ಮೈಸೂರು(ಡಿ.29): ಹನುಮ ಗುಲಾಮಗಿರಿಯ ಸಂಕೇತವಾಗಿದ್ದು, ಸಂಘ ಪರಿವಾರದವರು ಹನುಮ ಜಯಂತಿ ಮೂಲಕ ಅಂತಹ ಸಂಸ್ಕೃತಿ ದೊಡ್ಡ ಪ್ರಮಾಣದಲ್ಲಿ ಹುಟ್ಟು ಹಾಕಲು ಹೊರಟಿದ್ದಾರೆ ಎಂದು ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ.ಪಿ. ಮಹೇಶ್‌ ಚಂದ್ರಗುರು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನುಮ ಜಯಂತಿ ಕುರಿತಂತೆ ಸಾಂದರ್ಭಿಕವಾಗಿ ಮಾತನಾಡಿರುವುದಕ್ಕೆ ಬಿಜೆಪಿಯವರು ಮಾಡಿರುವ ಟೀಕೆಗೆ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಮ ಪ್ರಭುತ್ವದ ಸಂಕೇತವಾಗಿದ್ದರೆ, ಹನುಮ ಗುಲಾಮಗಿರಿ ಪ್ರತಿನಿಧಿಸುತ್ತಾನೆ. ಇನ್ನು ಹನುಮ ಜಯಂತಿ ಮೂಲಕ ಅಂತಹ ಸಂಸ್ಕೃತಿ ಸೃಷ್ಟಿಸುವುದು ಗೌಪ್ಯ ಕಾರ್ಯಸೂಚಿಯ ಗುರಿಯಾಗಿದೆ ಎಂದು ಟೀಕಿಸಿದರು.

ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿದ ಸಿ.ಟಿ.ರವಿ

ಸಿದ್ದರಾಮಯ್ಯ ಎಂದೂ ಕೃಷ್ಣ ಅಥವಾ ಹಿಂದೂ ವಿರೋಧಿಯಲ್ಲ. ಅವರು ಏಕಾದಶಿ ದಿನದಂದು ವಿಷ್ಣು ದೇವಾಲಯಕ್ಕೆ ಭೇಟಿ ನೀಡಿದ್ದು ಇದಕ್ಕೆ ಉದಾಹರಣೆಯಾಗಿದೆ. ಆದರೆ, ಅವರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವೂ ಆಗಿದೆ. ಸಿದ್ದರಾಮಯ್ಯ ಈ ನಾಡು ಕಂಡ ಅತ್ಯಂತ ಸಹೃದಯಿ ರಾಜಕಾರಣಿಯಾಗಿದ್ದು ಎಂದು ಸಹಾ ತತ್ವಗಳ ಜೊತೆಗೆ ರಾಜೀ ಮಾಡಿಕೊಂಡವರಲ್ಲ. ಆದರೂ ದಲಿತರಿಂದ ಅವರನ್ನು ದೂರ ಮಾಡಲು ಖರ್ಗೆ, ಪರಮೇಶ್ವರ್‌ ವಿಚಾರ ಎತ್ತಿದರೆ, ಕುರುಬರಿಂದ ಅವರನ್ನು ದೂರ ಮಾಡಲು ಎಸ್‌ಟಿ ಸೇರ್ಪಡೆ ವಿಷಯ ಎತ್ತುವ ಹುನ್ನಾರ ನಡೆದಿದೆ ಎಂದು ಅವರು ಆರೋಪಿಸಿದರು.

ಈ ಮಸಲತ್ತು ನಡೆಯುವುದಿಲ್ಲ. ಈ ನಡುವೆ ಅವರ ವಿರುದ್ಧ ಯಾರು ಏನೇ ಟೀಕೆ ಮಾಡಿದರೂ ಸಂವಿಧಾನಿಕವಾಗಿ ಟೀಕೆ ಮಾಡಬೇಕೇ ಹೊರತು ಅದನ್ನು ಹೊರತು ಪಡಿಸಿದ ಟೀಕೆ ಸಲ್ಲ ಎಂದು ಅವರು ಖಂಡಿಸಿದರು.