ಬೆಂಗಳೂರು [ಜ.21]:  ಪಕ್ಷವು ಸಂದಿಗ್ಧ ಪರಿಸ್ಥಿತಿಯಲ್ಲಿದೆ ಎಂದು ಹೇಳಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು, ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪರಿಣಾಮಕಾರಿಯಾಗಿ ಬಲಗೊಳಿಸುವ ನಿಟ್ಟಿನಲ್ಲಿ ಗುರುವಾರ ಪಕ್ಷದ ಮುಖಂಡರ, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯನ್ನು ಕರೆದಿದ್ದಾರೆ.

ನಗರದ ಅರಮನೆ ಮೈದಾನದ ಶೃಂಗಾರ್‌ ಪ್ಯಾಲೇಸ್‌ನಲ್ಲಿ ಸಭೆ ಜರುಗಲಿದೆ. ಸಭೆಯ ಉದ್ಘಾಟನೆಯನ್ನು ದೇವೇಗೌಡರು ನೆರವೇರಿಸಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿರುವರು.

ಮಾಜಿ ಹಾಗೂ ಹಾಲಿ ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು, ನಗರ ಸಭೆ, ಪಟ್ಟಣ ಪಂಚಾಯಿತಿ, ಗ್ರಾಮಪಂಚಾಯಿತಿ, ನಗರ ಪಾಲಿಕೆ, ಜಿಲ್ಲಾ/ತಾಲೂಕು ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಮಾಜಿ ಸದಸ್ಯರು, ಮಹಿಳಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸುವಂತೆ ಸೂಚಿಸಲಾಗಿದೆ.

ಚುನಾವಣೆಗೆ ಜೆಡಿಎಸ್‌ ಟಿಕೆಟ್‌ ಬೇಕಾ: ಅರ್ಜಿ ಸಲ್ಲಿಸಿ...

ಈ ಸಂಬಂಧ ದೇವೇಗೌಡರು ಮತ್ತು ಎಚ್‌.ಕೆ.ಕುಮಾರಸ್ವಾಮಿ ಹೆಸರಲ್ಲಿ ಪಕ್ಷದ ಮುಖಂಡರಿಗೆ ಆಹ್ವಾನ ಪತ್ರ ಕಳುಹಿಸಲಾಗಿದ್ದು, ಕಳೆದ 14 ತಿಂಗಳ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉಂಟಾದ ಗೊಂದಲಗಳಿಂದಾಗಿ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಭಾವನೆಗಳಿಗೆ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸಲು ಸಾಧ್ಯವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ದಳದಲ್ಲಿ ಭುಗಿಲೆದ್ದ ‘ಅಸಮಾಧಾನ’ದ ಹೊಗೆ : ಈಗ ಎಲ್ಲವೂ ಸರಿಯಿಲ್ಲ..

ಮೈತ್ರಿ ಸರ್ಕಾರದ ಅವಧಿಯಲ್ಲಾದ ಕಹಿ ಘಟನೆಗಳನ್ನು ಮತ್ತು ಲೋಕಸಭೆ ಹಾಗೂ ವಿಧಾನಸಭಾ ಉಪಚುನಾವಣೆಯಲ್ಲಾದ ಹಿನ್ನಡೆಯನ್ನು ಮರೆತು ನಾವೆಲ್ಲರೂ ಕೂಡಿ ಪಕ್ಷಕ್ಕೆ ಹೊಸ ಚೈತ್ಯನ್ಯ ತುಂಬುವ ಕೆಲಸವನ್ನು ಗ್ರಾಮಮಟ್ಟದಿಂದ ಹಾಗೂ ರಾಜ್ಯ ಮಟ್ಟದವರೆಗೆ ಮಾಡಬೇಕಾಗಿದೆ. ಪಕ್ಷವು ಸದ್ಯ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಆದರೂ ಪಕ್ಷವನ್ನು ಕಟ್ಟೇ ಕಟ್ಟುತ್ತೇವೆ ಎಂಬ ಹಠ ಇದೆ. ಮುಂದಿನ ದಿನದಲ್ಲಿ ಹೋರಾಟದ ರೂಪುರೇಷೆಗಳನ್ನು ತಯಾರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.