ಹರಿಹರ(ಜು.02): ಗಾಂಧಿನಗರದ 34 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟಿವ್‌ ಪತ್ತೆಯಾಗಿದ್ದು, ಇವರ ಮನೆಯ 100 ಮೀಟರ್‌ ಸುತ್ತಳತೆ ಪ್ರದೇಶವನ್ನು ಕಂಟೈನ್ಮೆಂಟ್‌ ಝೋನ್‌ ಮಾಡಲಾಗಿದೆ.

ಈ ವ್ಯಕ್ತಿಯು ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಯ ವಾಹನ ಚಾಲಕನಾಗಿದ್ದು, ಇವರು ಜೂ 26 ರಂದು ಉಸಿರಾಟದ ಸಮಸ್ಯೆಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಯ ವೈದ್ಯರು ತಕ್ಷಣ ಗಂಟಲು ದ್ರವ ಪರೀಕ್ಷಗೆ ಸೂಚಿಸಿದರು.

ಕೋವಿಡ್‌-19 ಜಿಲ್ಲಾಸ್ಪತ್ರೆಯಲ್ಲಿ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿಯು ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಹರಿಹರದ ಮನೆಗೆ ಮರಳಿದ್ದರು. ಈ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಪುನಃ ಬಾಪೂಜಿ ಆಸ್ಪತ್ರೆಗೆ ಜೂ.28ರಂದು ದಾಖಾಲಗಿದ್ದರು. ವೈದ್ಯರು ಚಿಕೆತ್ಸೆ ನೀಡಿ ಜೂ.29ರಂದು ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಈ ವರದಿಯೂ ಪಾಸಿಟಿವ್‌ ಎಂದು ದೃಢಪಟ್ಟಿದೆ.

ದಾವಣಗೆರೆಯಲ್ಲಿ ಮತ್ತೆ 16 ಕೊರೋನಾ ಪಾಸಿಟಿವ್ ಕೇಸ್ ಪತ್ತೆ..!

ತಕ್ಷಣ ಅಧಿಕಾರಿಗಳ ತಂಡವು ಗಾಂಧಿ ನಗರದ ಅವರ ನಿವಾಸಕ್ಕೆ ತೆರಳಿ ಪ್ರಥಮ ಸಂಪರ್ಕಿತ 8 ಸದಸ್ಯರನ್ನು ಕ್ವಾರೆಂಟೈನ್‌ ಕೇಂದ್ರಕ್ಕೆ ಕಳುಹಿಸಲಾಯಿತು. ಆರೋಗ್ಯ ಇಲಾಖೆಯು ಸೋಂಕಿತ ಮನೆಯ 100 ಮೀಟರ್‌ ಸುತ್ತಳತೆಯ 47 ಮನೆಯ 215 ನಿವಾಸಿಗಳ ಪ್ರದೇಶವನ್ನು ಕಂಟೈನ್ಮೆಂಟ್‌ ಝೋನ್‌ ಮಾಡಲಾಗಿದೆ. ಕ್ರಮೇಣ ಹರಿಹರ ತಾಲೂಕು ಆವರಿಸುತ್ತಿರುವ ಕೊರೋನಾ ವೈರಸ್‌ ಇವರೆಗೂ ಒಟ್ಟು 8 ಕಂಟೈನ್ಮೆಂಟ್‌ ಝೋನ್‌ಗಳಲ್ಲಿ 22 ಪಾಸಿಟಿವ್‌ ಪ್ರಕರಣ ದೃಢಪಟ್ಟಿವೆ.

ಹರಿಹರ ವಿದ್ಯಾರ್ಥಿನಿಗೆ ಸೋಂಕು ದೃಢ:

ಈಗಾಗಲೇ ಎಸ್‌ಎಸ್‌ಎಲ್‌ಸಿಯಲ್ಲಿ 3 ಪರೀಕ್ಷೆಗಳನ್ನು ಬರೆದಿದ್ದ ಹರಿಹರ ನಗರದ ಕಂಟೈನ್ಮೆಂಟ್‌ ನಿವಾಸಿಯಾದ ವಿದ್ಯಾರ್ಥಿನಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಆಕೆ ಜೊತೆಗೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ ಇದೀಗ ಆತಂಕ ಶುರುವಾಗಿದೆ.

ಹರಿಹರ ನಗರದ ಅಗಸರ ಬೀದಿ ನಿವಾಸಿಯಾದ ವಿದ್ಯಾರ್ಥಿನಿಗೆ ಸೋಂಕಿರುವುದು ದೃಢಪಟ್ಟಿದ್ದು, ಮಂಗಳವಾರ ರಾತ್ರಿಯಿಂದಲೇ ಜಿಲ್ಲಾ ನಿಗದಿತ ಕೋವಿಡ್‌-19 ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಂಟೈನ್ಮೆಂಟ್‌ ನಿವಾಸಿಯಾದ ವಿದ್ಯಾರ್ಥಿನಿಗೆ ಸೋಂಕು ದೃಢಪಟ್ಟಿದ್ದರಿಂದ ಸಹಪಾಠಿಗಳು, ಪರೀಕ್ಷೆ ಜೊತೆಗೆ ಬರೆದ ವಿದ್ಯಾರ್ಥಿಗಳಲ್ಲೂ ಈಗ ಭಯ ಆವರಿಸಿದೆ.

ಕಂಟೈನ್ಮೆಂಟ್‌ ವಾಸಿಗಳಾದ ಪರೀಕ್ಷಾರ್ಥಿ ಮಕ್ಕಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಸಲಾಗಿದೆ. ಹರಿಹರದ ಅಗಸರ ಬೀದಿಯ ವಿದ್ಯಾರ್ಥಿನಿಗೆ ಸೋಂಕು ದೃಢಪಟ್ಟಿದ್ದರಿಂದ ಬುಧವಾರ ಸಮಾಜ ವಿಜ್ಞಾನ ಪರೀಕ್ಷೆಗೆ ಅವಕಾಶ ನೀಡಿಲ್ಲ. ಸೋಂಕಿತ ವಿದ್ಯಾರ್ಥಿನಿಗೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.