ಹಾಸನ (ಜು.05): ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆಯ ತರಗತಿ ಕೊಠಡಿಯೊಳಗೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲೂಕಿನ ಗಾಡೇನಹಳ್ಳಿ ಬುಧವಾರ ಸಂಜೆ ನಡೆದಿದೆ. 

ಗಾಡೇನಹಳ್ಳಿಯಲ್ಲಿರುವ ಖಾಸಗಿ ವಸತಿ ಪ್ರೌಢಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಲಕ್ಷ್ಮೀ (16) ಎಂಬಾಕೆಯೇ ಮೃತಪಟ್ಟ ವಿದ್ಯಾರ್ಥಿನಿ. 

ಮೂಲತಃ ಬೆಂಗಳೂರಿನ ಚಿಕ್ಕ ಬಾಣಾವರ ನಿವಾಸಿ ಹರೀಶ್ ಎಂಬವರ ಪುತ್ರಿಯಾಗಿರುವ ಈಕೆಯನ್ನು 20 ದಿನಗಳ ಹಿಂದೆಯಷ್ಟೇ ಪೋಷಕರು ಈ ಶಾಲೆಗೆ ದಾಖಲಿಸಿದ್ದರು. ಸಂಜೆ ತರಗತಿ ಮುಗಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಹೊರಬಂದಿದ್ದರು. ಆಗ ಲಕ್ಷ್ಮೀ ಪುಸ್ತಕವನ್ನು ತರುವುದಾಗಿ ವಾಪಸ್ ತರಗತಿಯ ಕೊಠಡಿಗೆ ತೆರಳಿದ್ದಾಳೆ. 

ಆದರೆ ಲಕ್ಷ್ಮೀ ಕೊಠಡಿಯಿಂದ ಹೊರಗೆ ಬಾರದ ಹಿನ್ನೆಲೆಯಲ್ಲಿ ಇತರೆ ವಿದ್ಯಾರ್ಥಿಗಳು ಒಳಗೆ ಹೋಗಿ ನೋಡಿದಾಗ ಲಕ್ಷ್ಮೀ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.