ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಹಾಸನದ ದಂಪತಿ ಕೌಟುಂಬಿಕ ಕಲಹದಿಂದಾಗಿ ದುರಂತ ಅಂತ್ಯ ಕಂಡಿದ್ದಾರೆ. ಪತಿ ಮಾತ್ರೆ ಸೇವಿಸಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೆ, ಇದನ್ನು ಕಂಡು ಮನನೊಂದ ಪತ್ನಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಹಾಸನ (ಜ.29): ಕಳೆದ ಐದು ವರ್ಷಗಳ ಹಿಂದೆ ಮನೆಯವರ ವಿರೋಧದ ನಡುವೆಯೂ, ಪ್ರೀತಿಸಿ ಒಂದಾಗಿದ್ದ ಜೋಡಿಯೊಂದು ಇಂದು ವಿಧಿಯಾಟಕ್ಕೆ ಬಲಿಯಾಗಿದೆ. ಸಾಂಸಾರಿಕ ಭಿನ್ನಾಭಿಪ್ರಾಯಗಳು ತಾರಕಕ್ಕೇರಿದ ಪರಿಣಾಮ, ಪತಿ ಆಸ್ಪತ್ರೆಯ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೆ, ಇತ್ತ ಪತ್ನಿ ಮನೆಯಲ್ಲಿಯೇ ತನ್ನ ಪ್ರಾಣ ಕಳೆದುಕೊಂಡಿರುವ ಮನಕಲಕುವ ಘಟನೆ ಹಾಸನ ತಾಲೂಕಿನ ಅದ್ದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಏನಿದು ಪ್ರಕರಣ?

ಹಾಸನ ತಾಲೂಕಿನ ಅದ್ದಿಹಳ್ಳಿ ಗ್ರಾಮದ ಚೇತನ್ (28) ಮತ್ತು ರಂಜಿತಾ (25) ಪರಸ್ಪರ ಪ್ರೀತಿಸಿ, ಐದು ವರ್ಷಗಳ ಹಿಂದೆ ಗುರುಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಾಂಪತ್ಯದಲ್ಲಿ ಕ್ರಮೇಣ ಬಿರುಕು ಮೂಡಲು ಶುರುವಾಗಿತ್ತು. ಇಬ್ಬರ ನಡುವೆ ಹೊಂದಾಣಿಕೆ ಕೊರತೆ ಉಂಟಾಗಿ ಆಗಾಗ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ.

ಪತಿಯಿಂದ ಕಠಿಣ ನಿರ್ಧಾರ:

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿದ್ದ ಪತಿ ಚೇತನ್, ಕಳೆದ ಮೂರು ದಿನಗಳ ಹಿಂದೆ ಮಾತ್ರೆಗಳನ್ನು ಸೇವಿಸಿ ಪ್ರಜ್ಞೆ ತಪ್ಪಿದ್ದರು. ತಕ್ಷಣವೇ ಅವರನ್ನು ಹಾಸನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ನಿ ರಂಜಿತಾ ಮತ್ತು ಆಕೆಯ ಮನೆಯವರು ತಮಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ತಮ್ಮ ಮನೆಯವರ ಮಾತು ಕೇಳದಂತೆ ಒತ್ತಡ ಹೇರುತ್ತಿದ್ದರು, ಇದರಿಂದ ಬೇಸತ್ತು ತಾವು ಈ ನಿರ್ಧಾರಕ್ಕೆ ಬರಬೇಕಾಯಿತು ಎಂದು ಚೇತನ್ ಕಡೆಯವರು ಆರೋಪಿಸಿದ್ದಾರೆ.

ಪತಿಯ ಸ್ಥಿತಿ ನೋಡಿ ನಲುಗಿದ ಪತ್ನಿ:

ಇನ್ನು ಪತಿ ಆಸ್ಪತ್ರೆ ಸೇರಿದ ವಿಷಯ ತಿಳಿದ ರಂಜಿತಾ, ನಿನ್ನೆ ತಮ್ಮ ಮಗುವಿನೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತಿಯ ಸ್ಥಿತಿಯನ್ನು ಕಂಡು ರಂಜಿತಾ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ. ಸಂಜೆ ಮಗುವಿನೊಂದಿಗೆ ಮನೆಗೆ ಮರಳಿದ ರಂಜಿತಾ, ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ತಮ್ಮ ಜೀವನದ ಪಯಣ ಮುಗಿಸಿದ್ದಾರೆ.

ವರದಕ್ಷಿಣೆ ಆರೋಪ - ಪ್ರತಿದೂರು:

ಈ ಘಟನೆಗೆ ಸಂಬಂಧಿಸಿದಂತೆ ರಂಜಿತಾ ಪೋಷಕರು ಗಂಭೀರ ಆರೋಪ ಮಾಡಿದ್ದು, ಚೇತನ್ ಮತ್ತು ಅವರ ಕುಟುಂಬದವರು ರಂಜಿತಾಗೆ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಈ ಕಿರುಕುಳ ತಾಳಲಾರದೆ ತಮ್ಮ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ದೂರಿದ್ದಾರೆ. ಈ ಸಂಬಂಧ ಮೃತ ರಂಜಿತಾ ಪೋಷಕರು ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಒಟ್ಟಾರೆಯಾಗಿ, ಕ್ಷಣಿಕ ಕೋಪ ಹಾಗೂ ಕೌಟುಂಬಿಕ ಕಲಹವು ಒಂದು ಸುಂದರ ಸಂಸಾರವನ್ನು ನುಚ್ಚುನೂರು ಮಾಡಿದ್ದು, ಪುಟ್ಟ ಮಗು ತಾಯಿಯನ್ನು ಕಳೆದುಕೊಂಡು, ತಂದೆ ಆಸ್ಪತ್ರೆಯಲ್ಲಿರುವಂತಾಗಿ ಅನಾಥಪ್ರಜ್ಞೆ ಕಾಡುವಂತಾಗಿದೆ. ಶಾಂತಿಗ್ರಾಮ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.