ಪಾಂಡವಪುರ (ಫೆ.27):  ನಾನು ರಾಜಕೀಯಕ್ಕೆ ಬಂದಾಗ ಬಿಜೆಪಿ ಎಲ್ಲಿತ್ತು ಎಂದು ಪ್ರಶ್ನಿಸುವುದರೊಂದಿಗೆ ಜೆಡಿಎಸ್‌ ಎಲ್ಲಿದೆ ಎಂದವರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿರುಗೇಟು ನೀಡಿದರು.

ಪಟ್ಟಣದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ ಶಕ್ತಿ ಇಲ್ಲ, ಜೆಡಿಎಸ್‌ ಪಕ್ಷ ಎಲ್ಲಿದೆ ಎನ್ನುವವರ ಬಗ್ಗೆ ಟೀಕಿಸೋಕೆ ಹೋಗೋಲ್ಲ. ಅಣಕವಾಡುವುದು ಮನುಷ್ಯನ ಸ್ವಭಾವ. ಅವರನ್ನು ನಾನು ಟೀಕಿಸಿ ಅಗೌರವ ತರುವುದಿಲ್ಲ. ನಾನು ರಾಜಕೀಯ ಪ್ರವೇಶಿಸಿದ ಸಮಯದಲ್ಲಿ ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಲೋಕಸಭಾ ಸದಸ್ಯರಿರಲಿಲ್ಲ. ನಾನು ಮುಖ್ಯಮಂತ್ರಿಯಾದಾಗ ಇಬ್ಬರಿದ್ದರು. ಈಗ 25 ಜನರಿದ್ದಾರೆ. ಹಂತ ಹಂತವಾಗಿ ಅವರು ಮೇಲಕ್ಕೆ ಬಂದರು ಎಂದು ಹೇಳಿದರು.

ಧರ್ಮ ಧರ್ಮಗಳ ನಡುವೆ ಸಂಘರ್ಷ:

ಅಧಿಕಾರಕ್ಕೆ ಬಂದ ನಂತರ ಬಿಜೆಪಿಯವರು ಧರ್ಮ ಧರ್ಮಗಳ ನಡುವೆ ಸಂಘರ್ಷವನ್ನು ತಂದಿಟ್ಟಿದ್ದಾರೆ. ಕೋಮುವಾದಿ ಪಕ್ಷ ಎಂಬ ಪಟ್ಟಕಟ್ಟಿಕೊಂಡಿದ್ದಾರೆ. ಎಲ್ಲ ಧರ್ಮಗಳಿಗೂ ರಕ್ಷಣೆ ಕೊಡುವ ವ್ಯವಸ್ಥೆ ಮಾಡಿದವರು ಅಂಬೇಡ್ಕರ್‌. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಅಸಹ್ಯವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

'2023ಕ್ಕೆ ಮತ್ತೊಮ್ಮೆ ಎಚ್ಡಿಕೆ ಮುಖ್ಯಮಂತ್ರಿ'

ನಮ್ಮದೇ ಜೆಡಿಎಸ್‌ ಎಂದುಕೊಂಡು ನಮ್ಮ ಪಕ್ಷದಲ್ಲೇ ಇದ್ದ ವ್ಯಕ್ತಿಗಳು ಆ ಪಕ್ಷಕ್ಕೆ ಶಕ್ತಿ ತುಂಬಲಿಕ್ಕೆ ನಮ್ಮ ಪಕ್ಷವನ್ನು ಬಿಟ್ಟುಹೋಗಿದ್ದಾರೆ. ನಮ್ಮ ಪಕ್ಷದ ಬಲವನ್ನು ಕುಗ್ಗಿಸಿದ್ದಾರೆ. ಆದರೂ, ಜೆಡಿಎಸ್‌ ಶಕ್ತಿ ಕುಗ್ಗಿಲ್ಲ. ಮೈಸೂರು ಮಹಾನಗರ ಪಾಲಿಕೆಯ ಅಧಿಕಾರ ಹಿಡಿದು ಹೆಣ್ಣು ಮಗಳೊಬ್ಬಳು ಜೆಡಿಎಸ್‌ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾಳೆ. ಜೆಡಿಎಸ್‌ ಎಲ್ಲಿದೆ ಎನ್ನುವವರಿಗೆ ಇದೇ ಉತ್ತ ಎಂದು ಖಡಕ್ಕಾಗಿ ಹೇಳಿದರು.

ಬಿ ಟೀಂ ಎಂದು ಕರೆದಾಗ ನೋವಾಗಿತ್ತು:  ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದಿದ್ದ ಸಮಯದಲ್ಲಿ ಹಾಸನದಲ್ಲಿ ಜೆಡಿಎಸ್‌ ಪಕ್ಷ ಬಿಜೆಪಿಯ ಬಿ-ಟೀಂ ಎಂದು ಕರೆದರು. ಆಗ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ಆದರೂ ಅವರ ಬಗ್ಗೆ ನಾನು ಮಾತನಾಡಲಿಲ್ಲ ಎಂದ ದೇವೇಗೌಡರು, ವಯಸ್ಸಾಗಿದೆ ಎಂದು ನಾನು ಮನೆಯಲ್ಲಿ ಕುಳಿತಿಲ್ಲ. ನನ್ನ ಹೋರಾಟ ನಿರಂತರವಾಗಿರುತ್ತದೆ. ಅದು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಕ್ಕಲ್ಲ. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿ ಎಂದು ಯಾವುದೇ ಸಭೆಯಲ್ಲೂ ನಾನು ಕರೆಕೊಟ್ಟಿಲ್ಲ. ನನ್ನ ಹೋರಾಟವೇನಿದ್ದರೂ ರೈತರು, ಜನರ ಹಿತಕ್ಕಷ್ಟೇ ಸೀಮಿತ ಎಂದು ಸ್ಪಷ್ಟಪಡಿಸಿದರು.