ಹಾಸನ [ಜ.05]:  ಬಹು ಚರ್ಚಿತ ಹಾಸನ-ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ ಸುಂಕ ಸಂಗ್ರಹ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಾಯಿತು.

ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಆಲಿಸಿದ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ರಸ್ತೆ ನಿರ್ಮಾಣದಲ್ಲಿನ ಲೋಪ, ಇತರ ಮೂಲಭೂತ ಸೌಕರ್ಯಗಳ ಕೊರತೆಯನ್ನು 15 ದಿನಗಳೊಳಗೆ ಸರಿಪಡಿಸಿ, ನಂತರವಷ್ಟೆ ಟೋಲ್‌ ಸಂಗ್ರಹಿಸುವಂತೆ ಕೆ.ಆರ್‌.ಡಿ.ಎಲ್‌ ಸಂಸ್ಥೆಗೆ ತಿಳಿಸಿದರು.

ಈ ಮಾರ್ಗದಲ್ಲಿ ಸಂಚರಿಸುವ ಕೃಷಿ ಚಟುವಟಿಕೆಗಳಿಗೆ ಬಳಸುವ ಟ್ರ್ಯಾಕ್ಟರ್‌ ಮತ್ತಿತರ ವಾಹನಗಳು ಹಾಗೂ ದ್ವಿಚಕ್ರ ಮತ್ತು ಮೂರು ಚಕ್ರದ ವಾಹನಗಳಿಗೆ ಟೋಲ್‌ ಸಂಗ್ರಹಿಸುವಂತಿಲ್ಲ. ಬಸ್‌ಗಳಿಗೆ ಟ್ರಿಪ್‌ ಲೆಕ್ಕದಲ್ಲಿ ಟೋಲ್‌ ಸಂಗ್ರಹಿಸದೆ ದಿನದ ಲೆಕ್ಕದಲ್ಲಿ ಹಣ ಪಡೆಯಬೇಕು ಹಾಗೂ ಪ್ರಯಾಣಿಕರಿಗೆ ಟಿಕೆಟ್‌ ದರ ಹೆಚ್ಚಿಸಬಾರದು ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

20 ಕಿ.ಮೀ ವ್ಯಾಪ್ತಿಯ ಗ್ರಾಮಸ್ಥರು ಮಾಸಿಕ 205 ರು. ಪಾವತಿಸಿ ಪಾಸ್‌ ಪಡೆಯಬಹುದಾಗಿದೆ. ಇದು ವಿಶ್ವ ಬ್ಯಾಂಕ್‌ ನೆರವು ಪಡೆದು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಂಡ ಯೋಜನೆಯಾಗಿದೆ. 2017ರಲ್ಲಿ ರಾಜ್ಯದ 7 ರಸ್ತೆಗಳಿಗೆ ಟೋಲ್‌ ಸಂಗ್ರಹಕ್ಕೆ ಆದೇಶ ಮಾಡಲಾಗಿದೆ. ಹಾಗಾಗಿ ಅದನ್ನು ಪಾಲಿಸಬೇಕಾಗಿದೆ, ಆದರೆ, ಅದಕ್ಕೆ ಮುನ್ನ ಎಲ್ಲಾ ಲೋಪಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ. ರಾಮಸ್ವಾಮಿ ಹಾಗೂ ಸಕಲೇಶಪುರ-ಆಲೂರು ಕ್ಷೇತ್ರದ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಮಾತನಾಡಿ, ಹಾಸನ-ಪಿರಿಯಾಪಟ್ಟಣ ಮಾರ್ಗದಲ್ಲಿ ಯಾವುದೇ ವಾಣಿಜ್ಯ ಉದ್ದೇಶದ ಬೃಹತ್‌ ಚಟುವಟಿಕೆಗಳಿಲ್ಲ, ದೊಡ್ಡ ನಗರ ಕೈಗಾರಿಕೆಗಳಿಲ್ಲ, ರೈತಾಪಿ ವರ್ಗ, ಕೂಲಿ ಕಾರ್ಮಿಕರು ಹೆಚ್ಚು ಸಂಚರಿಸುವ ರಸ್ತೆ ಇದಾಗಿದೆ. ಹಾಗಾಗಿ ಬಡವರಿಗೆ ಹೊರೆಯಾಗುವ ಸುಂಕ ವಸೂಲಾತಿ ಬೇಡ ಎಂದು ಮನವಿ ಮಾಡಿದರು.

ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಅಪೂರ್ಣವಾಗಿದೆ, ಅವೈಜ್ಞಾನಿಕವಾಗಿದೆ. ಬೀದಿ ದೀಪಗಳಿಲ್ಲ, ಬಸ್‌ ಪ್ರಯಾಣಿಕರ ತಂಗುದಾಣ, ಶೆಲ್ಟರ್‌, ಚರಂಡಿ ಕಾಮಗಾರಿಗಳನ್ನು ಸಮರ್ಪಕವಾಗ ನಿರ್ವಹಿಸಿಲ್ಲ, ಕ್ರಿಯಾ ಯೋಜನೆಯ ಅಂದಾಜು ಪಟ್ಟಿಯಂತೆ ಕೆಲಸವಾಗಲಿಲ್ಲ ಎಂದರು.

ಡಿವೈಡರ್‌, ಸರ್ಮಿಸ್‌ ರಸ್ತೆಗಳು ಇಲ್ಲ, ಜನಹಿತದೃಷ್ಟಿಯಿಂದ ಈ ಮಾರ್ಗದಲ್ಲಿ ಸುಂಕ ಸಂಗ್ರಹ ಬೇಡ ಎಂದು ಶಾಸಕರಾದ ಎ.ಟಿ. ರಾಮಸ್ವಾಮಿ ಮತ್ತು ಹೆಚ್‌.ಕೆ. ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.

ನಿವೃತ್ತ ಎಂಜಿನಿಯರ್‌ ಸೋಮಶೇಖರ್‌ ಮಾತನಾಡಿ, ಈ ರಸ್ತೆ ನಿರ್ಮಾಣದಿಂದ ಪ್ರಯಾಣಿಕರಿಗೆ ಸಮಯ ಹಾಗೂ ವೆಚ್ಚದಲ್ಲಿ ಯಾವುದೇ ಕಡಿತವಾಗಿಲ್ಲ. ತಿರುವುಗಳು ಅಪಾಯಕಾರಿಯಾಗಿಯೇ ಇವೆ. ಎಲ್ಲೆಂದರಲ್ಲಿ ರಂಬ್ಲರ್‌ಗಳನ್ನು ಹಾಕಲಾಗಿದೆ. ಸೂಪರ್‌ ಎಲಿವೇಷನ್‌ ಅಸಮರ್ಪಕವಾಗಿದೆ.

ಸಾಮಾನ್ಯ ಭತ್ತಕ್ಕೆ ಬೆಂಬಲ ಬೆಲೆ ನಿಗದಿ, ಕ್ವಿಂಟಲ್‌ಗೆ ಎಷ್ಟು..?.

ರಸ್ತೆ ವಿನ್ಯಾಸ ಮತ್ತು ಅದರ ಅನುಷ್ಠಾನ ಉತ್ತಮವಾಗಿಲ್ಲ ಅವುಗಳನ್ನು ಸರಿಪಡಿಸಬೇಕು. ತಿರುವುಗಳನ್ನು ವಿಸ್ತರಣೆ ಮಾಡಿ ಅಗತ್ಯವಿರುವ ಕಡೆ ತಡೆಗೋಡೆ ಅಥವಾ ತಡೆ ಪಟ್ಟಿಗಳನ್ನು ಅಳವಡಿಸಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಗಿರೀಶ್‌, ನಿವೃತ್ತ ಇಂಜಿನಿಯರ್‌ ಸೋಮಶೇಖರ್‌ ಅವರಿಂದ ರಸ್ತೆಯ ನೂನ್ಯತೆಗಳ ಪಟ್ಟಿಪಡೆದು ಅವುಗಳನ್ನು ಶೀಘ್ರವಾಗಿ ಸರಿಪಡಿಸುವಂತೆ ಕೆಆರ್‌ಡಿಎಲ್‌ ಅಧಿಕಾರಿಗಳಿಗೆ ಸೂಚಿಸಿ, ಬಳಿಕ ಸುಂಕ ವಸೂಲಾತಿ ಪ್ರಾರಂಭಿಸಿ ಎಂದರು.

ತಾಪಂ ಅಧ್ಯಕ್ಷ ನಿಂಗೇಗೌಡ, ಜಿಪಂ ಸದಸ್ಯರಾದ ರವಿ, ಮುಖಂಡ ಕೃಷೇಗೌಡ ಹಾಗೂ ರೈತ ಪ್ರತಿನಿಧಿಗಳು ವಿವಿಧ ಸಂಘಗಳ ಪ್ರಮುಖರು ಹಾಜರಿದ್ದು ಈ ಮಾರ್ಗದಲ್ಲಿ ಸುಂಕ ವಿನಾಯಿತಿ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಬೇಕು ಹಾಗೂ ಲೋಪಗಳನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್‌, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಂ, ಕೆಆರ್‌ಡಿಎಲ್‌.ನ ಅಧಿಕಾರಿಗಳು ಇದ್ದರು.