ಹಾಸನ (ಫೆ.15):  ಅಧಿಕಾರ ದುರುಪಯೋಗಪಡಿಸಿಕೊಂಡು ಸುಳ್ಳು ದೂರು ದಾಖಲಿಸಿದ ಬಗ್ಗೆ ಮತ್ತು ಕಿರುಕುಳ ನೀಡುತ್ತಿರುವ ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್‌ ಠಾಣೆ ಪಿಎಸ್‌ಐ ಅವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿ​ಕಾರಿ ಕಚೇರಿ ಮುಂದೆ ಗ್ರಾಮದ ಜನರು ಧರಣಿ ನಡೆಸಿದರು.

ಅರೆಹಳ್ಳಿ ಹೋಬಳಿಯ ಭಾಗದಲ್ಲಿ ಗ್ರಾಮಪಂಚಾಯಿತಿ ಚುನಾವಣೆ ನಡೆದ ವೇಳೆ ಅರೆಹಳ್ಳಿ ಪೊಲೀಸ್‌ ಠಾಣೆ ಪಿಎಸ್‌ಐ ಬಿಜೆಪಿ ಬೆಂಬಲಿಗರಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ಕೊಟ್ಟಿದ್ದಾರೆ. ಮೋದಿ ಸೇವಾ ಸಪ್ತಾಹ ಕಾರ್ಯಕ್ರಮಕ್ಕೆ ಸೇರಿದಾಗ ನಮ್ಮ ಪಕ್ಷದ ಕಾರ್ಯಕರ್ತರು ಅರೇಹಳ್ಳಿ ಪೊಲೀಸ್‌ ಠಾಣೆಯ ಎಸ್‌.ಐ ಮಹೇಶ್‌ ನಮಗೆ ಬೆದರಿಕೆ ಹಾಕುತ್ತಿದ್ದು, ಟಿಪ್ಪು ಜಯಂತಿ ವಿಷಯವನ್ನು ಉಲ್ಲೇಖಿಸಿ ರಾಮ ಹನುಮ ನಮ್ಮ ಮುಂದೆ ನಡೆಯುವುದಿಲ್ಲ. ನಿಮ್ಮ ಪಕ್ಷದವರದ್ದು ಏನು ನಡೆಯುವುದಿಲ್ಲ. ರಾಜಕೀಯ ಮಾಡಿದ್ರೆ ಸುಳ್ಳು ಕೇಸು ದಾಖಲಿಸಿ ಎಲ್ಲರನ್ನೂ ಒಳಗೆ ಹಾಕುತ್ತೇನೆ ಎಂದಿದ್ದಾರೆ. ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಎಸ್‌ ಐ ಮತ್ತು ಇತರ ಕೆಲವು ಪೋಲಿಸ್‌ ಅಧಿಕಾರಿಗಳು ಬೇರೆ ಪಕ್ಷದವರ ಪರವಾಗಿ ಕೆಲಸ ಮಾಡಿದ್ದಾಗಿ ದೂರಿದರು.

ಯಾವುದೇ ಕಾನೂನು ಬಾಹಿರ ಕೆಲಸಗಳನ್ನು ನಿಯಂತ್ರಿಸದೆ, ಭಾರತೀಯ ಜನತಾ ಪಕ್ಷ ಮತ್ತು ಸಂಘ ಪರಿವಾರದವನ್ನು ಹೆದರಿಸಲು ನೋಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷ ಸಂಘಟನೆ ಸಾಧ್ಯವಿಲ್ಲ ಎಂದಾಗ ಸಮಸ್ಯೆ ಏನೆಂದು ತಿಳಿಯಲು ಪೋಲಿಸ್‌ ಠಾಣೆಗೆ ಹೋದಾಗ ಪರಿಸ್ಥಿತಿ ಬಿಡಿಸಿ ಹೇಳುವ ಬದಲು ಅಲ್ಲಿದ್ದ ಪೊಲೀಸರಾದ ವೀಣಾ, ನಂದೀಶ್‌ ಮತ್ತು ಇತರರು ನಮ್ಮ ಮೇಲೆ ಕೂಗಾಡಿ ನೀವು ನಮ್ಮನ್ನು ಮತ್ತು ಸಾಹೇಬರನ್ನು ಏನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

'ವಿಜಯೇಂದ್ರ ಕರ್ನಾಟಕದ ಮುಂದಿನ ರಾಜಾಹುಲಿ'

ಇದರ ನಡುವೆ ಕೇವಲ 10 ನಿಮಿಷದ ಆಂತರದಲ್ಲಿ ನಮ್ಮ ಮೇಲೆ ಮತ್ತು ನಮ್ಮ ಕಾರ್ಯಕರ್ತರ ಮೇಲೆ ಬೇರೊಂದು ಪ್ರಕರಣವನ್ನು ಉಲ್ಲೇಖಿಸಿ, ನಿಜ ವಿಷಯ ಮುಚ್ಚಿಟ್ಟು ದೂರು ದಾಖಲಿಸಿರುತ್ತಾರೆ. ಬಿಜೆಪಿ ಪಕ್ಷದ ಬೇಲೂರು ಮಂಡಲದ ಯುವ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜಿನ ಅವರ ಮನೆಗೆ ನುಗ್ಗಿ ಕುಟುಂಬಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಠಾಣೆಗೆ ಕರೆದೊಯ್ದು ಥಳಿಸಿ ನಂತರ ಮನೆಗೆ ಕಳುಹಿಸಿದ್ದಾರೆ. ನಂತರ ಬೇಲೂರು ಮಂಡಲ ಯುವಮೋರ್ಚಾ ಉಪಾಧ್ಯಕ್ಷರಾದ ಜಗದೀಶ ಎಂಬುವವರ ಮನೆಗೆ ನುಗ್ಗಿ ಅಲ್ಲೂ ಕೂಡ ದುರ್ವರ್ತನೆ ತೋರಿದ್ದಾರೆ ಎಂದರು.

ಅಮಿತ್‌ ಶೆಟ್ಟಿಯವರು ಜವಾಬ್ದಾರಿಯುತ ಮಾಜಿ ಜನಪ್ರತಿನಿದಿಯಾಗಿದ್ದು, ಎಲ್ಲೂ ತಪ್ಪಿಸಿಕೊಂಡು ಹೋಗುವುದಿಲ್ಲ. ಮನೆಯಲ್ಲಿದ್ದ ತಂದೆ ತಾಯಿಗಳು ವಯೋವೃದ್ದರಾಗಿದ್ದು, ಅವರಿಗೆ ವ್ಯವಸ್ಥೆ ಮಾಡಿ ಈಗಲೇ ಬರುತ್ತೇನೆ ಎಂದರೂ ಕೇಳದೇ ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಹೇಳಿದರು.

ಪೋಲಿಸರು ಬೇರೆ ಪಕ್ಷಗಳೊಂದಿಗೆ ಗುರುತಿಸಿಕೊಂಡು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ತೇಜೋವಧೆಗೆ ನಿಂತಿದ್ದು ಸ್ಪಷ್ಟವಾಗಿ ಈ ಮೇಲಿನ ಘಟನೆಗಳಿಂದ ಗೊತ್ತಾಗುತ್ತದೆ. ಕಾಣದ ಕೈಗಳು ಗ್ರಾಮ ಪಂಚಾಯತಿ ಚುನಾವಣೆ ಗಮನದಲ್ಲಿಟ್ಟುಕೊಂಡು ಸುಳ್ಳು ಕೇಸುಗಳನ್ನು ದಾಖಲಿಸಿ ಕಾರ್ಯಕರ್ತರ ಮನೋಸ್ಥೆರ್ಯ ಕುಗ್ಗಿಸುವ ಕೆಲಸ ನಡೆಸಿರುವುದು ಸಷ್ಟವಾಗಿ ಗೋಚರಿಸುತ್ತದೆ ಎಂದರು.

ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ದೂರು ದಾಖಲಿಸಿ ಜಾಮೀನು ಪಡೆದುಕೊಂಡ ಮೇಲೆ ಪೋಲಿಸ್‌ ಠಾಣೆಗೆ ಹೋದಾಗ ಆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಉದಾಹರಣೆಗಳಿವೆ. ಒಂದು ಪಕ್ಷದ ಪರವಾಗಿ ಪೋಲಿಸರು ಕೆಲಸ ಮಾಡುತ್ತಿದ್ದು ಪ್ರತಿರೋಧ ತೋರಿದವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಲಾಗುತ್ತಿದೆ.

 ಕೆಲವು ಸಂದರ್ಭದಲ್ಲಿ ಸುಳ್ಳು ಕೇಸುಗಳನ್ನು ದಾಖಲಿಸಿರುತ್ತಾರೆ . ಹೀಗೆ ನಮಗೆ ದಾಖಲಾತಿಗಳನ್ನು ಸರ್ಮಪಕವಾಗಿ ನೀಡದೇ ಮತ್ತು ನಿರಂತರ ಸುಳ್ಳು ದೂರುಗಳನ್ನು ದಾಖಲಿಸುತ್ತಾ ಎಸ್‌ ಐ ಮಹೇಶ್‌ ಮತ್ತು ಅವರ ಆಪ್ತನಾದಂತಹ ಶಿವಶಂಕರ್‌ ಇವರು ನಮ್ಮ ಕಾರ್ಯಕರ್ತರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಒಂದು ಪಕ್ಷದ ಓಲೈಸುವಿಕೆಯಿಂದ ಯಾವುದೇ ರೀತಿಯಿಂದ ಶಾಂತಿ ಕದಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಅಲ್ಲದೇ ನಮ್ಮ ಪಕ್ಷದ ಕಾರ್ಯಕರ್ತರ ಮತ್ತು ಗ್ರಾಮಸ್ಥರ ಮನೋಬಲ ಕುಗ್ಗುತ್ತಿದೆ. ಆದ್ದರಿಂದ ಸದರಿ ಘಟನೆಗಳನ್ನು ಈ ಮುಂದೆ ನಡೆಯದಂತೆ ಕ್ರಮ ಜರುಗಿಸಬೇಕೆಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ನಂದಿನಿ ಅವರಿಗೆ ಮನವಿ ಮಾಡಿದರು.

ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್‌, ಮಾಜಿ ಶಾಸಕ ಹೆಚ್‌.ಎಂ. ವಿಶ್ವನಾಥ್‌, ಅಡಗೂರು ಆನಂದ್‌, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್‌ ಕೆಸಗೋಡು, ಸುರಭೀ, ದಿಲೀಪ್‌ ಕುಮಾರ್‌, ನಂದನ್‌ ಕುಮಾರ್‌, ಚಂದ್ರಕಲಾ, ಕಟ್ಟಾಯ ಶಿವಕುಮಾರ್‌, ಕೊರಟಗೆರೆ ಪ್ರಕಾಶ್‌ ಇತರರು ಎಸ್ಪಿ ಕಚೇರಿ ಮುಂದೆ ಇದ್ದರು.