Hasanamba Temple: 10 ದಿನಗಳ ಬಳಿಕ ಮುಚ್ಚಿದ ಬಾಗಿಲು, ಮುಂದಿನ ವರ್ಷವೇ ಹಾಸನಾಂಬೆ ದರ್ಶನ
* ಹಾಸನಾಂಬೆ ದೇವಿಯ ದರ್ಶನ ತೆರೆ
* 10 ದಿನಗಳ ಬಳಿಕ ಮುಚ್ಚಿದ ಹಾಸನಾಂಬೆ ಗರ್ಭ ಗುಡಿ ಬಾಗಿಲು
* ಮತ್ತೆ ಮುಂದಿನ ವರ್ಷವೇ ಹಾಸನಾಂಬೆ ದರ್ಶನ
ಹಾಸನ, (ನ.06): ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಸನಾಂಬೆ (Hasanambe Temple) ದೇವಿಯ ದರ್ಶನಕ್ಕೆ ಇಂದು (ನವೆಂಬರ್ 6) ತೆರೆಬಿದ್ದಿದೆ.
ಕಳೆದ 10 ದಿನಗಳಿಂದ ಲಕ್ಷಾಂತರ ಭಕ್ತರಿಂದ ಹಾಸನಾಂಬೆ ದರ್ಶನ ಪಡೆಯಲಾಗಿದ್ದು, 10ನೇ ದಿನವಾದ ಶನಿವಾರ ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ.
ಹಾಸನ (Hassan) ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಹಾಸನದ ಜಿಲ್ಲಾಧಿಕಾರಿ, ಎಸ್ಪಿ, ಆಡಳಿತಾಧಿಕಾರಿ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಗಂಟೆ 4 ನಿಮಿಷಕ್ಕೆ ಹಾಸನಾಂಬೆ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಮುಂದಿನ 1 ವರ್ಷದವರೆಗೆ ಹಾಸನಾಂಬೆ ದೇಗುಲದ ಬಾಗಿಲು ಮುಚ್ಚಿರಲಿದೆ.
ಹಾಸನಾಂಬೆ ದರ್ಶನ ಪಡೆದ ಡಿಜಿ, ಐಜಿಪಿ ಪ್ರವೀಣ್ ಸೂದ್
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಜಿಲ್ಲಾಧಿಕಾರಿ ಆರ್. ಗಿರೀಶ್, ಎಸ್ಪಿ ಆರ್. ಶ್ರೀನಿವಾಸಗೌಡ ಮತ್ತು ಗಣ್ಯರ ಸಮ್ಮುಖದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು ದೇಗುಲದ ಬಾಗಿಲು ಮುಚ್ಚಿದರು. ಪ್ರಸಕ್ತ ವರ್ಷ ಅಕ್ಟೋಬರ್ 28 ರಂದು ದೇವಾಲಯ ತೆರೆಯಲಾಗಿತ್ತು. ಈವರೆಗೆ ಲಕ್ಷಾಂತರ ಭಕ್ತರಿಂದ ದೇವಿ ದರ್ಶನ ಮಾಡಿದ್ದಾರೆ.
ರಾಜಕೀಯ ನಾಯಕರು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಲವು ಪ್ರಮುಖರು ಹಾಸನಾಂಬೆ ದರ್ಶನ ಪಡೆದಿದ್ದಾರೆ.
ಮುಂದಿನ ವರ್ಷದ ವರೆಗೂ ಹಾಸನಾಂಬೆ ದರ್ಶನ ಪಡೆಯಲು ಅವಕಾಶ ಇರುವುದಿಲ್ಲ. ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಕೆ ಮಾಡಿದ ಬಳಿಕ ಸಿಬ್ಬಂದಿ ದೇಗುಲದ ಬಾಗಿಲು ಮುಚ್ಚಿದ್ದಾರೆ.
ಇನ್ನು ದರ್ಶನ ಪಡೆದ ಬಳಿಕ ಪ್ರವೀಣ್ ಸೂದ್ ಮಾತನಾಡಿದ್ದು, ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಬೇಕು ಅನ್ನುವುದು ಬಹಳ ದಿನದಿಂದ ಮನಸ್ಸಿನಲ್ಲಿ ಇತ್ತು. ಇಂದು ಪತ್ನಿ ಜೊತೆಗೆ ಬಂದು ಮುಖ್ಯವಾದ ದಿನ ದರ್ಶನ ಮಾಡಿದ್ದು ಖುಷಿಯಾಗಿದೆ. ಹಾಸನಾಂಬೆ ಎಲ್ಲರಿಗೂ ಶುಭ ತರಲಿ ಎಂದು ಹಾರೈಸುತ್ತೇನೆ ಎಂದರು.
ಕಳೆದ ಹತ್ತು ದಿನಗಳಿಂದ ಹಾಸನಾಂಬೆ ಉತ್ಸವ ಚೆನ್ನಾಗಿ ಆಗಿದೆ. ಲಕ್ಷಾಂತರ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ಎಲ್ಲರಿಗೂ ಒಳಿತಾಗಲಿ ಎಂದು ಹೇಳಿದರು.
ಕಾನೂನುಬಾಹಿರ ಚಟುವಟಿಕೆ ಕಂಡುಬಂದರೆ ಮಾಹಿತಿ ನೀಡಿ. ಪೊಲೀಸರು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಜನರು ಕಾನೂನು ಕೈಗೆತ್ತಿಕೊಳ್ಳಬಾರದು, ಅದು ತಪ್ಪಾಗುತ್ತದೆ ಎಂದು ತಿಳಿಸಿದರು.
ಬೆಳಗುತ್ತಲ್ಲೇ ಇರುತ್ತದೆ ದೀಪ
ವರ್ಷಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿ ಸಾಕಷ್ಟು ಪವಾಡಗಳನ್ನು ಸೃಷ್ಟಿಸಿದ್ದಾಳೆ. ಭಕ್ತರ ಬೇಡಿಕೆ ಈಡೇರಿಸುವ ತಾಯಿ, ತನ್ನ ದೇವಾಲಯದಲ್ಲೂ ಪವಾಡ ಸೃಷ್ಟಿಸಿ ಭಕ್ತರನ್ನು ಉಬ್ಬೆರುವಂತೆ ಮಾಡಿದ್ದಾಳೆ. ಬಾಗಿಲು ಹಾಕಿದ ದಿನ ಹಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆರೆಯುವರೆಗೂ ಕೂಡ ದೀಪ ಬೆಳಗುತ್ತಲ್ಲೇ ಇರುತ್ತದೆ. ಇದು ಅಚ್ಚರಿ ಆದರೂ ಸತ್ಯ. ಇನ್ನು ದೇವಸ್ಥಾನದಲ್ಲಿ ಈ ವರ್ಷ ಇಟ್ಟಿದ್ದ ನೈವೆಧ್ಯ ಬಾಗಿಲು ತೆರೆದಾಗ ಹಾಗೇ ಇರುತ್ತದೆ.
ಇನ್ನು ಇಷ್ಟಾರ್ಥ ಈಡೇರಿಕೆಗಾಗಿ ದೇವಿ ಮೊರೆ ಹೋಗುವ ಭಕ್ತರು ಇಲ್ಲಿ ಬಂದು ಹರಕೆ ಮಾಡಿಕೊಂಡು ಹೋದರೆ ಮುಂದಿನ ಬಾರಿ ದರ್ಶನದ ವೇಳೆಗೆ ಖಂಡಿತಾ ಕೆಲಸ ನೆರವೇರುತ್ತದೆ ಎಂಬ ನಂಬಿಕೆಯಿಂದಲೇ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕಾಗಿ ಪ್ರತಿ ವರ್ಷವೂ ನಾನಾ ಭಾಗಗಳಿಂದ ಆಗಮಿಸುತ್ತಾರೆ.
ಕಳೆದ ಬಾರಿ ಕೋವಿಡ್ ಹಿನ್ನಲೆ ದೇವಿ ದರ್ಶನ ಸಾಧ್ಯವಾಗಿರಲಿಲ್ಲ ಈ ಬಾರಿ ದರ್ಶನಕ್ಕೆ ಅವಕಾಶ ಕೊಟ್ಟಿರುವುದು ನಮಗೆ ತುಂಬಾ ಸಂತೋಷವಾಗಿದೆ. ನಾಡಿನೆಲ್ಲೆಡೆಯಿಂದ ಬರುವ ಭಕ್ತರ ಸಂಕಷ್ಟ ಪರಿಹಾರವಾಗಿ ಕೋವಿಡ್ ಸಮಸ್ಯೆ ದೂರವಾಗಲಿ ಎಂದು ಭಕ್ತರೊಬ್ಬರು ಹಾರೈಸಿದ್ದಾರೆ.