ರಾಜಧಾನಿಯ ಪ್ರಸಿದ್ದ ದೇವಾಲಯಗಳಲ್ಲೊಂದಾದ ಜಯನಗರ 9ನೇ ಬ್ಲಾಕ್ ನಲ್ಲಿರುವ ರಾಗೀಗುಡ್ಡದ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ. 50ನೇ ವರ್ಷದ ಪ್ರಯುಕ್ತ ಮತ್ತು ವಾರ್ಷಿಕವಾಗಿ ಅದ್ದೂರಿಯಾಗಿ ಹನುಮ ಜಯಂತಿಯ ಜೊತೆಗೆ ಈ ಬಾರಿ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬೆಂಗಳೂರು, [ಡಿ.15]: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಪುರಾತನ ದೇವಾಲಯಗಳ ಪೈಕಿ ರಾಗೀಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನ ಕೂಡಾ ಒಂದು.

 ಬೆಟ್ಟದ ಮೇಲೆ ರಾಗಿದಿಬ್ಬದಿಂದ ಉದ್ಭವಿಸಿದ್ದರಿಂದ ಇದಕ್ಕೆ ರಾಗೀಗುಡ್ಡ ಎನ್ನಲಾಗುತ್ತದೆ. ಪ್ರತಿ ಶನಿವಾರ ಆಂಜನೇಯನಿಗೆ ವಿಶೇಷವಾದ ದಿನವಾಗಿರುವುದರಿಂದ ರಾಗೀಗುಡ್ಡದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ.

ಈ ಹಿನ್ನಲೆಯಲ್ಲಿ ಬೆಂಗಳೂರಿನ ಅಕ್ಕಪಕ್ಕದ ಏರಿಯಾದ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಮನದ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಹಾಗಾಗಿ ಈ ದೇವಸ್ಥಾನ ಪ್ರಸಿದ್ಧಿ ಪಡೆದುಕೊಂಡಿದೆ. 

ಇನ್ನು ಮುಖ್ಯವಾಗಿ ರಾಗೀಗುಡ್ಡದಲ್ಲಿ ಹನುಮ ಜಯಂತಿಯ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದ್ದು, ಡಿ. 23 ರ ವರೆಗೆ ಉತ್ಸವ ನಡೆಯಲಿದೆ. 50ನೇ ವರ್ಷದ ಪ್ರಯುಕ್ತ ಮತ್ತು ವಾರ್ಷಿಕವಾಗಿ ಅದ್ದೂರಿಯಾಗಿ ನಡೆಯುವ ಹನುಮಜ್ಜಯಂತಿಯ ಜೊತೆಗೆ ಈ ಬಾರಿ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈಗಾಗಲೇ ಬುಧವಾರ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ್ವರತೀರ್ಥ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಚಾಲನೆ ದೊರೆತಿದ್ದು, ಡಿ.23ರ ವರೆಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಹೀಗಾಗಿ ನೀವೂ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ಪ್ರಸನ್ನಾಂಜನೇಯ ಕೃಪೆಗೆ ಪಾತ್ರರಾಗಿ. 

 ಎಲ್ಲಿದೆ ಈ ದೇವಾಲಯ? 
ರಾಗೀಗುಡ್ಡ ದೇವಸ್ಥಾನವೆಂದೇ ಪ್ರಸಿದ್ಧವಾಗಿರುವ ರಾಗಿಗುಡ್ಡ ಪ್ರಸನ್ನಾಂಜನೇಯ ದೇವಾಲಯವು ಬೆಂಗಳೂರಿನ ಜಯನಗರ 9 ನೇಯ ಬ್ಲಾಕ್ ನಲ್ಲಿರುವ ಪುಟ್ಟ ಬೆಟ್ಟದ ಮೇಲೆ ನೆಲೆಸಿದೆ.