ಅಧಿಕಾರಿಗಳ ಹಣದಾಹ, ಲಂಚ ನೀಡಲು ಹಣವಿಲ್ಲದೆ ದುಡಿಮೆಯ ಎತ್ತನ್ನೇ ಕೊಡಲು ಪುರಸಭೆಗೆ ತಂದ ಹಾವೇರಿ ರೈತ!
ಅಸಹಾಯಕ ರೈತನೊಬ್ಬ ಲಂಚ ನೀಡಲು ಹಣವಿಲ್ಲದ ಕಾರಣ ತನ್ನ ದುಡಿಮೆಯ ಎತ್ತನ್ನೇ ಲಂಚವಾಗಿ ನೀಡಲು ಪುರಸಭೆ ಕಚೇರಿಗೆ ತೆರಳಿದ ಮನಕಲಕುವ ಹಾಗೂ ಆಘಾತಕಾರಿ ಘಟನೆ ಹಾವೇರಿಯ ಸವಣೂರಿನ ಪುರಸಭೆಯಲ್ಲಿ ನಡೆದಿದೆ.
ಹಾವೇರಿ (ಮಾ.10): ಅಸಹಾಯಕ ರೈತನೊಬ್ಬ ಲಂಚ ನೀಡಲು ಹಣವಿಲ್ಲದ ಕಾರಣ ತನ್ನ ದುಡಿಮೆಯ ಎತ್ತನ್ನೇ ಲಂಚವಾಗಿ ನೀಡಲು ಪುರಸಭೆ ಕಚೇರಿಗೆ ತೆರಳಿದ ಮನಕಲಕುವ ಹಾಗೂ ಆಘಾತಕಾರಿ ಘಟನೆ ಹಾವೇರಿಯ ಸವಣೂರಿನ ಪುರಸಭೆಯಲ್ಲಿ ನಡೆದಿದೆ. ಮನೆ ಖಾತೆ ಬದಲಾಯಿಸಲು 25,000 ಸಾವಿರ ರೂ. ಲಂಚ ನೀಡುವಂತೆ ಪುರಸಭೆ ಅಧಿಕಾರಿಗಳು ಯಲ್ಲಪ್ಪ ರಾಣೋಜಿ ಎಂಬ ರೈತನಿಗೆ ಕೇಳಿದ್ದರು. ಈ ಹಿಂದೆಯು ಹಣವನ್ನು ಕೊಟ್ಟಿದ್ದೇನೆ. ಹಣ ತೆಗೆದುಕೊಂಡವರು ವರ್ಗಾವಣೆ ಆಗಿದ್ದಾರೆ. ಈಗ ಹೊಸದಾಗಿ ಬಂದಿರುವ ಅಧಿಕಾರಿಗಳು ಮತ್ತೆ 25,000 ಸಾವಿರ ಹಣ ಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳ ಹಣ ದಾಹದ ವರ್ತನೆಯಿಂದ ರೊಚ್ಚಿಗೆದ್ದ ಅನ್ನದಾತ ತಮ್ಮ ಎತ್ತಿನ ಸಮೇತ ಪುರಸಭೆ ಕಚೇರಿಗೆ ಬಂದರು. ಬಳಿಕ ಅಧಿಕಾರಿಗಳ ಬಳಿ ಹೋಗಿ ದುಡ್ಡು ಕೊಡುವತನಕ ಎತ್ತು ಇಡ್ಕೊಳಿ ಎಂದು ಹೇಳಿದರು. ಸಾರ್ ನನ್ನ ಬಳಿ ನೀವು ಕೇಳಿದಷ್ಟು ಕೊಡುವುದಕ್ಕೆ ಹಣ ಇಲ್ಲ. ಅಲ್ಲಿಯವರೆಗೆ ಈ ಎತ್ತನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ ಎಂದಿದ್ದಾನೆ. ಇದನ್ನು ಕೇಳಿದ ಪುರಸಭೆ ಅಧಿಕಾರಿಗಳು ಒಂದು ಕ್ಷಣ ದಂಗಾಗಿದ್ದಾರೆ. ರೈತ ಯಲ್ಲಪ್ಪನ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಯಲ್ಲಪ್ಪ ಸರಿಯಾಗಿಯೇ ಬುದ್ದಿ ಕಲಿಸಿದ್ದಾನೆಂದು ಸಾರ್ವಜನಿಕರು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ:
ದಾವಣಗೆರೆ: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದ್ದರೂ ಅದಕ್ಕೆ ಕಡಿವಾಣ ಹಾಕದೆ, ಅಸಹಾಯಕರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೆಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಜಯದೇವ ವೃತ್ತದಲ್ಲಿ ಪಕ್ಷದ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಘೋಷಣೆಗಳ ಕಾರ್ಯಕರ್ತರು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪಕ್ಷದ ಮುಖಂಡ ಕೆ.ಟಿ.ಕಲ್ಲೇಶ, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಬಹಿರಂಗವಾಗಿಯೇ ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಸಂಘ, ಸ್ವತಃ ಬಿಜೆಪಿ ಮುಖಂಡರೇ ಹೇಳಿದರೂ ಅದಕ್ಕೆ ಕಡಿವಾಣ ಹಾಕಿಲ್ಲ. 40 ಪರ್ಸೆಂಟೇಜ್ ಬಗ್ಗೆ ದೂರಿದ ಗುತ್ತಿಗೆದಾರರ ಸಂಘದ ಅಧ್ಯಕ್ಷನಿಗೆ ಜೈಲಿಗೆ ತಳ್ಳಿದರೆ, ಬಿಜೆಪಿ ಸಚಿವರ ಭ್ರಷ್ಟಾಚಾರದ ಬೇಸತ್ತ ಅದೇ ಪಕ್ಷದ ಮುಖಂಡನಾಗಿದ್ದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ. ಈಚೆಗೆ ಇದೇ ಜಿಲ್ಲೆಯ ಶಾಸಕ ಮತ್ತು ಪುತ್ರನ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದರೂ ಸಿಎಂ ಚಕಾರ ಎತ್ತುತ್ತಿಲ್ಲ ಎಂದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದ ಮುಖ್ಯಮಂತ್ರಿ ಬೊಮ್ಮಾಯಿಗೂ ಅದರಲ್ಲಿ ಪಾಲಿರುವುದಕ್ಕೆ ಸುಮ್ಮನಿದ್ದಾರೇನೋ ಎಂಬ ಅನುಮಾನ ಕಾಡುತ್ತಿದೆ. ರಾಜ್ಯದಲ್ಲಿ ಜನರು ಕೆಲಸವಿಲ್ಲದೇ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಪ್ರತಿಯೊಂದು ಕಮಿಷನ್ ಆಧಾರದಲ್ಲಿ ನಡೆಯುವ ವ್ಯವಹಾರವಾಗಿದೆ. ನಾಡಿನ ಜನರ ಸಮಸ್ಯೆ ಪರಿಹರಿಸಲು ಮುಂದಾಗದೇ, ಜನರ ಸಂಕಷ್ಟಗಳ ಹೆಚ್ಚಿಸುವ ಮೂಲಕ ಬಿಜೆಪಿ ಸರ್ಕಾರ ಚೆಲ್ಲಾಟವಾಡುತ್ತಿದೆ. ಇಂತಹ ಭ್ರಷ್ಟಸರ್ಕಾರವನ್ನು ವಜಾ ಮಾಡಬೇಕು ಎಂದು ರಾಜ್ಯಪಾಲರು, ರಾಷ್ಟ್ರಪತಿಗೆ ಒತ್ತಾಯಿಸಿದರು.
ಮಾಡಾಳು ಪುತ್ರನ ಅಮಾನತಿಗೆ ಸೂಚನೆ ನೀಡ್ತೇವೆ: ಸಚಿವ ಮಾಧುಸ್ವಾಮಿ
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರ ಬಸಂತಪ್ಪ ಮಾತನಾಡಿ ಕೆಎಸ್‌ಡಿಎಲ್‌ನಲ್ಲಿ ರಾಸಾಯನಿಕ ಪೂರೈಕೆ ಒಪ್ಪಂದದಲ್ಲಿ ಹಣ ಪಡೆಯುವ ವೇಳೆ ಹಣದ ಸಮೇತ ಸಿಕ್ಕಿ ಬಿದ್ದರೂ ಸರ್ಕಾರ ಮಾತ್ರ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಗುತ್ತಿಗೆದಾರರ ಸಂಘವು ಮುಂಚಿನಿಂದಲೂ ಭ್ರಷ್ಟಾಚಾರದ ಬಗ್ಗೆ ದೂರುತ್ತಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಬಿಜೆಪಿ ತನಗೆ ಸಿಕ್ಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಟೀಕಿಸಿದರು. ಪಕ್ಷದ ಮುಖಂಡರಾದ ಆದಿಲ್ ಖಾನ್, ಶ್ರೀಧರ ಪಾಟೀಲ್, ಕೆ.ರವೀಂದ್ರ, ಗಣೇಶ ದುರ್ಗದ, ಬಸವರಾಜ, ಆಯೇಷಾ, ಹಾಲಸ್ವಾಮಿ, ಶಬ್ಬೀರ್, ಸುರೇಶ, ಸಮೀರ್, ರೋಹಿತ್ ಇತರರಿದ್ದರು.
ಲೋಕಾಯುಕ್ತ ವಿಚಾರಣೆಗೆ ಮಾಡಾಳು ಅಸಹಕಾರ: ಸಮರ್ಪಕ ಉತ್ತರ ನೀಡದ ಶಾಸಕ
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮಿತಿ ಮೀರಿದ ಭ್ರಷ್ಟಾಚಾರವಾಗುತ್ತಿದೆ. ಲಂಚದ ಹಣ ಪಡೆಯುವಾಗ ಸಿಕ್ಕಿ ಬಿದ್ದರೂ ಶಾಸಕರು ಮತ್ತು ಪುತ್ರನ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಆರೋಪಿ ಸ್ಥಾನದಲ್ಲಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜೈಲು ಪಾಲಾಗಬೇಕು. ಇಂತಹ ಆರೋಪಿಗಳು ಜಾಮೀನಿನ ಮೇಲೆ ಹೊರಗೆ ಬಂದರೆ ಸಾಕ್ಷಿಗಳ ನಾಶಪಡಿಸಿ, ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು.
-ಚಂದ್ರಶೇಖರ ಬಸಂತಪ್ಪ, ಆಪ್ ಜಿಲ್ಲಾಧ್ಯಕ್ಷ