ಮಂಡ್ಯ(ಜ.05): ಏ- ಮ್ಯಾಪಿಂಗ್‌ ಮಾಡಿದ ವ್ಯಾಪ್ತಿಯಲ್ಲಿ ಶೇಕಡವಾರು 90ರಷ್ಟುಭತ್ತ ಖರೀದಿಸುವುದರ ಮೂಲಕ ರೈತರಿಗೆ ಅನುಕೂಲವಾಗುವಂತೆ ಅಕ್ಕಿ ಗಿರಣಿದಾರರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಮಿಲ್‌ ವ್ಯಾಪ್ತಿಯಲ್ಲಿ ಅಧಿಕಾರಿಗಳನ್ನು ನೇಮಿಸುವುದರ ಮೂಲಕ ರೈತರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್‌ ಅವರು ಮಿಲ್ ಮಾಲೀಕರಿಗೆ ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2019-20ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹಾಗೂ ಅಕ್ಕಿಗಿರಣಿ ದಾರರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭತ್ತದ ಗುಣಮಟ್ಟಕಾಪಾಡಿಕೊಳ್ಳಬೇಕು. ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಸರ್ಕಾರ ನಿರ್ಧರಿಸಿರುವ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಬೆಳೆಯನ್ನು ಖರೀದಿಸಲಾಗುತ್ತದೆ ಎಂದಿದ್ದಾರೆ.

ಬೆಸ್ಕಾಂ ಗುತ್ತಿಗೆ ಆಂಧ್ರ ವ್ಯಕ್ತಿ ಪಾಲು! ಸ್ಥಳೀಯರಿಗೆ ಅನ್ಯಾಯ

2019-20ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ಸಾಮಾನ್ಯ ಭತ್ತಕ್ಕೆ 1815 ರು, ಗ್ರೇಡ್‌ ಎ ಭತ್ತಕ್ಕೆ 1835 ರು. ಹೈಬ್ರಿಡ್‌ ಬಿಳಿ ಜೋಳಕ್ಕೆ 2,550 ರು. ಮಾಲ್ದಂಡಿ ಬಿಳಿ ಜೋಳಕ್ಕೆ 2,570 ರು. ಹಾಗೂ ರಾಗಿಗೆ 3,150 ರು.ಗಳನ್ನು ಬೆಂಬಲ ಬೆಲೆ ದರವನ್ನು ಸರ್ಕಾರ ನಿಗದಿಪಡಿಸಿದೆ. ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಖರೀದಿ ಏಜೆನ್ಸಿ ಮುಖಾಂತರ ತೆರೆಯಲಾಗುವುದು ಎಂದು ತಿಳಿಸಿದರು.

ರೈತರು ನೋಂದಣಿ ಮಾಡಿಕೊಳ್ಳಲು ಕೃಷಿ ಇಲಾಖೆಯಿಂದ ನೀಡಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಪ್ರೂಟ್ಸ್‌) ಗುರುತಿನ ಸಂಖ್ಯೆಯೊಂದಿಗೆ ನೋಂದಣಿ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಸಿಕೊಳ್ಳಬೇಕು. ರೈತರು ಗುರುತಿನ ಸಂಖ್ಯೆಯನ್ನು ಬಿಟ್ಟು ಬೇರೆ ಯಾವುದೇ ದಾಖಲೆಗಳನ್ನು ತರುವ ಅಗತ್ಯತೆ ಇರುವುದಿಲ್ಲ ಎಂದು ಹೇಳಿದರು. ನೋಂದಣಿ ಸಮಯದಲ್ಲಿ ಪ್ರೂಟ್ಸ್‌ ದತ್ತಾಂಶದಲ್ಲಿ ಪೂರ್ಣ ಮಾಹಿತಿ ಲಭ್ಯವಿಲ್ಲದಿದ್ದಾಗ ರೈತರು ತಕ್ಷಣವೇ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ, ಬೆಳೆ ಮಾಹಿತಿಯನ್ನು ಪ್ರೂಟ್ಸ್‌ ದತ್ತಾಂಶದಲ್ಲಿ ಸೇರ್ಪಡಿಸಿಕೊಂಡು ನಂತರ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್‌, ಹಾಗೂ ಅಕ್ಕಿ ಗಿರಾಣಿ ಮಾಲೀಕರು ಉಪಸ್ಥಿತರಿದ್ದರು.