ ಕಾಶೆಂಪುರ್‌ ಮತ್ತು ರಾಜ್ಯಾಧ್ಯಕ್ಷರಾದ ಎಚ್‌.ಕೆ. ಕುಮಾರಸ್ವಾಮಿ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಇದುವರೆಗೂ ಬಿಜೆಪಿಯೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದ ಮೇಲೆ ಹೊಂದಾಣಿಕೆಯ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೋ ಹತ್ಯೆ ನಿಷೇಧ: ಜೆಡಿಎಸ್ ನಿಲುವೇನು.? ಗೊಂದಲಕ್ಕೀಡಾದ ದಳಪತಿಗಳು ..

ಪ್ರಸ್ತುತ ವಿದ್ಯಮಾನಗಳನ್ನು ನಾನು ಗಮನಿಸುತ್ತಿದ್ದೇನೆ. ವಾದ-ಪ್ರತಿವಾದಗಳ ಬಗ್ಗೆಯೂ ಕೂಡ ನಾನು ಹಾರೈಸುತ್ತೇನೆ. ಅದರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ರಾಜಕೀಯದಲ್ಲಿ ನನಗೆ ಆರ್ಶಿವಾದ ಮಾಡುವ ದೇವರು ಮಾವಿನಕೆರೆ ರಂಗನಾಥ. ಪ್ರತಿ ಕಾರ್ತಿಕ ಮಾಸದಲ್ಲಿ ನಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸುತ್ತಿದ್ದೆ. ಆದರೆ ಕೊರೋನಾ ಕಾರಣದಿಂದ ಶ್ರಾವಣಮಾಸ ಮಾಡಲು ಸಾಧ್ಯವಾಗಲಿಲ್ಲ. ಕಾರ್ತಿಕ ಮಾಸದ ಅಂತ್ಯದಲ್ಲಿ ಪೂಜೆ ಸಲ್ಲಿಸಲು ಬಂದಿದ್ದೇನೆ ಎಂದರು.

ಆರೋಗ್ಯ ಸುಧಾರಣೆ ಆಗುವವರೆಗೂ ರಾಜಕೀಯವಾಗಿ ಓಡಾಡುವುದಿಲ್ಲ. ನನ್ನ ದೇಹದ ಸೊಂಟ ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರು, ಸೊಂಟ ನೋವಿಗೆ ಯಾವುದೇ ಶಸ್ತ್ರಚಿಕಿತ್ಸೆ ಪಡೆಯುವುದಿಲ್ಲ. ಸದ್ಯ ಆಯುರ್ವೇದ ಚಿಕಿತ್ಸೆಗೆ ಒಳಗಾಗಿದ್ದೇನೆ. ಚಿಕಿತ್ಸೆಯ ನಂತರ ರಾಜಕೀಯ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಎಲ್ಲಾವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದರು.