ಕಾರವಾರ: ದೇಶ ರಕ್ಷಣೆ ಹೆಸರಲ್ಲಿ ಮೀನುಗಾರರಿಗೆ ಕಿರುಕುಳ
ಮೀನುಗಾರಿಕೆಗೆಂದು ಆಳಸಮುದ್ರದವರೆಗೂ ಮೀನುಗಾರರು ತೆರಳುತ್ತಾರೆ. ಹವಾಮಾನ ವೈಪರೀತ್ಯ ಸಂದರ್ಭಗಳಲ್ಲಿ ಸುರಕ್ಷಿತ ಪ್ರದೇಶಗಳಲ್ಲಿ ರಕ್ಷಣೆ ಪಡೆದುಕೊಳ್ಳುತ್ತಾರೆ. ಆದರೆ ನೌಕಾನೆಲೆ ಅಧಿಕಾರಿಗಳು ಬಾಯಲ್ಲಿ ಮಾತನಾಡುತ್ತಿಲ್ಲ. ಗನ್‌ಗಳಲ್ಲಿ ಮಾತನಾಡುತ್ತಿದ್ದಾರೆ: ಭಾಸ್ಕರ ಪಟಗಾರ
ಕಾರವಾರ(ಫೆ.04): ನೌಕಾನೆಲೆ ಬರುವುದಕ್ಕೆ ಮುನ್ನ ಮೀನುಗಾರರು ಕಡಲತೀರದ ರಕ್ಷಣೆ ಮಾಡುತ್ತಿದ್ದರು. ಆದರೆ ಇದೇ ಮೀನುಗಾರರಿಗೆ ದೇಶದ ರಕ್ಷಣೆ ಹೆಸರಲ್ಲಿ ನೌಕಾನೆಲೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆರೋಪಿಸಿದ್ದಾರೆ. ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೀನುಗಾರಿಕೆಗೆಂದು ಆಳಸಮುದ್ರದವರೆಗೂ ಮೀನುಗಾರರು ತೆರಳುತ್ತಾರೆ. ಹವಾಮಾನ ವೈಪರೀತ್ಯ ಸಂದರ್ಭಗಳಲ್ಲಿ ಸುರಕ್ಷಿತ ಪ್ರದೇಶಗಳಲ್ಲಿ ರಕ್ಷಣೆ ಪಡೆದುಕೊಳ್ಳುತ್ತಾರೆ. ಆದರೆ ನೌಕಾನೆಲೆ ಅಧಿಕಾರಿಗಳು ಬಾಯಲ್ಲಿ ಮಾತನಾಡುತ್ತಿಲ್ಲ. ಗನ್‌ಗಳಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದ ಭದ್ರತೆ ಹೆಸರಿನಲ್ಲಿ ನಿರ್ಮಾಣ ಮಾಡಲಾಗಿರುವ ನೌಕಾನೆಲೆ ಸ್ಥಳೀಯ ಮೀನುಗಾರರಿಗೆ ರಕ್ಷಣೆ ನೀಡುತ್ತಿಲ್ಲ. ನೌಕಾನೆಲೆಯಲ್ಲಿ ಸ್ಥಳೀಯವಾಗಿ ಸಂಪರ್ಕಿಸಲು ಕನ್ನಡ ಭಾಷೆ ಬಲ್ಲ ಅಧಿಕಾರಿಗಳಿಲ್ಲ. ಸಮಸ್ಯೆ ಎದುರಾದಾಗ, ನೇಮಕಾತಿ, ಇತರೆ ಮಾಹಿತಿ ಪಡೆಯಲು ಕನ್ನಡದ ಅಧಿಕಾರಿಗಳು ನೌಕಾನೆಲೆಯಲ್ಲಿ ನೇಮಕವಾಗಬೇಕು. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು ಎಂದರು.
UTTARAKANNADA: ಮೂಲಭೂತ ಸೌಕರ್ಯಕ್ಕಾಗಿ ಜೊಯಿಡಾ ತಾಲೂಕಿನಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ!
ಹಿಂದಿ, ಇಂಗ್ಲಿಷ್ ಅಧಿಕಾರಿಗಳನ್ನು ಮಾತನಾಡಿಸಲು ಯಾರೂ ಮಧ್ಯಸ್ಥಿಕೆ ವಹಿಸುತ್ತಿಲ್ಲ. ಕೇಂದ್ರ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಮೀನುಗಾರರು ನೌಕಾನೆಲೆ ನಡುವಿನ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಮೀನುಗಾರರು ನೌಕಾನೆಲೆಗೆ ಭೂಮಿ ತ್ಯಾಗ ಮಾಡಿ ನಿರಾಶ್ರಿತರಾದವರು. ಅವರಿಗೆ ಕಿರುಕುಳ ನೀಡುತ್ತಿರುವುದು ಸರಿಯಲ್ಲ, ಕರ್ನಾಟಕ ರಕ್ಷಣಾ ವೇದಿಕೆ ಮೀನುಗಾರರ ಬೆಂಬಲಕ್ಕೆ ಇದೆ. ಮೀನುಗಾರರಿಗೆ ಕಿರುಕುಳ ಹೆಚ್ಚಾಗಿದೆ. ತೊಂದರೆಯಾದಾಗ ಹೇಳಿಕೊಂಡರೂ ಅದನ್ನು ಮೇಲಧಿಕಾರಿಗಳ ಗಮನಕ್ಕೆ ತರುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿಲ್ಲ ಎಂದು ಅವರು ವಿಷಾದಿಸಿದರು.
ನೌಕಾನೆಲೆ ಅಧಿಕಾರಿಗಳು ಮಾಧ್ಯಮಗಳ ಎದುರು ಮೀನುಗಾರರಿಗೆ ಯಾವುದೇ ಕಿರುಕುಳ ನೀಡುವುದಿಲ್ಲ ಎಂದು ಹೇಳಿಕೆ ನೀಡುತ್ತಾರೆ. ಆದರೆ ಸಾಕಷ್ಟುಬಾರಿ ಮೀನುಗಾರಿಕೆ ನಡೆಸುವ ವೇಳೆ ಆಕಸ್ಮಿಕವಾಗಿ ನೌಕಾನೆಲೆ ವ್ಯಾಪ್ತಿಯಲ್ಲಿ ಹೋದರೂ ಮೀನುಗಾರರ ಮೇಲೆ ಹಲ್ಲೆ ಮಾಡಿ ತೊಂದರೆ ನೀಡಿರುವ ಘಟನೆ ನಡೆದಿದೆ. ಹೀಗೆ ಮಾಡುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮೀನುಗಾರರು ಹಾಗೂ ನೌಕಾನೆಲೆಯೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.