ಕೊನೆಗೂ ಸೌದಿ ಜೈಲಿನಿಂದ ಹರೀಶ್ ಬಂಗೇರ ತಾಯ್ನಾಡಿಗೆ
- ಕಿಡಿಗೇಡಿಗಳು ಮಾಡಿದ ತಪ್ಪಿಗೆ ಸೌದಿ ಅರೇಬಿಯಾದ ಜೈಲಿನಲ್ಲಿರುವ ಕುಂದಾಪುರದ ಬಿಜಾಡಿಯ ಹರೀಶ್ ಬಂಗೇರ
- ಕೊನೆಗೂ ಬಿಡುಗಡೆಯಾಗುತಿದ್ದು, ಆ.18ರಂದು ತಾಯ್ನಾಡಿಗೆ ಹಿಂತಿರುಗಲಿದ್ದಾರೆ.
ಉಡುಪಿ (ಆ.15): ಯಾರೋ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಸೌದಿ ಅರೇಬಿಯಾದ ಜೈಲಿನಲ್ಲಿರುವ ಕುಂದಾಪುರದ ಬಿಜಾಡಿಯ ಹರೀಶ್ ಬಂಗೇರ ಕೊನೆಗೂ ಬಿಡುಗಡೆಯಾಗುತ್ತಿದ್ದು, ಆ.18ರಂದು ತಾಯ್ನಾಡಿಗೆ ಹಿಂತಿರುಗಲಿದ್ದಾರೆ.
ಸೌದಿಯ ದೊರೆ ಮತ್ತು ಇಸ್ಲಾಂ ಧರ್ಮದ ಶ್ರದ್ಧಾಕೇಂದ್ರ ಮೆಕ್ಕಾದ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ವ್ ಹಾಕಿದ್ದ ಆರೋಪದ ಮೇಲೆ ಹರೀಶ್ ಬಂಗೇರರನ್ನು 2019ರ ಡಿಸೆಂಬರ್‌ನಲ್ಲಿ ಸೌದಿ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಹರೀಶ್ ಅವರ ಪತ್ನಿ ಸುಮನಾ ಉಡುಪಿ ಪೊಲೀಸರಿಗೆ ದೂರು ನೀಡಿದ್ದರು. ಉಡುಪಿ ಪೊಲೀಸರು ಮೂಡುಬಿದಿರೆಯ ಅಬ್ದುಲ್ ಹುಯೇಸ್ ಮತ್ತು ಅಬ್ದುಲ್ ತುವೇಸ್ ಎಂಬವರನ್ನು ಬಂಧಿಸಿದ್ದು, ಅವರು ಹರೀಶ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು, ಅದರಲ್ಲಿ ಸೌದಿ ದೊರೆ ಮತ್ತು ಮೆಕ್ಕಾದ ವಿರುದ್ಧ ಪೋಸ್ವ್ ಹಾಕಿ, ಅದರ ಸ್ಕ್ರೀನ್ ಶಾಟ್ ತೆಗೆದು ಅದನ್ನು ವೈರಲ್ ಮಾಡಿದ್ದರು ಮತ್ತು ನಂತರ ಈ ನಕಲಿ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದರು.
ಸೌದಿ ಅರೆಬಿಯಾ ಮಹತ್ವದ ನಿರ್ಧಾರ; ಶಾಲಾ ಪಠ್ಯದಲ್ಲಿ ರಾಮಾಯಣ -ಮಹಾಭಾರತ ಸೇರ್ಪಡೆ!
ಈ ವಾಸ್ತವದ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಸೌದಿಯಲ್ಲಿರುವ ಭಾರತೀಯ ದೂತವಾಸದ ಮೂಲಕ ಸುದೀರ್ಘ ಪ್ರಯತ್ನದ ನಂತರ ಸೌದಿ ಪೊಲೀಸರಿಗೆ ಮನವರಿಕೆ ಮಾಡಿದ್ದಾರೆ. ಹರೀಶ್ ಅವರ ಬಿಡುಗಡೆಗೆ ಅಗತ್ಯ ಕಾನೂನಾತ್ಮಕ ಪ್ರಕ್ರಿಯೆಗಳು ಮುಗಿದಿದ್ದು, ಆ.17ರಂದು ಅವರು ಬಿಡುಗಡೆಯಾಗಲಿದ್ದಾರೆ. 18ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಸೌದಿಯ ಭಾರತೀಯ ದೂತವಾಸದಿಂದ ಮಾಹಿತಿ ಬಂದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಅನಾವಶ್ಯಕ ಫೇಸ್‌ಬುಕ್ ಪೋಸ್ವ್: ಸೌದಿಯಲ್ಲಿ ಎಸಿ ಮೆಕ್ಯಾನಿಕ್ ಆಗಿರುವ ಹರೀಶ್ ಅವರು ಮಂಗಳೂರಿನ ಗೋಲಿಬಾರ್ ಘಟನೆಯ ಬಗ್ಗೆ ತಮ್ಮ ಫೇಸ್‌ಬುಕ್ ನಲ್ಲಿ ಪೋಸ್ವ್ ಹಾಕಿದ್ದರು. ಇದರ ವಿರುದ್ಧ ಅಲ್ಲಿನ ಕೆಲವು ಯುವಕರು ಹರೀಶ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಹರೀಶ್ ಅವರು ಫೇಸ್‌ಬುಕ್ ನಲ್ಲಿಯೇ ಕ್ಷಮೆ ಕೇಳಿದ್ದರು ಮತ್ತು ನಂತರ ಫೇಸ್‌ಬುಕ್ ಖಾತೆಯನ್ನೇ ಡಿಲಿಟ್ ಮಾಡಿದ್ದರು. ಇದೇ ಘಟನೆ ಅವರ ವಿರುದ್ಧ ನಕಲಿ ಖಾತೆ ತೆರೆದು, ಅವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆದು, ಅವರು ಬಂಧನಕ್ಕೊಳಗಾಗುವಂತಾಗಿತ್ತು.