ಬೆಂಗಳೂರು (ಆ.14) :  ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲಿನ ದಾಳಿ ಘಟನೆಯು ದುರದೃಷ್ಟಕರವಾಗಿದ್ದು, ದೇಶದ ಯಾವುದೇ ಭಾಗದಲ್ಲಿಯೂ ಇಂತಹ ಘಟನೆ ನಡೆಯಬಾರದು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಲಭೆಗೆ ಸಂಬಂಧಿಸಿದಂತೆ ಪೊಲೀಸರು 150 ಮಂದಿಯನ್ನು ಬಂಧಿಸಿದ್ದಾರೆ. 

"

ಆದರೆ, ಇವರಲ್ಲಿ ನಿಜವಾದ ಆರೋಪಿಗಳು ಎಷ್ಟು? ಎಂಬುದನ್ನು ಪತ್ತೆ ಮಾಡಬೇಕಿದೆ. ಎಲ್ಲರೂ ಆರೋಪಿಗಳಾಗಲು ಇರಲು ಸಾಧ್ಯವಿಲ್ಲ. ಹೀಗಾಗಿ ತಪ್ಪತಸ್ಥರನ್ನು ಮಾತ್ರ ಘಟನೆಯ ಹೊಣೆಗಾರರನ್ನಾಗಿ ಮಾಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಿರಪರಾಧಿಗಳಿಗೆ ಶಿಕ್ಷೆಯಾಗುವುದು ಬೇಡ ಎಂದು ತಿಳಿಸಿದರು.

ಬೆಂಗಳೂರು ಗಲಭೆ ಮ್ಯಾಜಿಸ್ಟ್ರೇಟ್ ತನಿಖೆಗೆ, ಗಲಭೆಕೋರರಿಂದಲೇ ನಷ್ಟ ವಸೂಲಿ.

‘ಮನೆ ಸುಡುವುದು, ಕಾರಿಗೆ ಬೆಂಕಿ ಹಾಕುವುದು, ಮನೆ ದೋಚುವುದು ಎಂದೂ ರಾಜ್ಯದಲ್ಲಿ ನಡೆದಿರುವುದನ್ನು ನಾನು ನೋಡಿಲ್ಲ. ಶಾಸಕರ ಮನೆಯನ್ನು ಹೀಗೆ ಸುಟ್ಟಿರುವುದು ಇದೇ ಮೊದಲು. ಶಾಸಕರಿಗೆ ಧೈರ್ಯ ತುಂಬುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು. ಗಲಭೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಕೆಸರೆರಚಾಟ, ರಾಜಕೀಯ ಚೆಲ್ಲಾಟ ಬೇಡ. ಯಾರು ಸಹ ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ಮಾತುಗಳನ್ನು ಗಮನಿಸಿದ್ದೇನೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಣೆ ಮಾಡುವ ವೇಳೆ ರಾಜಕೀಯ ಪಕ್ಷಗಳು ಮಧ್ಯಪ್ರವೇಶ ಮಾಡಬಾರದು’ ಎಂದು ಸಲಹೆ ನೀಡಿದರು.

ಘಟನೆ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಮಾತನಾಡಿದ ಮೇಲೂ ಕೆಲವು ಸಚಿವರು ಮಾತನಾಡುತ್ತಿದ್ದಾರೆ. ಹೀಗಾದರೆ ಮುಖ್ಯಮಂತ್ರಿಗಳ ಮಾತಿಗೆ ಅರ್ಥವೇ ಇಲ್ಲವೇ ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದರು.